ವಿಜ್ಞಾನ ಜಗತ್ತಿನಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿವೆ. ಆಗಸದಲ್ಲಿ ಕಾಣುವ ಚಂದ್ರನ ಮೇಲೊಂದು ಮನೆ ಕಟ್ಟಬೇಕೆಂಬುದು ಇಲ್ಲಿಯವರೆಗೂ ಉಪಮೆಯಷ್ಟೇ ಆಗಿತ್ತು. ಆದರೆ, ಇನ್ನುಮುಂದೆ ಅದು ಅಸಾಧ್ಯವೇನಲ್ಲ. ಏಕೆಂದರೆ, ನಾಸಾದಿಂದ (NASA) ಚಂದ್ರಲೋಕದಲ್ಲಿ ಮನೆ ಕಟ್ಟಲು ಕಾಂಟ್ರಾಕ್ಟ್ ನೀಡಲಾಗಿದ್ದು, 6,964 ಕೋಟಿ ರೂ.ಗೆ ನಾರ್ತ್ರೋಪ್ ಗ್ರುಮ್ಮನ್ ಕಾರ್ಪ್ (NOC.N) ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಅಮೆರಿಕದ ಬಾಹ್ಯಾಕಾಶ ಏಜೆನ್ಸಿಯಾಗಿರುವ ನಾಸಾದ ವಿಜ್ಞಾನಿಗಳಿಗೆ ಚಂದ್ರನ ಮೇಲೆ ವಾಸ್ತವ್ಯ ಹೂಡಲು ಸಹಕಾರಿಯಾಗುವಂತೆ ವಸತಿ ವ್ಯವಸ್ಥೆಯನ್ನು ಪ್ಲಾನ್ ಮಾಡುವ ಜವಾಬ್ದಾರಿಯನ್ನು ಈ ಕಂಪನಿ ಹೊತ್ತಿದೆ.
ನಾಸಾದ ಗಗನಯಾತ್ರಿಗಳು ಚಂದ್ರನ ಮೇಲೆಯೇ ವಾಸ್ತವ್ಯ ಹೂಡಿ, ಸಂಶೋಧನೆ ನಡೆಸಲು ಅನುಕೂಲವಾಗಬೇಕೆಂಬ ಕಾರಣಕ್ಕೆ ನಾಸಾ ಈ ಗುತ್ತಿಗೆ ನೀಡಿದೆ. ಚಂದ್ರಲೋಕದಲ್ಲಿ ಮನುಷ್ಯ ವಾಸಿಸಲು ಯೋಗ್ಯವಾದ ವಾತಾವರಣವಿದೆ ಎಂಬುದನ್ನು ಈಗಾಗಲೇ ಪತ್ತೆಹಚ್ಚಲಾಗಿದೆ. ಹೀಗಾಗಿ ನಾರ್ತ್ರೋಪ್ ಕಂಪನಿ ಚಂದ್ರನ ಮೇಲೆ ವಾಸಕ್ಕೆ ಯೋಗ್ಯವಾದ ಸಣ್ಣದಾದ ಮನೆಯ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
ಕೇವಲ ಅಮೆರಿಕ ಮಾತ್ರವಲ್ಲ ಚೀನಾ ದೇಶ ಕೂಡ ಚಂದ್ರನ ದಕ್ಷಿಣ ಭಾಗದಲ್ಲಿ ಮನೆ ನಿರ್ಮಿಸಲು ಯೋಜನೆ ರೂಪಿಸುತ್ತಿದೆ. 2030ರ ವೇಳೆಗೆ ಗುರು ಗ್ರಹದ ಮೇಲೆ ರೊಬೋಟಿಕ್ ದಂಡಯಾತ್ರೆ ನಡೆಸಲು ಚೀನಾ ಚಿಂತನೆ ನಡೆಸಿದೆ. ಜಗತ್ತಿನಾದ್ಯಂತ ವೈಜ್ಞಾನಿಕ ಜಗತ್ತಿನಲ್ಲಿ ಹೊಸ ರೀತಿಯ ಸಂಶೋಧನೆಗಳು ನಡೆಯುತ್ತಿವೆ. ಇದಕ್ಕೆ ನಾಸಾ ಕೂಡ ಕೈಜೋಡಿಸಿದ್ದು, ವಿಜ್ಞಾನ ಜಗತ್ತಿನ ಸಂಶೋಧನೆಗೆ ಗೇಟ್ವೇ ನಿರ್ಮಿಸಲು ನಾಸಾ ಮತ್ತು ನಾಸಾದ ಕಮರ್ಷಿಯಲ್ ಹಾಗೂ ಇಂಟರ್ನ್ಯಾಷನಲ್ ಪಾರ್ಟನರ್ಗಳು ಮುಂದಾಗಿದ್ದಾರೆ.
ಚಂದ್ರನ ಬಗ್ಗೆ ಸಂಶೋಧನೆ ನಡೆಸಲು ಜಗತ್ತಿನ 8 ದೇಶಗಳು ಈಗಾಗಲೇ ನಾಸಾದ ಜೊತೆಗೆ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿವೆ. ಚಂದ್ರನ ಮೇಲೆ ದೀರ್ಘಾವಧಿಗೆ ಮನೆಗಳನ್ನು ನಿರ್ಮಿಸಲು ಅಗತ್ಯವಿರುವ ಕಾನೂನು ಮತ್ತು ಯೋಜನೆಯನ್ನು ರೂಪಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ಇದೀಗ ನಾಸಾದಿಂದ ಚಂದ್ರನ ಮೇಲೆ ಮನೆಯನ್ನು ನಿರ್ಮಿಸಲು ಕಂಟ್ರಾಕ್ಟ್ ಕೂಡ ನೀಡಲಾಗಿದೆ.
ಇದನ್ನೂ ಓದಿ: ಚಂದ್ರನತ್ತ ಪುನಃ NASA ಚಿತ್ತ: ಗಗನಯಾತ್ರಿ ತಂಡಕ್ಕೆ ಭಾರತೀಯ ಮೂಲದ ವ್ಯಕ್ತಿ ಆಯ್ಕೆ
ಇದನ್ನೂ ಓದಿ: Perseverance Rover | ಮಂಗಳನ ಅಂಗಳದಲ್ಲಿ ಇಳಿದ 24 ಗಂಟೆಗಳಲ್ಲೇ ಚಿತ್ರ ಕಳಿಸಲು ಶುರು ಮಾಡಿದ NASA ನೌಕೆ