ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆದೇಶಿಸಿದ ಲಂಡನ್ ನ್ಯಾಯಾಲಯ

| Updated By: ಸಾಧು ಶ್ರೀನಾಥ್​

Updated on: Feb 25, 2021 | 4:55 PM

ನೀರವ್ ಮೋದಿ ಅಪರಾಧಿಯಾಗಬಹುದು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ. ಲಂಡನ್ ಜೈಲಿಗಿಂತ ಮುಂಬೈನಲ್ಲಿರುವ ಆರ್ಥರ್​ ರೋಡ್ ಜೈಲ್ ಚೆನ್ನಾಗಿದೆ. ನೀರವ್​ ಮೋದಿ ಮುಂಬೈ ಜೈಲಿನಲ್ಲೇ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದೆ.

ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆದೇಶಿಸಿದ ಲಂಡನ್ ನ್ಯಾಯಾಲಯ
ನೀರವ್​ ಮೋದಿ ( ಸಂಗ್ರಹ ಚಿತ್ರ)
Follow us on

ಲಂಡನ: ಪಂಜಾಬ್ ನ್ಯಾಷನಲ್ ಬ್ಯಾಂಕ್​​ಗೆ 13,500 ಕೋಟಿ ರೂಪಾಯಿ ವಂಚನೆ ಎಸಗಿದ ಆರೋಪದಡಿ ವಿಚಾರನೆ ಎದುರಿಸುತ್ತಿರುವ ನೀರವ್ ಮೋದಿಯನ್ನು (Nirav Modi) ಭಾರತಕ್ಕೆ ಹಸ್ತಾಂತರಿಸಲು ಲಂಡನ್​ನ ವೆಸ್ಟ್​ಮಿನಿಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್ ಆದೇಶಿಸಿದೆ. ಭಾರತದ ಅಧಿಕಾರಿಗಳ ಕಣ್ತಪ್ಪಿಸಿ ಲಂಡನ್​ಗೆ ಪರಾರಿಯಾಗಿದ್ದ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಭಾರತದ ಇ.ಡಿ, ಸಿಬಿಐ ತನಿಖಾ ಸಂಸ್ಥೆಗಳು ಲಂಡನ್​ ನ್ಯಾಯಾಂಗಕ್ಕೆ ಮನವಿ ಮಾಡಿಕೊಂಡಿದ್ದವು.

ಇದೇ ಅಂತಿಮ ಆದೇಶವಲ್ಲ
ಇಂದಿನ ಆದೇಶವನ್ನು ಪ್ರಶ್ನಿಸಿ ನೀರವ್ ಮೋದಿ ಲಂಡನ್ ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ಸಹ ತಿಳಿಸಿರುವ ವೆಸ್ಟ್​ಮಿನಿಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್, ಇಂಗ್ಲೆಂಡ್​ನ ಗೃಹ ಇಲಾಖೆ ಅಧಿಕೃತವಾಗಿ ಒಪ್ಪಿಗೆ ನೀಡಿದರೆ ಮಾತ್ರ ನೀರವ್​ ಮೋದಿಯವರನ್ನು ಗಡಿಪಾರು ಮಾಡಬಹುದು ಎಂದು ತಿಳಿಸಿದೆ.

ಬ್ಯಾಂಕ್ ಅಧಿಕಾರಿಗಳ ಜತೆ ನೀರವ್ ಮೋದಿ ಸಂಪರ್ಕ ಹೊಂದಿರುವುದು ಸಾಬೀತಾಗಿದೆ ಎಂದು ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಲಂಡನ್ ನ್ಯಾಯಾಲಯದ ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ. ಸಿಬಿಐ ನಡೆಸಿದ ತನಿಖೆಯಿಂದ ಡಮ್ಮಿ ಕಂಪನಿಗಳ ಮೇಲೆ ನೀರವ್ ಮೋದಿ ನಿಯಂತ್ರಣ ಹೊಂದಿರುವುದು ಸಾಬೀತಾಗಿದೆ. ಅಲ್ಲದೇ, ಹಣ ಆಕ್ರಮ ಸಾಗಾಟದ ಷಡ್ಯಂತ್ರ ಸಾಬೀತಾಗಿದ್ದು, ಮೇಲ್ನೋಟಕ್ಕೆ ಭಾರತ ಸರ್ಕಾರ ಮೋದಿ ವಿರುದ್ಧ ಹೊರಿಸಿರುವ ಹಣ ಆಕ್ರಮ ವರ್ಗಾವಣೆ ಆರೋಪ ಸರಿ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಭಾರತ ಸಲ್ಲಿಸಿದ್ದ ಸಾಕ್ಷ್ಯಗಳಲ್ಲಿ ಏನಿತ್ತು?
ಕೈರೋದಲ್ಲಿ ಕಂಪನಿ‌ ನಿರ್ದೇಶಕರಿಗೆ ನೀರವ್ ಮೋದಿ ಬೆದರಿಕೆ ಒಡ್ಡಿದ ಕುರಿತು ಭಾರತದ ತನಿಖಾ ಸಂಸ್ಥೆಗಳು ಆಡಿಯೋ, ವಿಡಿಯೋ ಸಾಕ್ಷ್ಯಗಳನ್ನು ಲಂಡನ್​ನ ಕೋರ್ಟ್​ಗೆ ಒಪ್ಪಿಸಿದ್ದವು. ಈ ಸಾಕ್ಷ್ಯಗಳನ್ನು ಒಪ್ಪಿದ ಕೋರ್ಟ್, ನೀರವ್ ಮೋದಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ. ನೀರವ್ ಮೋದಿ ಅವರ ಮೋಸ ಮಾಡುವ ಷಡ್ಯಂತ್ರ ಸಾಬೀತಾಗಿದ್ದು, ಸಾಕ್ಷ್ಯ ನಾಶಕ್ಕೆ ಷಡ್ಯಂತ್ರ ರೂಪಿಸಿದ್ದರು ಎಂದು ಲಂಡನ್​ನ ವೆಸ್ಟ್‌ಮಿನಿಸ್ಟರ್ ಕೋರ್ಟ್ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ನೀರವ್ ಮೋದಿ ವಾದದಲ್ಲಿ ವಿರೋಧಭಾಸವಿದ್ದು, ಅವರು ಭಾರತಕ್ಕೇ ಉತ್ತರ ಕೊಡಬೇಕಿದೆ ಎಂದು ಕೋರ್ಟ್ ತಿಳಿಸಿದೆ. ನೀರವ್ ಮೋದಿ ಅಪರಾಧಿಯಾಗಬಹುದು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ. ಲಂಡನ್ ಜೈಲಿಗಿಂತ ಮುಂಬೈನಲ್ಲಿರುವ ಆರ್ಥರ್​ ರೋಡ್ ಜೈಲ್ ಚೆನ್ನಾಗಿದೆ. ನೀರವ್​ ಮೋದಿ ಮುಂಬೈ ಜೈಲಿನಲ್ಲೇ ಚಿಕಿತ್ಸೆ ಪಡೆಯಬಹುದು ಎಂದೂ ತಿಳಿಸಿದೆ.

ಇದನ್ನೂ ಓದಿ: ನೀರವ್​ ಮೋದಿಗೆ ಸತತ 6ನೇ ಬಾರಿ ಹಿನ್ನಡೆ: ಲಂಡನ್​ ನ್ಯಾಯಾಲಯದಿಂದ ಜಾಮೀನು ಅರ್ಜಿ ತಿರಸ್ಕಾರ

ನ್ಯೂಯಾರ್ಕ್​ನಲ್ಲಿ ₹ 19 ಕೋಟಿ ಮೌಲ್ಯದ ವಂಚನೆ: ನೀರವ್ ಮೋದಿ ಸೋದರ ನೆಹಾಲ್ ವಿರುದ್ಧ ಆರೋಪ