
ವಾಷಿಂಗ್ಟನ್, ನವೆಂಬರ್ 12: ಜಗತ್ತಿನ ಪ್ರಮುಖ ಎಐ ಚಿಪ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಎನ್‌ವಿಡಿಯಾ ಈಗ ದೊಡ್ಡ ವಿವಾದಕ್ಕೆ ಸಿಲುಕಿದೆ. ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಜೆನ್ಸನ್ ಹುವಾಂಗ್ ಅವರ ವೈಯಕ್ತಿಕ ಜೀವನದ ಕುರಿತ ಎರಡು ವಿವಾಹೇತರ ಸಂಬಂಧಗಳ ಆರೋಪಗಳು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಅವರನ್ನು ಸಿಇಒ ಹುದ್ದೆಯಿಂದ ತೆಗೆದುಹಾಕಲು ಕಂಪನಿಯ ಆಡಳಿತ ಮಂಡಳಿ ಸಿದ್ಧತೆ ನಡೆಸುತ್ತಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಆದರೆ ಹುವಾಂಗ್ ಅವರನ್ನು ವಜಾಗೊಳಿಸಲು ಅಂತಿಮ ನಿರ್ಧಾರ ಪ್ರಕಟಿಸಿಲ್ಲ, ಮಂಡಳಿ ಅವರ ಭವಿಷ್ಯದ ಬಗ್ಗೆ ಚರ್ಚಿಸಲು ಸಭೆ ನಡೆಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. 63 ವರ್ಷದ ಜೆನ್ಸನ್ ಹುವಾಂಗ್ ವಿರುದ್ಧ ಎರಡು ವಿವಾಹೇತರ ಸಂಬಂಧಗಳ ಆರೋಪ ಕೇಳಿಬಂದಿದೆ.
ಮೊದಲನೆಯದು ಸಿಂಗಾಪುರ ಮೂಲದ ಮೆಗಾಸ್ಪೀಡ್ ಕಂಪನಿಯೊಂದಿಗೆ ಸಂಬಂಧ ಹೊಂದಿರುವ ಉದ್ಯಮಿ ಆಲಿಸ್ ಹುವಾಂಗ್. ಅಮೆರಿಕದ ಗುಪ್ತಚರ ಅಧಿಕಾರಿಗಳು ಆಲಿಸ್ ಹುವಾಂಗ್ ಅವರಿಗೆ ಚೀನಾದ ಗುಪ್ತಚರ ವ್ಯವಸ್ಥೆಯೊಂದಿಗೆ ಸಂಪರ್ಕವಿದೆ ಎಂದು ಶಂಕಿಸಿರುವುದಾಗಿ ವರದಿಗಳಲ್ಲಿ ಹೇಳಲಾಗಿದೆ. ಈ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿವೆ.
ಎರಡನೆಯದು ಎನ್‌ವಿಡಿಯಾದ ಆರೋಗ್ಯ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ ಅವರೊಂದಿಗಿನ ಸಂಬಂಧ. ಮಾರ್ಚ್‌ನಲ್ಲಿ ಸ್ಯಾನ್ ಜೋಸ್‌ನಲ್ಲಿ ನಡೆದ ಎನ್‌ವಿಡಿಯಾ ಸಮ್ಮೇಳನದ ವೇಳೆ ಇಬ್ಬರೂ ಆತ್ಮೀಯವಾಗಿ ವರ್ತಿಸುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ ಎಂದು ವರದಿ ತಿಳಿಸಿದೆ.
ಆಲಿಸ್ ಹುವಾಂಗ್ ಅವರೊಂದಿಗಿನ ಸಂಬಂಧವೇ ಎನ್‌ವಿಡಿಯಾಗೆ ದೊಡ್ಡ ತಲೆನೋವಾಗಿದೆ. ಆಲಿಸ್ ಹುವಾಂಗ್ ಅವರೊಂದಿಗೆ ಕಂಪನಿಯ ವ್ಯವಹಾರಿಕ ಸಂಪರ್ಕವಿದ್ದು, ಎನ್‌ವಿಡಿಯಾದ ಎಐ ಚಿಪ್‌ಗಳನ್ನು ಖರೀದಿಸುವ ಸಂಸ್ಥೆಗಳೊಂದಿಗೂ ಅವರ ಸಂಬಂಧವಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:
ಜೆನ್ಸೆನ್ ಸಂಪತ್ತಿಗೆ ಡಬಲ್ ಹೊಡೆತ; ಎಐ ಶಾಕ್ ಜೊತೆಗೆ ಈಗ ಲೈಂಗಿಕ ಹಗರಣದ ಆಘಾತ; ಟಾಪ್-10 ಪಟ್ಟಿಯಿಂದ ಹೊರಕ್ಕೆ
ಅಮೆರಿಕದ ಅಧಿಕಾರಿಗಳು ಮೆಗಾಸ್ಪೀಡ್ ಕಂಪನಿಯು ನಿರ್ಬಂಧಿತ ಎಐ ಚಿಪ್‌ಗಳನ್ನು ಚೀನಾದ ಸಂಸ್ಥೆಗಳಿಗೆ ತಲುಪಿಸಲು ನೆರವಾಗಿದೆಯೇ ಎಂಬ ಅನುಮಾನದಿಂದ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹುವಾಂಗ್ ಅವರ ವೈಯಕ್ತಿಕ ಸಂಬಂಧದ ಮೂಲಕ ಕಂಪನಿಯ ಅಥವಾ ಅಮೆರಿಕದ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ.
ಆದರೆ ಆಲಿಸ್ ಹುವಾಂಗ್ ಚೀನಾದ ಗೂಢಚಾರಿಣಿ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಹಾಗೆಯೇ ಜೆನ್ಸನ್ ಹುವಾಂಗ್ ಅವರು ಕಂಪನಿಯ ರಹಸ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬುದಕ್ಕೂ ಸದ್ಯಕ್ಕೆ ದೃಢಪಟ್ಟ ಪುರಾವೆ ಇಲ್ಲ.
ಈ ವಿವಾದದ ನಡುವೆ ಜೆನ್ಸನ್ ಹುವಾಂಗ್ ಅವರು ಎನ್‌ವಿಡಿಯಾ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ತಮ್ಮ ಪತ್ನಿಗೆ ವಿಶ್ವಾಸದ್ರೋಹ ಮಾಡಿರುವುದಾಗಿ ಒಪ್ಪಿಕೊಂಡು, ತಮ್ಮ ತಪ್ಪಿಗೆ ಸಂಪೂರ್ಣ ಜವಾಬ್ದಾರಿ ಹೊರುವುದಾಗಿ ತಿಳಿಸಿದ್ದಾರೆ. ತಮ್ಮ ವರ್ತನೆಯಿಂದ ಪತ್ನಿ ಮತ್ತು ಕುಟುಂಬಕ್ಕೆ ನೋವಾಗಿದೆ ಎಂದು ಕ್ಷಮೆಯಾಚಿಸಿದ್ದಾರೆ. ಇದರ ಬೆನ್ನಲ್ಲೇ ಎನ್‌ವಿಡಿಯಾದ ನಿರ್ದೇಶಕರ ಮಂಡಳಿ ಸ್ವತಂತ್ರ ತನಿಖೆಗೆ ಆದೇಶಿಸಿದೆ. ಹೊರಗಿನ ಕಾನೂನು ಸಂಸ್ಥೆಯ ನೆರವಿನೊಂದಿಗೆ ಸ್ವತಂತ್ರ ನಿರ್ದೇಶಕರು ಈ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ನವೆಂಬರ್ 8ರಂದು ಪ್ರಕಟಿಸಿದ ಅಧಿಕೃತ ಹೇಳಿಕೆಯಲ್ಲಿ ಎನ್‌ವಿಡಿಯಾ ಮಂಡಳಿ, ಹುವಾಂಗ್ ವಿದೇಶಿ ಗುಪ್ತಚರ ಕಾರ್ಯಾಚರಣೆಯ ಗುರಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದಾಗಿ ತಿಳಿಸಿತ್ತು. ಅಮೆರಿಕದ ರಾಷ್ಟ್ರೀಯ ಭದ್ರತೆ ಅಥವಾ ಕಂಪನಿಯ ರಹಸ್ಯ ಮಾಹಿತಿಗೆ ಧಕ್ಕೆಯಾಗಿದೆ ಎಂಬ ನಂಬಿಕೆಗೆ ಸದ್ಯಕ್ಕೆ ಯಾವುದೇ ಕಾರಣವಿಲ್ಲ ಎಂದೂ ಮಂಡಳಿ ಸ್ಪಷ್ಟಪಡಿಸಿತ್ತು. ಅಲ್ಲದೆ, ಜೆನ್ಸನ್ ಹುವಾಂಗ್ ಮತ್ತು ಅವರ ನಾಯಕತ್ವದ ಮೇಲೆ ವಿಶ್ವಾಸವಿದೆ ಎಂದು ಹೇಳಿತ್ತು. ಆದರೆ ಈಗ ಎರಡನೇ ಸಂಬಂಧದ ಆರೋಪವೂ ಹೊರಬಂದಿರುವುದರಿಂದ ಮಂಡಳಿಯ ನಿಲುವು ಬದಲಾಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.
ಈ ವಿವಾದದ ಪರಿಣಾಮ ಎನ್‌ವಿಡಿಯಾದ ಷೇರುಗಳ ಮೇಲೂ ಕಾಣಿಸಿಕೊಂಡಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಟವಾದ ಬಳಿಕ ಬುಧವಾರದ ವಹಿವಾಟಿನ ನಂತರ ಕಂಪನಿಯ ಷೇರುಗಳು ಸುಮಾರು ಶೇ.8ರಷ್ಟು ಕುಸಿದಿವೆ ಎಂದು ವರದಿಯಾಗಿದೆ. ಸುಮಾರು 4 ಟ್ರಿಲಿಯನ್ ಡಾಲರ್ ಮೌಲ್ಯದ ಎನ್‌ವಿಡಿಯಾ ಜಾಗತಿಕ ಎಐ ಉದ್ಯಮದ ಪ್ರಮುಖ ಕಂಪನಿಯಾಗಿದೆ. ಇಂತಹ ಸಂದರ್ಭದಲ್ಲಿ ಸಿಇಒ ಬದಲಾವಣೆಯ ಸಾಧ್ಯತೆ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
– ಜೆನ್ಸನ್ ಹುವಾಂಗ್ 1963ರಲ್ಲಿ ಜನಿಸಿದ ತೈವಾನ್ ಮೂಲದ ಅಮೆರಿಕದ ಉದ್ಯಮಿ.
– 1993ರಲ್ಲಿ ಕರ್ಟಿಸ್ ಪ್ರಿಯಮ್ ಮತ್ತು ಕ್ರಿಸ್ ಮಲಚೌಸ್ಕಿ ಅವರೊಂದಿಗೆ ಎನ್‌ವಿಡಿಯಾ ಕಂಪನಿಯನ್ನು ಸ್ಥಾಪಿಸಿದರು.
– ಆರಂಭದಲ್ಲಿ ಕಂಪನಿ ಕಂಪ್ಯೂಟರ್ ಗೇಮಿಂಗ್‌ಗಾಗಿ ಗ್ರಾಫಿಕ್ಸ್ ಚಿಪ್‌ಗಳನ್ನು ತಯಾರಿಸುತ್ತಿತ್ತು.
– ಬಳಿಕ ಕೃತಕ ಬುದ್ಧಿಮತ್ತೆ, ಡೇಟಾ ಸೆಂಟರ್ ಮತ್ತು ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ಎನ್‌ವಿಡಿಯಾ ಮುಂಚೂಣಿಗೆ ಬಂತು.
– ಎಐ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಉದ್ಯಮಿಗಳಲ್ಲಿ ಜೆನ್ಸನ್ ಹುವಾಂಗ್ ಕೂಡ ಒಬ್ಬರು.
ವೈಯಕ್ತಿಕ ಸಂಬಂಧಗಳ ಆರೋಪದಿಂದ ಆರಂಭವಾದ ವಿವಾದ ಈಗ ಕಂಪನಿಯ ಆಡಳಿತ, ರಾಷ್ಟ್ರೀಯ ಭದ್ರತೆ ಮತ್ತು ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಹಂತಕ್ಕೆ ತಲುಪಿದೆ. ಆದರೆ ಜೆನ್ಸನ್ ಹುವಾಂಗ್ ಅವರನ್ನು ಸಿಇಒ ಸ್ಥಾನದಿಂದ ವಜಾಗೊಳಿಸುವ ನಿರ್ಧಾರ ಇನ್ನೂ ಅಧಿಕೃತವಾಗಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ