ಪನ್ನೂನ್ ಹತ್ಯೆ ಸಂಚು ಪ್ರಕರಣ: ಅಮೆರಿಕ ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡ ಭಾರತೀಯ ಪ್ರಜೆ ನಿಖಿಲ್ ಗುಪ್ತಾ!

ಖಲಿಸ್ತಾನಿ ನಾಯಕ ಪನ್ನೂನ್ ಹತ್ಯೆ ಸಂಚಿನ ಪ್ರಮುಖ ಆರೋಪಿ ನಿಖಿಲ್ ಗುಪ್ತಾ ಅಮೆರಿಕ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಈ ಮಹತ್ವದ ಬೆಳವಣಿಗೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ. ಭಾರತ ಸರ್ಕಾರವು ಈ ಪ್ರಕರಣದಲ್ಲಿ ತನ್ನ ಪಾತ್ರವನ್ನು ನಿರಾಕರಿಸಿದರೂ, ಅಮೆರಿಕದ ಪುರಾವೆಗಳ ಆಧಾರದ ಮೇಲೆ ತನಿಖೆಗೆ ಆದೇಶಿಸಿದೆ. ಗುಪ್ತಾಗೆ 10-20 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಪನ್ನೂನ್ ಹತ್ಯೆ ಸಂಚು ಪ್ರಕರಣ: ಅಮೆರಿಕ ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡ ಭಾರತೀಯ ಪ್ರಜೆ ನಿಖಿಲ್ ಗುಪ್ತಾ!
ಪನ್ನೂನ್ ಹತ್ಯೆ ಸಂಚು, ನಿಖಿಲ್ ಗುಪ್ತಾ

Updated on: Feb 14, 2026 | 11:33 AM

ನ್ಯೂಯಾರ್ಕ್,ಫೆ.14: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಖಲಿಸ್ತಾನಿ ನಾಯಕ ಗುರುಪತ್‌ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಕೊಲೆ ಸಂಚಿನ ಪ್ರಮುಖ ಆರೋಪಿ ಎನ್ನಲಾದ ಭಾರತೀಯ ಮೂಲದ ನಿಖಿಲ್ ಗುಪ್ತಾ (Nikhil Gupta) ಅಮೆರಿಕದ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಹತ್ಯೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಮೆರಿಕ ಮತ್ತು ಕೆನಡಾ ಪೌರತ್ವ ಹೊಂದಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯ ನಾಯಕ ಪನ್ನೂನ್ ಹತ್ಯೆಗೆ ನಿಖಿಲ್ ಗುಪ್ತಾ ಸುಪಾರಿ ನೀಡಿದ್ದ ಎಂಬ ಆರೋಪವಿದೆ. ಭಾರತದ ಸರ್ಕಾರಿ ಅಧಿಕಾರಿಯೊಬ್ಬರ ಸೂಚನೆಯ ಮೇರೆಗೆ ನಿಖಿಲ್ ಗುಪ್ತಾ ಈ ಸಂಚು ರೂಪಿಸಿದ್ದರು ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಆರೋಪಿಸಿದ್ದವು.

ಪನ್ನೂನ್ ಹತ್ಯೆಗಾಗಿ ನಿಖಿಲ್ ಗುಪ್ತಾ ಹಂತಕನೊಬ್ಬನನ್ನು ಹುಡುಕುತ್ತಿದ್ದಾಗ, ಆತ ಅಮೆರಿಕದ ಗುಪ್ತಚರ ಇಲಾಖೆಯ ರಹಸ್ಯ ಏಜೆಂಟ್ ಅನ್ನೇ ಸಂಪರ್ಕಿಸಿದ್ದ. ಹತ್ಯೆಗಾಗಿ ಸುಮಾರು 1 ಲಕ್ಷ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿತ್ತು ಮತ್ತು ಅದರಲ್ಲಿ 15,000 ಡಾಲರ್ ಮುಂಗಡವಾಗಿ ನೀಡಲಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಜೆಕ್ ಗಣರಾಜ್ಯದಲ್ಲಿ ನಿಖಿಲ್ ಗುಪ್ತಾನನ್ನು ಬಂಧಿಸಿ ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು.

ನ್ಯಾಯಾಲಯದಲ್ಲಿ ಏನಾಯಿತು?

ನ್ಯಾಯಾಧೀಶರ ಮುಂದೆ ಹಾಜರಾದ ನಿಖಿಲ್ ಗುಪ್ತಾ, “ಹೌದು, ನಾನು ಈ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದೆ” ಎಂದು ಒಪ್ಪಿಕೊಂಡಿದ್ದಾರೆ. ಇದೀಗ ಈ ಹೇಳಿಕೆಯ ಮೂಲಕ ಈ ವಿವಾದಾತ್ಮಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ತಪ್ಪೊಪ್ಪಿಗೆಯಿಂದಾಗಿ ನಿಖಿಲ್ ಗುಪ್ತಾಗೆ ಸುಮಾರು 10 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನು ಆತನ ಹಿಂದೆ ಬೇರೆಯಾದರೂ ಇದ್ದರೆ ಎಂಬ ಬಗ್ಗೆಯೂ ತನಿಖೆಯಾಗಬಹುದು ಎಂದು ಹೇಳಲಾಗಿದೆ.

ಭಾರತ ಸರ್ಕಾರದ ನಿಲುವು:

ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಆದರೆ, ಅಮೆರಿಕ ನೀಡಿದ ಸಾಕ್ಷ್ಯಗಳ ಆಧಾರದ ಮೇಲೆ ಭಾರತವು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ ತನ್ನದೇ ಆದ ತನಿಖೆ ನಡೆಸುತ್ತಿದೆ.

ವಿಕಾಶ್ ಯಾದವ್ (CC-1) ಯಾರು?

ವಿಕಾಶ್ ಯಾದವ್ ಅವರು ಈ ಹಿಂದೆ ಭಾರತದ ಅತಿದೊಡ್ಡ ಅರೆಸೇನಾ ಪಡೆಯಾದ ಸಿಆರ್‌ಪಿಎಫ್ (CRPF) ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಇವರು ಭಾರತದ ಸಂಪುಟ ಸಚಿವಾಲಯದ ಅಡಿಯಲ್ಲಿ ಬರುವ ವಿದೇಶಿ ಗುಪ್ತಚರ ಸಂಸ್ಥೆ ‘ರಾ’ (RAW – Research and Analysis Wing) ನಲ್ಲಿ ‘ಸೀನಿಯರ್ ಫೀಲ್ಡ್ ಆಫೀಸರ್’ ಆಗಿ ನಿಯೋಜನೆಗೊಂಡಿದ್ದರು. ಅಮೆರಿಕದ ಚಾರ್ಜ್‌ಶೀಟ್ ಪ್ರಕಾರ, ಯಾದವ್ ಅವರು ‘ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್’ ಮತ್ತು ‘ಇಂಟೆಲಿಜೆನ್ಸ್’ (ಗುಪ್ತಚರ) ವಿಭಾಗಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು ಎಂದು ಹೇಳಿದೆ. ಭಾರತೀಯ ಪ್ರಜೆ ನಿಖಿಲ್ ಗುಪ್ತಾ ತನ್ನ ತಪ್ಪು ಒಪ್ಪಿಕೊಂಡ ಬೆನ್ನಲ್ಲೇ, ಈ ಸಂಚಿನ ಹಿಂದಿದ್ದ ಮಾಸ್ಟರ್ ಮೈಂಡ್ ಎನ್ನಲಾದ ‘CC-1’ ಅಲಿಯಾಸ್ ವಿಕಾಶ್ ಯಾದವ್ ಕುರಿತಾದ ಚರ್ಚೆ ಜೋರಾಗಿದೆ. ಅಮೆರಿಕದ ತನಿಖಾ ಸಂಸ್ಥೆಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಇವರ ಹೆಸರು ಕೂಡ ಇದೆ ಎಂದು ಹೇಳಿದೆ.

ಇದನ್ನೂ ಓದಿ: ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆ

ಹತ್ಯೆ ಸಂಚಿನಲ್ಲಿ ಇವರ ಪಾತ್ರವೇನು?

ಅಮೆರಿಕ ತನಿಖೆ ಸಂಸ್ಥೆಗಳು ಸಲ್ಲಿರುವ ದೋಷಾರೋಪ ಪಟ್ಟಿಯ ಪ್ರಕಾರ, 2023ರ ಮೇ ತಿಂಗಳಲ್ಲಿ ವಿಕಾಶ್ ಯಾದವ್ ಅವರು ನಿಖಿಲ್ ಗುಪ್ತಾನನ್ನು ಸಂಪರ್ಕಿಸಿ, ನ್ಯೂಯಾರ್ಕ್‌ನಲ್ಲಿರುವ ಪನ್ನೂನ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಇವರು ಪನ್ನೂನ್‌ನ ಮನೆಯ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಆತನ ದೈನಂದಿನ ಚಟುವಟಿಕೆಗಳ ಮಾಹಿತಿಯನ್ನು ಗುಪ್ತವಾಗಿ ನೀಡಿದ್ದರು. ಹತ್ಯೆಗಾಗಿ 1 ಲಕ್ಷ ಡಾಲರ್ ಸುಪಾರಿ ನಿಗದಿಪಡಿಸಲಾಗಿತ್ತು ಮತ್ತು 15,000 ಡಾಲರ್ ಮುಂಗಡವಾಗಿ ನೀಡಲು ವ್ಯವಸ್ಥೆ ಮಾಡಿದ್ದರು. “ಅಮಾನತ್” (Amanat) ಎಂಬ ಗುಪ್ತನಾಮದ ಮೂಲಕ ಇವರು ಸಂವಹನ ನಡೆಸುತ್ತಿದ್ದರು ಎಂದು ಹೇಳಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us