ಬ್ರಿಟನ್​ನಲ್ಲಿ ಕೊರೊನಾ ವೈರಾಣುವಿನ ಮತ್ತೊಂದು ರೂಪಾಂತರಿ ಪತ್ತೆ: ಈವರೆಗೆ ಗೊತ್ತಿರುವ ವಿಷಯಗಳು ಇಷ್ಟು

ಈ ರೂಪಾಂತರಿಗೆ B.1.621 ಎಂದು ಹೆಸರಿಸಲಾಗಿದೆ. ಈ ರೂಪಾಂತರಿಯ ವರ್ತನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಬ್ರಿಟನ್​ನಲ್ಲಿ ಕೊರೊನಾ ವೈರಾಣುವಿನ ಮತ್ತೊಂದು ರೂಪಾಂತರಿ ಪತ್ತೆ: ಈವರೆಗೆ ಗೊತ್ತಿರುವ ವಿಷಯಗಳು ಇಷ್ಟು
ಕೊರೊನಾ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 25, 2021 | 7:13 PM

ಲಂಡನ್: ಬ್ರಿಟನ್​ನ ಸಾರ್ವಜನಿಕ ಆರೋಗ್ಯ ಇಲಾಖೆಯು ಇತ್ತೀಚೆಗೆ ಕೊರೊನಾ ವೈರಾಣುವಿನ ಹೊಸ ಪ್ರಭೇದವನ್ನು ಪತ್ತೆ ಮಾಡಿದೆ. 16 ಕೊರೊನಾ ಸೋಂಕಿತರಲ್ಲಿ ಹೊಸ ಪ್ರಭೇದದ ವೈರಾಣುಗಳು ಪತ್ತೆಯಾಗಿದ್ದವು. ಕಳೆದ ಬುಧವಾರ ಈ ವೈರಾಣುವನ್ನು ಪರಿಶೀಲನೆಯಲ್ಲಿರುವ ಪ್ರಭೇದ ಎಂದು ಘೋಷಿಸಲಾಗಿತ್ತು. ಈ ರೂಪಾಂತರಿಗೆ B.1.621 ಎಂದು ಹೆಸರಿಸಲಾಗಿದೆ. ಈ ರೂಪಾಂತರಿಯ ವರ್ತನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಹಾಲಿ ಲಭ್ಯವಿರುವ ಲಸಿಕೆಗಳನ್ನು ಈ ರೂಪಾಂತರಿಯು ಅಪ್ರಸ್ತುತಗೊಳಿಸುತ್ತದೆಯೇ? ಈ ರೂಪಾಂತರಿಯಿಂದ ಸೋಂಕಿತರಾದವರಲ್ಲಿ ಕಾಣಿಸಿಕೊಳ್ಳುವ ಅನಾರೋಗ್ಯದ ಸ್ವರೂಪ ಹೇಗಿರುತ್ತದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಆತಂಕಪಡುವುದು ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ ವೈರಾಣುವಿನ B.1.621 ರೂಪಾಂತರವು ಬ್ರಿಟನ್​ನಲ್ಲಿ ಕಾಣಿಸಿಕೊಂಡ ಹೊಸ ಪ್ರಭೇದ. ಆದರೆ ಹಾಗೆಂದು ವಿಶ್ವದಲ್ಲಿ ಈ ರೂಪಾಂತರಿ ಈ ಹಿಂದೆ ಪತ್ತೆಯಾಗಿಲ್ಲ ಎಂದಲ್ಲ. ಈ ರೂಪಾಂತರಿಯು ಮೊದಲ ಬಾರಿಗೆ ಕೊಲಂಬಿಯಾದಲ್ಲಿ ವರದಿಯಾಗಿತ್ತು.

ಹಲವು ಪ್ರಕರಣಗಳು ವಿದೇಶಿ ಪ್ರಯಾಣಕ್ಕೆ ಹೋಗಿಬಂದವರಲ್ಲಿಯೇ ವರದಿಯಾಗಿದೆ. ಬ್ರಿಟನ್​ನಲ್ಲಿ ಸಮುದಾಯ ಪ್ರಸರಣದ ಯಾವುದೇ ದಾಖಲೆಗಳಿಲ್ಲ ಎಂದು ಲಂಡನ್​ನ ಪ್ರಮುಖ ದಿನ ಪತ್ರಿಕೆ ದಿ ಇಂಡಿಪೆಂಡೆಂಟ್​ ವರದಿ ಮಾಡಿದೆ.

ಕಳೆದ ನಾಲ್ಕು ವಾರಗಳಿಂದೀಚೆಗೆ ಬ್ರಿಟನ್​ನಲ್ಲಿ ಕೊರೊನಾ ಸೋಂಕಿನ ತೀವ್ರತೆ ಮತ್ತೆ ಹೆಚ್ಚಾಗುತ್ತಿದೆ. ವೈರಾಣುವಿನ ಡೆಲ್ಟಾ ಪ್ರಭೇದವು ಜನರಲ್ಲಿ ಭೀತಿಯುಂಟು ಮಾಡಿತ್ತು. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಬ್ರಿಟನ್​ನಲ್ಲಿ ಈ ವಾರದಿಂದ ನಿರ್ಬಂಧಗಳನ್ನು ತೆರವುಗೊಳಿಸಲಾಯಿತು. ಶನಿವಾರ (ಜುಲೈ 24) ಬ್ರಿಟನ್​​ನಲ್ಲಿ ಒಟ್ಟು 31,794 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿತ್ತು.

ಬ್ರಿಟನ್​ನಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ಇತರ ದೇಶಗಳಿಗಿಂತಲೂ ಹೆಚ್ಚು. ಆರ್​ ರೇಟ್​ ಎನ್ನಲಾಗುವ ಈ ಸೋಂಕು ಪ್ರಸರಣದ ಸರಾಸರಿ ಪ್ರಮಾಣವು 1.2ರಿಂದ 1.4ರಷ್ಟಿದೆ. ಒಬ್ಬ ಸೋಂಕಿತನಿಂದ ಒಬ್ಬರಿಗಿಂತ ಹೆಚ್ಚು ಮಂದಿಗೆ ಸೋಂಕು ಹರಡುತ್ತಿದೆ. ಕಳೆದ ಜನವರಿಯ ನಂತರ ಇಂಗ್ಲೆಂಡ್​ನ ಮನೆಗಳಲ್ಲಿ ಸೋಂಕು ಹರಡುವ ಪ್ರಮಾಣ ಹೆಚ್ಚಾಗುತ್ತಲೇ ಇದೆ.

ಪರಿಶೀಲನೆಯಲ್ಲಿರುವ ರೂಪಾಂತರಿ ಎಂದರೇನು? ವೈರಾಣು ರೂಪಾಂತರಗಳನ್ನು ಹಲವು ಹಂತಗಳಲ್ಲಿ ವರ್ಗೀಕರಿಸಲಾಗುತ್ತದೆ. ಮೊದಲ ಹಂತದಲ್ಲಿ ಪರಿಶೀಲನೆಯಲ್ಲಿರುವ ರೂಪಾಂತರಿ (variant under investigation) ಎಂದು ಘೋಷಿಸಲಾಗುತ್ತದೆ. ನಂತರ ಕುತೂಹಲಕಾರಿ ರೂಪಾಂತರಿ (variants of interest) ಮತ್ತು ಕಾಳಜಿವಹಿಸಬೇಕಾದ ರೂಪಾಂತರಿ (variants of concern) ಎಂದು ಘೋಷಿಸಲಾಗುತ್ತದೆ. ಪ್ರತಿ ಹಂತದಲ್ಲಿಯೂ ರೂಪಾಂತರಿಯ ಬಗ್ಗೆ ತಜ್ಞರಿಗೆ ಹೆಚ್ಚಿನ ಪ್ರಮಾಣದ ಮಾಹಿತಿ ಲಭ್ಯವಾಗಿರುತ್ತದೆ. ಇದೀಗ ಬ್ರಿಟನ್​ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿಯ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹವಾಗಬೇಕಿದೆ. ಇದರ ಅಪಾಯಗಳನ್ನು ನಿಖರವಾಗಿ ಅಂದಾಜಿಸಿದ ನಂತರ ವರ್ಗೀಕರಣವು ಬದಲಾಗುತ್ತದೆ.

(Coronavirus New Covid variant found in United Kingdom 16 cases detected so far)

ಇದನ್ನೂ ಓದಿ: ಕ್ಯಾನ್ಸರ್​ ರೋಗಕ್ಕೆ ಕಾರಣವಾಗಬಲ್ಲ ರೂಪಾಂತರಗಳನ್ನು ಪತ್ತೆ ಮಾಡುವ ಸಾಧನವನ್ನು ಅಭಿವೃದ್ಧಿಪಡಿಸಿದ ಐಐಟಿ ಮದ್ರಾಸ್ ಸಂಶೋಧಕರು

ಇದನ್ನೂ ಓದಿ: ರಾಜಸ್ಥಾನದಲ್ಲಿ 11 ಮಂದಿಯಲ್ಲಿ ಕಪ್ಪಾ ರೂಪಾಂತರಿ ವೈರಸ್​; ನಿರ್ಲಕ್ಷ್ಯ ಮಾಡುವ ವಿಚಾರವಲ್ಲವೆಂದ ಆರೋಗ್ಯ ಸಚಿವ

Published On - 7:10 pm, Sun, 25 July 21