ಟೊರೊಂಟೊ: ಕೊವಿಡ್-19 ರೋಗದ ಚಿಕಿತ್ಸೆಗೆ ತಡೆಯೊಡ್ಡುವ ಕೆಲ ಪ್ರೊಟೀನ್ ಘಟಕಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಕೊರೊನಾ ಸೋಂಕಿತರಿಂದ ಪಡೆದಿದ್ದ ಕೆಲ ಮಾದರಿಗಳ ಪರಿಶೀಲನೆಯ ವೇಳೆ ಕೊರೊನಾ ಸೋಂಕಿಗೆ ಬಳಸುವ ಔಷಧಗಳ ಪರಿಣಾಮದ ಮೇಲೆ ಪ್ರಭಾವ ಬೀರುವ ಪ್ರೊಟೀನ್ ಘಟಕಗಳನ್ನು ಗುರುತಿಸಲಾಗಿದೆ. ಜಗತ್ತನ್ನು ಬಾಧಿಸುತ್ತಿರುವ ಕೊವಿಡ್-19 ಸಂಕಷ್ಟಕ್ಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳು ಉತ್ತರವಾಗಿವೆ. ಸುಧಾರಿತ ಲಸಿಕೆಗಳಿಂದ ಮಾತ್ರ ಜಗತ್ತು ಕೊವಿಡ್-19 ಸಂಕಷ್ಟದಿಂದ ಹೊರಬರಬಲ್ಲದು ಎಂದು ಕೆನಡಾದ ಟೊರೆಂಟೊ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.
ಕೊರೊನಾ ವೈರಾಣುಗಳು ಹೊಸಹೊಸ ರೂಪಾಂತರಗಳು ಪ್ರತಿದಿನ ಎನ್ನುವಂತೆ ಪತ್ತೆಯಾಗುತ್ತಿವೆ. ಹೀಗಾಗಿ ಎಲ್ಲ ಮಾದರಿಯ ಕೊರೊನಾ ವೈರಾಣುಗಳ ವಿರುದ್ಧ ಪರಿಣಾಮಕಾರಿಯಾಗಬಲ್ಲ ಚಿಕಿತ್ಸಾ ವಿಧಾನದ ಆವಿಷ್ಕಾರ ಮುಖ್ಯ ಎನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರೊಟ್ಕಮ್ ರಿಸರ್ಚ್ ನಿಯತಕಾಲಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ. 27 ಕೊರೊನಾ ವೈರಾಣು ಪ್ರಭೇದಗಳನ್ನು ಈ ಸಂಶೋಧನೆಗಾಗಿ ತಜ್ಞರು ಆಳವಾಗಿ ವಿಶ್ಲೇಷಿಸಿದ್ದಾರೆ. ಸಾವಿರಾರು ಕೊವಿಡ್ ರೋಗಿಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಪರಿಶೀಲಿಸಲಾಗಿದೆ.
ಈ ಸಂಶೋಧನೆಯ ವೇಳೆ ಪತ್ತೆಯಾದ ರೂಪಾಂತರಿಗಳ ಪೈಕಿ ಅತಿಹೆಚ್ಚು ಹಟಮಾರಿ ಎನಿಸಿದ ಪ್ರಭೇದಗಳನ್ನು ಪ್ರತ್ಯೇಕವಾಗಿ ಗುರುತಿಸಲಾಯಿತು. ಇಂಥ ಪ್ರಭೇದಗಳ ವಿವರವನ್ನು ಔಷಧ ತಯಾರಕರಿಗೆ ಒದಗಿಸಿದರೆ ಅವರು ಇಂಥವನ್ನೇ ಗಮನದಲ್ಲಿರಿಸಿಕೊಂಡು ಔಷಧ ತಯಾರಿಸಬಹುದು ಎಂಬುದು ವಿಜ್ಞಾನಿಗಳ ಆಶಯ.
ಕೊರೊನಾ ಸೋಂಕಿಗಾಗಿ ರೂಪಿಸಿರುವ ಔಷಧಗಳು ಹಲವು ಬಾರಿ ಪ್ರೊಟೀನ್ಗಳ ಜೇಬಿಗಿಳಿದು ಬೆಚ್ಚಗೆ ಕುಳಿತು ಬಿಡುತ್ತವೆ. ಕೆಲವೊಮ್ಮೆ ಆ ನಿರ್ದಿಷ್ಟ ಪ್ರೊಟೀನ್ ಕಾರ್ಯನಿರ್ವಹಿಸಬೇಕಿದ್ದ ಕಾರ್ಯವಿಧಾನದಲ್ಲಿಯೂ ಹಸ್ತಕ್ಷೇಪ ಮಾಡಿ, ಸಲ್ಲದ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗುತ್ತವೆ. ಕೊರೊನಾ ಔಷಧಿಯನ್ನು ಹೀಗೆ ಹಿಡಿದಿಡುವ ಜೀವಕೋಶಗಳ ಪ್ರೊಟೀನ್ಗಳನ್ನು 3ಡಿ ಇಮೇಜ್ಗಳ ಆಳವಾದ ಪರಿಶೀಲನೆಯ ನಂತರ ವಿಜ್ಞಾನಿಗಳು ಗುರುತಿಸಬಲ್ಲರು.
ಕೆಲವೊಮ್ಮೆ ವೈರಾಣುಗಳು ಸಹ ತಮ್ಮ ಪ್ರೊಟೀನ್ ಕವಚಗಳನ್ನು ರೂಪಾಂತರಿಸಿಕೊಳ್ಳುತ್ತವೆ. ಅಂಥ ಸಂದರ್ಭದಲ್ಲಿ ಕೊರೊನಾಗೆ ಈ ಹಿಂದೆ ನೀಡುತ್ತಿದ್ದ ಔಷಧಿ ಅಪ್ರಯೋಜಕವಾಗುತ್ತದೆ. ಔಷಧಗಳನ್ನು ಕಾಪಿಟ್ಟುಕೊಳ್ಳಬಲ್ಲ ಜೀವಕೋಶಗಳ ಇಂಥ ಪ್ರೊಟೀನ್ ಪದರಗಳು ರೂಪಾಂತರ ನಿರೋಧಕ ಸಾಮರ್ಥ್ಯ ಹೊಂದಿವೆ. ದೇಹವು ಹಲವು ಬಾರಿ ಇಂಥ ಜೀವಕಾಯಗಳನ್ನು ಕಾಪಿಟ್ಟುಕೊಂಡು ಸಂಭಾವ್ಯ ವೈರಾಣು ದಾಳಿಗಳ ವಿರುದ್ಧ ರಕ್ಷಣೆ ಪಡೆದುಕೊಳ್ಳುತ್ತದೆ. ಈ ಬೆಳವಣಿಗೆಯನ್ನು ಪತ್ತೆಹಚ್ಚಿರುವುದು ಈ ಸಂಶೋಧನೆಯ ಮತ್ತೊಂದು ಮಹತ್ವದ ವಿದ್ಯಮಾನ ಎನಿಸಿದೆ.
ವಿಜ್ಞಾನಿಗಳು ಕಂಪ್ಯೂಟರ್ ಆಲ್ಗರಿದಂ ಬಳಸಿ 15 SARS-CoV-2 ವೈರಾಣುವಿನ ಮೇಲಿದ್ದ ಔಷಧ ನಿರೋಧಕ ಪ್ರೊಟೀನ್ ಕವಚಗಳನ್ನು ಪತ್ತೆ ಮಾಡಿದ್ದಾರೆ. ಕೊರೊನಾ ವೈರಾಣುಗಳ 27 ಪ್ರಭೇದಗಳೊಂದಿಗೆ ಈ ಪ್ರೊಟೀನ್ಗಳು ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನೂ ಅಂದಾಜಿಸಿದ್ದಾರೆ.
(New Research Canada Scientists Identify Drug Targets For Coronavirus Treatment)
ಇದನ್ನೂ ಓದಿ: ಬ್ರಿಟನ್ನಲ್ಲಿ ಕೊರೊನಾ ವೈರಾಣುವಿನ ಮತ್ತೊಂದು ರೂಪಾಂತರಿ ಪತ್ತೆ: ಈವರೆಗೆ ಗೊತ್ತಿರುವ ವಿಷಯಗಳು ಇಷ್ಟು
ಇದನ್ನೂ ಓದಿ: Explainer: ಕೊವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಕಂಡುಬರುವ ಕೊರೊನಾವೈರಸ್ ಸೋಂಕು ಲಕ್ಷಣಗಳು