ಅಬುಜಾ (ನೈಜೀರಿಯಾ): ಆಫ್ರಿಕಾದ ನೈಜೀರಿಯಾದಲ್ಲಿ ಶುಕ್ರವಾರ ಭೀಕರ ಅಪಘಾತ ಸಂಭವಿಸಿದೆ. ಇಲ್ಲಿನ ಸೇಂಟ್ಸ್ ಅಕಾಡೆಮಿ ಕಾಲೇಜಿನ ಎರಡು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ 22 ಮಕ್ಕಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಶಾಲಾ ಸಿಬ್ಬಂದಿ ವರ್ಗ ಸೇರಿದಂತೆ ಹಲವು ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿದ್ದು, ಶೋಧ ಕಾರ್ಯ ಮುಂದುವರಿದಿದೆ. ಗಾಯಾಳುಗಳಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಆರಂಭದಲ್ಲಿ ಒಟ್ಟು 154 ವಿದ್ಯಾರ್ಥಿಗಳು ಅವಶೇಷಗಳಲ್ಲಿ ಸಿಲುಕಿಕೊಂಡಿದ್ದು, ಅವರಲ್ಲಿ 132 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ದುರದೃಷ್ಟವಶಾತ್ 22 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರ ಆಲ್ಫ್ರೆಡ್ ಅಲಾಬೊ ಹೇಳಿದ್ದಾರೆ.
ಈ ಶಾಲೆಯನ್ನು ನದಿಯ ದಡದಲ್ಲಿ ನಿರ್ಮಿಸಲಾಗಿರುವುದೇ ಈ ಅಪಘಾತಕ್ಕೆ ಕಾರಣ ಎಂದು ರಾಜ್ಯ ಸರ್ಕಾರ ಆರೋಪಿಸಿದೆ. ಅಲ್ಲದೆ, ಮುನ್ನೆಚ್ಚರಿಕೆ ವಹಿಸಿ, ದುರ್ಬಲ ಕಟ್ಟಡಗಳನ್ನು ಹೊಂದಿರುವ ಮತ್ತು ನದಿ ದಡದಲ್ಲಿರುವ ರಾಜ್ಯದ ಎಲ್ಲಾ ಶಾಲಾ ಕಟ್ಟಡಗಳನ್ನು ಕೂಡಲೇ ಮುಚ್ಚುವಂತೆ ಸರ್ಕಾರ ಮನವಿ ಮಾಡಿದೆ.
ಮತ್ತಷ್ಟು ಓದಿ: ಚಾರ್ ಧಾಮ್ನಲ್ಲಿ ಭೂಕುಸಿತ: ಸಂಕಷ್ಟಕ್ಕೆ ಸಿಲುಕಿದ ಹಾವೇರಿಯ 7 ಜನರು
ಆಫ್ರಿಕನ್ ದೇಶಗಳ ಪೈಕಿ ನೈಜೀರಿಯಾ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ನೈಜೀರಿಯಾದಲ್ಲಿ ಕಟ್ಟಡ ಕುಸಿತವು ಸಾಮಾನ್ಯ ಘಟನೆಯಾಗಿದ್ದರೂ, ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಹತ್ತಕ್ಕೂ ಹೆಚ್ಚು ಕಟ್ಟಡ ಕುಸಿತದ ಘಟನೆಗಳು ದಾಖಲಾಗಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:14 am, Sat, 13 July 24