ವಾಟ್ಸ್​ಆ್ಯಪ್​, ವಿಪಿಎನ್​ ಬಳಸಿದ್ದಕ್ಕಾಗಿ ಮುಸ್ಲಿಂ ಮಹಿಳೆಯರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದ ಚೀನಾ ಪೊಲೀಸರು

| Updated By: Lakshmi Hegde

Updated on: Oct 12, 2021 | 5:53 PM

ಇನ್ನು ಝೋ ಅವರ ಜತೆ ಇನ್ನೂ 11 ಮುಸ್ಲಿಂ ಮಹಿಳೆಯರು ಬಂಧಿತರಾಗಿದ್ದರು. ಅವರನ್ನೆಲ್ಲ, ಚೀನಾದ ಇಂಟರ್​​ನೆಟ್​ ಭದ್ರತಾ ಕಾನೂನು ಉಲ್ಲಂಘನೆ ಮಾಡಿದವರು ಎಂದೇ ಗುರುತಿಸಲಾಗಿತ್ತು.

ವಾಟ್ಸ್​ಆ್ಯಪ್​, ವಿಪಿಎನ್​ ಬಳಸಿದ್ದಕ್ಕಾಗಿ ಮುಸ್ಲಿಂ ಮಹಿಳೆಯರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದ ಚೀನಾ ಪೊಲೀಸರು
WhatsApp
Follow us on

ಚೀನಾದ ಮುಸ್ಲಿಂ ಜನಾಂಗಕ್ಕೆ ಸೇರಿದ ಕೆಲವು ಮಹಿಳೆ (Muslim Women)ಯರನ್ನು ಅಲ್ಲಿನ ಪೊಲೀಸರು ಬಂಧಿಸಿ ತಿಂಗಳುಕಾಲ ಜೈಲಿನಲ್ಲಿ ಇಟ್ಟಿದ್ದರು. ಈಗಲೂ ಅಲ್ಲಲ್ಲಿ ಇದು ನಡೆಯುತ್ತಿದೆ ಎಂದು ಇನ್​ ದಿ ಕ್ಯಾಂಪ್ಸ್​: ಚೀನಾದ ಹೈಟೆಕ್​ ಪೆನಲ್​ ಕಾಲನಿ ಎಂಬ ಪುಸ್ತಕ ಪ್ರಕಟಿಸಿದೆ. ಅಷ್ಟಕ್ಕೂ ಈ ಯುವತಿಯರು ಬಂಧನವಾಗಿದ್ದು, ಸೈಬರ್​​ ಪೂರ್ವ ಅಪರಾಧಗಳ ಆರೋಪ (Cyber Pre-Crimes) ಮೇರೆಗೆ ಎಂದೂ ಹೇಳಲಾಗಿದೆ.  ಹಾಗೇ, ವೇರಾ ಝೋ ಎಂಬ ಮಹಿಳೆಯ ತನಗೆ ಆದ ಅನುಭವಗಳ ಬಗ್ಗೆ ಹಂಚಿಕೊಂಡಿದ್ದನ್ನೂ ಪ್ರಕಟಿಸಲಾಗಿದೆ.

ವೇರಾ ಝೋ ಯುಎಸ್​ನ ಖಾಯಂ ನಿವಾಸಿಯಾಗಿದ್ದಾಳೆ. ವಾಷಿಂಗ್ಟನ್​ ಯೂನಿರ್ವಸಿಟಿಯಲ್ಲಿ ಓದುತ್ತಿದ್ದಳು. ಇತ್ತೀಚೆಗೆ ಚೀನಾದ ಕ್ಸಿನ್​​ ಜಿಯಾಂಗ್​​ನಲ್ಲಿರುವ ತನ್ನ ತಂದೆ ಮತ್ತು ಸ್ನೇಹಿತನನ್ನು ನೋಡಲು ಬಂದಿದ್ದಳು. ಆದರೆ ಆಕೆಗೆ ಇಲ್ಲಿಂದಲೇ ತನ್ನ ಹೋಂ ವರ್ಕ್​​ನ್ನು ತಾನು ಓದುತ್ತಿದ್ದ ವಾಷಿಂಗ್ಟನ್​ ವಿಶ್ವವಿದ್ಯಾಲಯಕ್ಕೆ ಕಳಿಸಬೇಕಿತ್ತು. ಅದಕ್ಕಾಗಿ ಆಕೆ ವರ್ಚುವಲ್ ಖಾಸಗಿ ನೆಟ್ವರ್ಕ್ (VPN) ಬಳಸಿ ತನ್ನ ವಿಶ್ವವಿದ್ಯಾಲಯದ ಜಿಮೇಲ್​ ಲಾಗಿನ್​ ಆಗಿದ್ದಾಳೆ. ಹೀಗೆ ವಿಪಿಎನ್​ ಡೌನ್​ಲೋಡ್​ ಮಾಡಿ ಬಳಸಿದ್ದು ಸೈಬರ್​ ಪೂರ್ವ ಅಪರಾಧ(Cyber Pre-Crimes)ಗಳ ಸಾಲಿಗೆ ಸೇರುತ್ತದೆ ಎಂದು ಚೀನಾ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಅಷ್ಟಲ್ಲದೆ,  ಆಕೆಯನ್ನು ಚೀನಾದ ಮರು-ಶಿಕ್ಷಣ ತರಗತಿಗೂ ಕಳಿಸಿದ್ದಾರೆ. ಈ ಹೊತ್ತಲ್ಲಿ ಝೋ, ಯುಎಸ್​ ಶಿಕ್ಷಣ ಇಲಾಖೆಗೆ ಬರೆದ ಪತ್ರವನ್ನು ಆ ಪುಸ್ತಕ ಪ್ರಕಟಿಸಿದೆ.

ವಿಪಿಎನ್​ ಡೌನ್​ಲೋಡ್​ ಮಾಡಿದ್ದಕ್ಕಾಗಿ ನಾನು ಚೀನಾದಲ್ಲಿ ಬಂಧಿತಳಾಗಿದ್ದೇನೆ. ಅವರೀಗ ನನ್ನನ್ನು ಇಲ್ಲಿನ ಮರು ಶಿಕ್ಷಣ ಕ್ಲಾಸ್​ಗೆ ಕಳಿಸುವುದಾಗಿ ಹೇಳಿದ್ದಾರೆ. ಅದಕ್ಕಾಗಿ ನಾನು ಇಲ್ಲಿನ ಸಮವಸ್ತ್ರವನ್ನೇ ತೊಡಬೇಕಿದೆ. ನನ್ನನ್ನು ಒಂದು ಸ್ಥಳದಲ್ಲಿ ಕೂಡಿ ಹಾಕಿದ್ದು, ಹೊರಗಿನಿಂದ ಬಾಗಿಲು ಹಾಕಲಾಗಿದೆ ಎಂದು  ಟಿಪ್ಪಣಿಯಲ್ಲಿ ಬರೆದಿದ್ದಳು.  ಅಂದಹಾಗೆ ಈಕೆ ಬಂಧಿತಳಾಗಿದ್ದು 2017ರಲ್ಲಿ. ಆರು ತಿಂಗಳ ಕಾಲದ ಆಕೆ ಜೈಲಿನಲ್ಲಿಯೇ ಇದ್ದಳು. ಹೊಸವರ್ಷ, ಕ್ರಿಸ್​ಮಸ್​ ಎಲ್ಲವನ್ನೂ ಮರು-ಶಿಕ್ಷಣ ಶಿಬಿರದಲ್ಲಿಯೇ ಕಳೆದಿದ್ದಾಳೆ ಎನ್ನಲಾಗಿದೆ.

ಇನ್ನು ಝೋ ಅವರ ಜತೆ ಇನ್ನೂ 11 ಮುಸ್ಲಿಂ ಮಹಿಳೆಯರು ಬಂಧಿತರಾಗಿದ್ದರು. ಅವರನ್ನೆಲ್ಲ, ಚೀನಾದ ಇಂಟರ್​​ನೆಟ್​ ಭದ್ರತಾ ಕಾನೂನು ಉಲ್ಲಂಘನೆ ಮಾಡಿದವರು ಎಂದೇ ಗುರುತಿಸಲಾಗಿತ್ತು. ಅಂದರೆ 2017ರ ಚೀನಾದ ಇಂಟರ್​ನೆಟ್​ ಭದ್ರತೆ ನಿಯಮದ ಪ್ರಕಾರ ಇಂಟರ್​​ನೆಟ್​ ಆಪರೇಟ್​ ಮಾಡುವವರು ತಮ್ಮ ವೈಯಕ್ತಿಕ ಡೇಟಾವನ್ನು ಚೀನಾದ ಅಧಿಕಾರಿಗಳೊಟ್ಟಿಗೆ ಹಂಚಿಕೊಳ್ಳಬೇಕು. ಆದರೆ ಈ ಮುಸ್ಲಿಂ ಮಹಿಳೆಯರು ಅದನ್ನು ಮಾಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಯಿತು ಎಂದು ಪುಸ್ತಕ ಉಲ್ಲೇಖಿಸಿದೆ.  ಹೀಗೆ ಬಂಧಿತರಾದ ಮತ್ತೊಬ್ಬ ಮಹಿಳೆ ಬಿಚ್ಚಿಟ್ಟ ಕಾರಣ ಇನ್ನೂ ವಿಚಿತ್ರವಾಗಿದೆ. ಕಜಕಿಸ್ತಾನದಲ್ಲಿರುವ ಸಹೋದ್ಯೋಗಿಯೊಟ್ಟಿಗೆ ಮಾತುಕತೆ ನಡೆಸಲು ನಾನು ವಾಟ್ಸ್​ಆ್ಯಪ್​ ಡೌನ್​ ಲೋಡ್ ಮಾಡಿದ್ದೆ. ಅಷ್ಟಕ್ಕೇ ನನ್ನನ್ನು ಬಂಧಿಸಲಾಗಿತ್ತು ಎಂದು ಹೇಳಿದ್ದಾರೆ.  ಇನ್ನೊಬ್ಬಳು ಸ್ಮಾರ್ಟ್​ಫೋನ್​ ಮಾರಾಟಗಾರಳನ್ನು ಅರೆಸ್ಟ್ ಮಾಡಲಾಗಿತ್ತು. ಆಕೆ ಹಲವು ಗ್ರಾಹಕರಿಗೆ ಅವರ ಸಿಮ್​ ಕಾರ್ಡ್ ಸೆಟ್​ ಮಾಡಿಕೊಳ್ಳಲು, ತನ್ನ ಐಡಿ ಕೊಟ್ಟಿದ್ದಳು. ಇದೇ ಕಾರಣಕ್ಕೆ ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು ಎಂದು ಪುಸ್ತಕ ಹೇಳಿದೆ. ಇದೆಲ್ಲ ಎರಡು ಮೂರುವರ್ಷಗಳ ಹಿಂದಿನ ಘಟನೆಯಾಗಿದ್ದರೂ, ಚೀನಾದ ಡಿಜಿಟಲ್​ ವ್ಯವಸ್ಥೆಯನ್ನು ಬಿಚ್ಚಿಡುವ ಅಂಶಗಳಾಗಿವೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: Murder: ಅಪ್ಪ-ಅಮ್ಮನನ್ನು ಕೊಚ್ಚಿ ಕೊಂದಿದ್ದ ವ್ಯಕ್ತಿಗೆ 28 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ ಪ್ರಕಟ

Ajay Devgan: ಶಾರ್ಕ್​ಗಳಿರುವ ಸಾಗರದಲ್ಲಿ ಅಜಯ್ ದೇವಗನ್ ಪಯಣ; ಮೈ ನವಿರೇಳಿಸುವ ಪ್ರೋಮೋ ನೋಡಿ