AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Donald Trump: ಅಮೆರಿಕ ಅಧ್ಯಕ್ಷರಾಗಿದ್ದಾಗ ವೇತನವೇ ಪಡೆಯದಿದ್ದ ಡೊನಾಲ್ಡ್ ಟ್ರಂಪ್ ಈಗ ಪೆನ್ಷನ್ ತೆಗೆದುಕೊಂಡರಾ?

ಕಳೆದ ಜನವರಿಯಲ್ಲಿ ಜೋ ಬೈಡನ್ ಅಧ್ಯಕ್ಷ ಹುದ್ದೆಗೆ ಆಯಕೆಯಾದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ, 200 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚು ಆಸ್ತಿ ಇರುವ ಡೊನಾಲ್ಡ್ 65,600 ಅಮೆರಿಕನ್ ಡಾಲರ್ ಪೆನ್ಷನ್ ಪಡೆದಿದ್ದಾರೆ.

Donald Trump: ಅಮೆರಿಕ ಅಧ್ಯಕ್ಷರಾಗಿದ್ದಾಗ ವೇತನವೇ ಪಡೆಯದಿದ್ದ ಡೊನಾಲ್ಡ್ ಟ್ರಂಪ್ ಈಗ ಪೆನ್ಷನ್ ತೆಗೆದುಕೊಂಡರಾ?
ಡೊನಾಲ್ಡ್​ ಟ್ರಂಪ್ (ಸಂಗ್ರಹ ಚಿತ್ರ)
Srinivas Mata
|

Updated on: May 18, 2021 | 5:21 PM

Share

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್​ಗೂ ಮುಂಚೆ ಇದ್ದವರು ಯಾರು? ಇನ್ಯಾರು ಡೊನಾಲ್ಡ್ ಟ್ರಂಪ್. ಅವರ ನಿವ್ವಳ ಆಸ್ತಿ ಎಷ್ಟು ಗೊತ್ತಾ? ಫೊರ್ಬ್ಸ್ ಪ್ರಕಾರ, 240 ಕೋಟಿ ಅಮೆರಿಕನ್ ಡಾಲರ್. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 16 ಸಾವಿರ ಕೋಟಿಗೂ ಹೆಚ್ಚಾಗುತ್ತದೆ. ಇಷ್ಟು ಆಸ್ತಿ ಇರುವ ಡೊನಾಲ್ಡ್ ಟ್ರಂಪ್, ಈಗಿನ ಅಧ್ಯಕ್ಷ ಜೋ ಬೈಡನ್ ಗೆದ್ದ ನಂತರ 65,000 ಅಮೆರಿಕನ್ ಡಾಲರ್​ಗೂ ಹೆಚ್ಚು ಮೊತ್ತವನ್ನು ಪೆನ್ಷನ್ ಆಗಿ ಪಡೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ಬಿಜಿನೆಸ್ ಇನ್​ಸೈಡರ್ ವರದಿ ಪ್ರಕಾರ, ಜನರಲ್ ಸರ್ವೀಸ್ ಆಡಳಿತದ ವಕ್ತಾರರು ಈ ಬಗ್ಗೆ ಖಾತ್ರಿ ಪಡಿಸಿದ್ದಾರೆ. ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಕಚೇರಿ ತೊರೆದ ಮೇಲೆ ಡೊನಾಲ್ಡ್ ಟ್ರಂಪ್ 65,600 ಯುಎಸ್​ಡಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ಈ ವರದಿ ಬಗ್ಗೆ ಪ್ರತ್ಯೇಕವಾಗಿ ಪರಿಶೀಲನೆ ನಡೆಸಿಲ್ಲ ಎಂದು ಈ ಕುರಿತು ಸುದ್ದಿ ಪ್ರಕಟಿಸಿರುವ ಮನಿಕಂಟ್ರೋಲ್ ಹೇಳಿದೆ. ಇನ್ನು ಈ ಬಗ್ಗೆ ಟ್ರಂಪ್ ವಕ್ತಾರರಾದ ಜೇಸನ್ ಮಿಲ್ಲರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪೆನ್ಷನ್ ಮೊತ್ತವನ್ನು ಟ್ರಂಪ್ ಪಡೆದಿದ್ದಾರೋ ಅಥವಾ ದಾನ ನೀಡಿದ್ದಾರೋ ಎಂಬ ಬಗ್ಗೆಯೇ ಸ್ಪಷ್ಟನೆ ಸಿಕ್ಕಿಲ್ಲ. ಅಂದ ಹಾಗೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದರಲ್ಲ, ಆಗ ಅವರು ವೇತನ ಪಡೆಯುತ್ತಿರಲಿಲ್ಲ. ಅದನ್ನು ನ್ಯಾಷನಲ್ ಬ್ಯಾಂಕ್ ಸರ್ವೀಸ್​ನಂಥ ಸಂಸ್ಥೆಗಳಿಗೆ ದಾನ ಮಾಡುತ್ತಿದ್ದರು. ಚುನಾವಣೆ ಪ್ರಚಾರದ ವೇಳೆ ಕೂಡ, ತೆರಿಗೆಪಾವತಿದಾರರ ಹಣದಲ್ಲಿ ಸಂಬಳ ಪಡೆಯುವುದಿಲ್ಲ ಎಂದು ಮಾತು ಕೊಟ್ಟಿದ್ದರು.

ಅಮೆರಿಕದ ಸಂವಿಧಾನದ ಪ್ರಕಾರ, ಮಾಜಿ ಅಧ್ಯಕ್ಷರು ಪೆನ್ಷನ್ ಪಡೆಯುವುದಕ್ಕೆ ಅರ್ಹರು. ಆದರೆ ಅದನ್ನೇ ಪಡೆಯಲೇಬೇಕು ಅಂತೇನೂ ಇಲ್ಲ ಎಂದು ವರದಿ ತಿಳಿಸಿದೆ. ಈ ವೇತನವು ಸಂಪುಟದ ಕಾರ್ಯದರ್ಶಿಗೆ ಸಂಬಳ ಎಷ್ಟಿರುತ್ತದೋ ಅಷ್ಟಕ್ಕೆ ಸಮನಾಗಿರುತ್ತದೆ. 2021ರಲ್ಲಿ ಈ ಮೊತ್ತ 2,21,400 ಅಮೆರಿಕನ್ ಡಾಲರ್ ಇದೆ. ಡೊನಾಲ್ಡ್ ಟ್ರಂಪ್​ಗೆ ವಾರ್ಷಿಕವಾಗಿ 2,21,400 ಯುಎಸ್​ಡಿ ಪೆನ್ಷನ್ ಬರುತ್ತದೆ. ಇದರ ಜತೆಗೆ ಸಿಬ್ಬಂದಿಗೆ ವೇತನ ನೀಡಲು, ಕಚೇರಿ ಸ್ಥಳ, ಪ್ರಯಾಣ ಭತ್ಯೆ ಹೀಗೆ 1 ಮಿಲಿಯನ್ ಡಾಲರ್ ಮೌಲ್ಯದ ಮೊತ್ತ ಬರುತ್ತದೆ. ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯು ಬುಷ್, ಬರಾಕ್ ಒಬಾಮ ಇವರಿಗೆಲ್ಲ ಕಚೇರಿ ಬಾಡಿಗೆ ಅಂತ ತಲಾ 5 ಲಕ್ಷ ಯುಎಸ್​ಡಿಗೂ ಹೆಚ್ಚು ಕವರ್​ ಆಗಿದೆ ಎಂದು ತಿಳಿಸಲಾಗಿದೆ. ​

ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ 2 ಬಾರಿ ಮಹಾಭಿಯೋಗಕ್ಕೆ ಗುರಿಯಾದ ಡೊನಾಲ್ಡ್​ ಟ್ರಂಪ್

ಇದನ್ನೂ ಓದಿ: Donald Trump: ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧ ಎತ್ತಿ ಹಿಡಿದ ಫೇಸ್​ಬುಕ್ ಮೇಲ್ವಿಚಾರಣೆ ಮಂಡಳಿ

(US former president Donald Trump received 65,600 USD as pension after Joe Biden victory in January 2021, according to report)