ಇಂದು ಬಾಹ್ಯಾಕಾಶಕ್ಕೆ ಹಾರಲಿರುವ ರಿಚರ್ಡ್ ಬ್ರಾನ್ಸನ್ ಟೀಂನಲ್ಲಿದ್ದಾರೆ ಭಾರತೀಯ ಮೂಲದ ಸಿರೀಶಾ ಬಾಂದ್ಲಾ; ಕನಸಿನ ಸಾಕಾರಕ್ಕೆ ಕ್ಷಣಗಣನೆ
Richard Branson: ಉದ್ಯಮಿ ರಿಚರ್ಡ್ ಬ್ರಾನ್ಸನ್ ಜತೆ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಮಹಿಳೆ ಸಿರೀಶಾ ಬಾಂದ್ಲಾ ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು. ಬೆಳೆದಿದ್ದೆಲ್ಲ ಟೆಕ್ಸಾಸ್ನ ಹೂಸ್ಟನ್ನಲ್ಲಿ.
ಬ್ರಿಟನ್ನ ಕೋಟ್ಯಧಿಪತಿ, ಉದ್ಯಮಿ ರಿಚರ್ಡ್ ಬ್ರಾನ್ಸನ್ (Richard Branson) ರ ಬಾಹ್ಯಾಕಾಶ ಪ್ರವಾಸದ ಕನಸು ಇಂದು ಈಡೇರಲಿದೆ. ಅವರೇ ಸಂಸ್ಥಾಪಿಸಿದ ವರ್ಜಿನ್ ಗ್ಯಾಲಕ್ಟಿಕ್( Virgin Galactic) ಸ್ಪೇಸ್ಫ್ಲೈಟ್ ಕಂಪನಿಯೇ ತಯಾರಿಸಿದ ವಿಎಸ್ಎಸ್ ಯುನಿಟಿ (VSS Unity) ಗಗನ ನೌಕೆಯಲ್ಲಿ ಇಂದು ರಿಚರ್ಡ್ ಬ್ರಾನ್ಸನ್ ಸೇರಿ ಒಟ್ಟು ಆರು ಮಂದಿ ಬಾಹ್ಯಾಕಾಶವನ್ನು ಏರಲಿದ್ದಾರೆ. ವಿಎಸ್ಎಸ್ ಯುನಿಟಿ ಒಂದು ಪ್ರಯಾಣಿಕರ ರಾಕೆಟ್. ಬಾಹ್ಯಾಕಾಶ ಪ್ರವಾಸಕ್ಕಾಗಿಯೇ ವರ್ಜಿನ್ ಗ್ಯಾಲಕ್ಟಿಕ್ ಕಂಪನಿಯಿಂದ ವಿನ್ಯಾಸಗೊಳಿಸಲ್ಪಟ್ಟ, ಸಬೋರ್ಬಿಟಲ್ ಬಾಹ್ಯಾಕಾಶ ರಾಕೆಟ್ ಆಗಿದೆ. ಇದರಲ್ಲಿ ಇಂದು ರಿಚರ್ಡ್ ಬ್ರಾನ್ಸನ್ ಜತೆ ಪ್ರಯಾಣಿಸುತ್ತಿರುವವರಲ್ಲಿ ಭಾರತ ಮೂಲದ ಗಗನಯಾತ್ರಿ ಸಿರೀಶಾ ಬಾಂದ್ಲಾ ಕೂಡ ಇರುವುದು ಹೆಮ್ಮೆಯ ಸಂಗತಿಯಾಗಿದೆ.
ರಿಚರ್ಡ್ ಬ್ರಾನ್ಸನ್ರ ವಿಎಸ್ಎಸ್ ಯುನಿಟಿ ಮಿಶನ್ನ್ನು ನೇರಪ್ರಸಾರದಲ್ಲಿ ನೋಡಲು ಅವಕಾಶ ಇದೆ ಎಂದು ವರ್ಜಿನ್ ಗ್ಯಾಲಕ್ಟಿಕ್ ಟ್ವೀಟ್ ಮಾಡಿದೆ. ಅದರ ಅನ್ವಯ ಭಾರತೀಯರು ವರ್ಜಿನ್ ಗ್ಯಾಲಕ್ಟಿಕ್ ಕಂಪನಿಯ ವೆಬ್ಸೈಟ್ ಮತ್ತು ಯೂಟ್ಯೂಬ್ ಚಾನಲ್ನಲ್ಲಿ ಸಂಜೆ 6.30ರಿಂದ ಈ ಗಗನಯಾತ್ರೆಯನ್ನು ವೀಕ್ಷಿಸಬಹುದು. ವಿಎಸ್ಎಸ್ ಯುನಿಟಿ ಉಡಾವಣೆಗೊಳ್ಳುವ ಹೊತ್ತಲ್ಲಿ ಅದರ ಇಬ್ಬರು ಡೇವ್ ಮ್ಯಾಕೆ ಮತ್ತು ಮೈಕೆಲ್ ಮಸೂಚಿ ರಾಕೆಟ್ ಎಂಜಿನ್ ಸ್ಟಾರ್ಟ್ ಮಾಡಲಿದ್ದಾರೆ. ನಾನು ಹಿಂತಿರುಗಿದ ನಂತರ ಅನೇಕ ರೋಮಾಂಚನಕಾರಿ ವಿಚಾರಗಳನ್ನು ತಿಳಿಸುತ್ತೇನೆ. ಆ ಬಗ್ಗೆ ಈಗಲೇ ಉತ್ಸುಕನಾಗಿದ್ದೇನೆ ಮತ್ತು ಗಗನಯಾತ್ರೆ ಮಾಡಲು ಉತ್ಸುಕರಾಗಿರುವ ಹೆಚ್ಚೆಚ್ಚು ಜನರಿಗೆ ಅವಕಾಶ ನೀಡುತ್ತೇನೆ ಎಂದು ರಿಚರ್ಡ್ ಬ್ರಾನ್ಸನ್ ಭರವಸೆ ನೀಡಿದ್ದಾರೆ.
“We are here for something bigger than ourselves. The ultimate dream is to one day have space travel for everyone.” – Chief Astronaut Instructor Beth Moses. Meet the @VirginGalactic Mission Specialists who will be in the cabin with me for our upcoming spaceflight #Unity22 pic.twitter.com/nkCYBx7Vm5
— Richard Branson (@richardbranson) July 5, 2021
ವಿಎಸ್ಎಸ್ ಯುನಿಟಿ ಒಂದು ಬಿಳಿಬಣ್ಣದ ಬಾಹ್ಯಾಕಾಶ ನೌಕೆಯಾಗಿದ್ದು, ಅವಳಿ ಫ್ಯೂಸ್ಲೇಜ್ ಕ್ಯಾರಿಯರ್ ಜೆಟ್ನಿಂದ ತಳ್ಳಲ್ಪಟ್ಟು ಮೇಲಕ್ಕೆ ಚಿಮ್ಮಲಿದೆ. ಈ ಜೆಟ್ಗೆ VMS Eve (ರಿಚರ್ಡ್ ಬ್ರಾನ್ಸನ್ ತಾಯಿ ಹೆಸರು) ಎಂದು ನಾಮಕರಣ ಮಾಡಲಾಗಿದೆ. ವಿಎಸ್ಎಸ್ ನೌಕೆ, ಭೂಮಿಯ ವಾತಾವರಣದ ಹೊರಗಿನ ಅಂಚಿನ ಹಿಂದೆ ಲಂಬವಾದ ಆರೋಹಣದಲ್ಲಿ ಸುಮಾರು 50 ಸಾವಿರ ಅಡಿ ಎತ್ತರದವರೆಗೂ ಈ VMS Eve ಫ್ಲ್ಯೂಸೇಜ್ ಕ್ಯಾರಿಯರ್ ಜೆಟ್ನಿಂದಲೇ ಮುಂದೂಡಲ್ಪಡಲಿದೆ. ನ್ಯೂ ಮೆಕ್ಸಿಕೊ ಮರುಭೂಮಿಗಿಂತ 89 ಕಿಮೀ ಎತ್ತರದಲ್ಲಿ ಕೆಲವು ನಿಮಿಷಗಳ ಕಾಲ ಗಗನಯಾತ್ರಿಗಳು ತೂಕವಿಲ್ಲದ ಸ್ಥಿತಿಯನ್ನು ಅನುಭವಿಸುವ ನಿರೀಕ್ಷೆ ಇದೆ ಎಂದೂ ಹೇಳಲಾಗಿದೆ. ಹಾಗೇ, ಎಲ್ಲವೂ ಅಂದುಕೊಂಡಂತೆ ಆದರೆ ನ್ಯೂ ಮೆಕ್ಸಿಕೋ ಮರುಭೂಮಿಗಿಂತ 89 ಕಿಮೀ ಎತ್ತರದಲ್ಲಿ ಸುಮಾರು 90 ನಿಮಿಷಗಳ ಕಾಲ ರಾಕೆಟ್ ಹಾರಾಟ ನಡೆಯಲಿದೆ.
ಸಿರೀಶಾ ಬಾಂದ್ಲಾ ಯಾರು? ಉದ್ಯಮಿ ರಿಚರ್ಡ್ ಬ್ರಾನ್ಸನ್ ಜತೆ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಮಹಿಳೆ ಸಿರೀಶಾ ಬಾಂದ್ಲಾ ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು. ಬೆಳೆದಿದ್ದೆಲ್ಲ ಟೆಕ್ಸಾಸ್ನ ಹೂಸ್ಟನ್ನಲ್ಲಿ. ಬಾಹ್ಯಾಕಾಶಕ್ಕೆ ಹಾರಿದ ಭಾರತ ಮೂಲದ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಸಾಲಿಗೆ ಇದೀಗ ಸಿರೀಶಾ ಕೂಡ ಸೇರ್ಪಡೆಯಾಗುತ್ತಿದ್ದಾರೆ. 34ವರ್ಷದ ಇವರು ಏರೋನಾಟಿಕಲ್ ಎಂಜಿನಿಯರ್. ಈ ಗಗನಯಾತ್ರೆಯಲ್ಲಿ ನಾನೂ ಒಬ್ಬಳು ಪಾಲ್ಗೊಳ್ಳುತ್ತಿದ್ದೇನೆ ಎಂಬ ಬಗ್ಗೆ ತುಂಬ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ. ಇಂದು ಬಾಹ್ಯಾಕಾಶಕ್ಕೆ ಹಾರುತ್ತಿರುವ ಸಿರೀಶಾರಿಗೆ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಶುಭ ಹಾರೈಸಿದ್ದು, ಇಡೀ ಭಾರತಕ್ಕೆ ಹೆಮ್ಮೆ ತಂದ ವಿಚಾರ ಇದು ಎಂದಿದ್ದಾರೆ.
ಇದನ್ನೂ ಓದಿ: Thawarchand Gehlot Oath Taking; ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ ಪ್ರಮಾಣ ವಚನ ಸ್ವೀಕಾರ
Richard Branson Team Including Indian Born Astronaut Sirisha Bandla Set to Travel to Space Today
Published On - 11:05 am, Sun, 11 July 21