Omicron Variant: ಒಮಿಕ್ರಾನ್ ವೈರಸ್ ಪ್ಲಾಸ್ಟಿಕ್ ಮೇಲೆ 8 ದಿನ, ಚರ್ಮದ ಮೇಲೆ 21 ಗಂಟೆ ಜೀವಂತವಾಗಿರಬಲ್ಲದು!

| Updated By: ಸುಷ್ಮಾ ಚಕ್ರೆ

Updated on: Jan 26, 2022 | 6:19 PM

ಪ್ಲಾಸ್ಟಿಕ್ ಮತ್ತು ಚರ್ಮದ ಮೇಲ್ಮೈಗಳಲ್ಲಿ ಆಲ್ಫಾ, ಬೀಟಾ, ಡೆಲ್ಟಾ ಮತ್ತು ಒಮಿಕ್ರಾನ್ ರೂಪಾಂತರಗಳು ವುಹಾನ್ ವೈರಸ್​ಗಂತ ಎರಡು ಪಟ್ಟು ಹೆಚ್ಚು ದೀರ್ಘಾವಧಿಯ ಬದುಕುಳಿಯುವ ಸಮಯವನ್ನು ಹೊಂದಿರುತ್ತವೆ

Omicron Variant: ಒಮಿಕ್ರಾನ್ ವೈರಸ್ ಪ್ಲಾಸ್ಟಿಕ್ ಮೇಲೆ 8 ದಿನ, ಚರ್ಮದ ಮೇಲೆ 21 ಗಂಟೆ ಜೀವಂತವಾಗಿರಬಲ್ಲದು!
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಕೊವಿಡ್-19ರ ಒಮಿಕ್ರಾನ್ ರೂಪಾಂತರವು (Omicron Variant) ಹೆಚ್ಚು ಸಾಂಕ್ರಾಮಿಕವಾಗಿದ್ದು, ಬಹು ಬೇಗ ಹರಡುತ್ತದೆ. ಇದೀಗ ಹೊಸ ಅಧ್ಯಯನದ ಪ್ರಕಾರ, ಒಮಿಕ್ರಾನ್ ರೂಪಾಂತರವು ಪ್ಲಾಸ್ಟಿಕ್‌ನಲ್ಲಿ 8 ದಿನಗಳವರೆಗೆ ಮತ್ತು ಚರ್ಮದ ಮೇಲೆ 21 ಗಂಟೆಗಳವರೆಗೆ ಜೀವಂತವಾಗಿರಬಲ್ಲದು. ಮೂಲ ತಳಿಯ ಜೊತೆಗೆ ಆಲ್ಫಾ (Alpha), ಬೀಟಾ (Beta), ಗಾಮಾ (Gamma) ಮತ್ತು ಡೆಲ್ಟಾ (Delta) ವೈರಸ್​ ಸೇರಿದಂತೆ ಇತರ ರೂಪಾಂತರಗಳಿಗಿಂತ ಹೆಚ್ಚು ಸಮಯ ಒಮಿಕ್ರಾನ್ ಜೀವಂತವಾಗಿರುತ್ತದೆ.

ಪ್ರಿ-ಪ್ರಿಂಟ್‌ನಲ್ಲಿ ಪ್ರಕಟವಾದ ಅಧ್ಯಯನವನ್ನು ಇನ್ನೂ ಪೀರ್-ರಿವ್ಯೂ ಮಾಡಲಾಗಿಲ್ಲ. SARS-CoV-2 ವುಹಾನ್ ಸ್ಟ್ರೈನ್ ಮತ್ತು ಕಾಳಜಿಯ ಎಲ್ಲಾ ರೂಪಾಂತರಗಳ (VOCs) ನಡುವಿನ ವೈರಲ್ ಪರಿಸರದ ಸ್ಥಿರತೆಯ ವ್ಯತ್ಯಾಸಗಳನ್ನು ವಿಶ್ಲೇಷಿಸಿದೆ. ಪ್ಲಾಸ್ಟಿಕ್ ಮತ್ತು ಚರ್ಮದ ಮೇಲ್ಮೈಗಳಲ್ಲಿ ಆಲ್ಫಾ, ಬೀಟಾ, ಡೆಲ್ಟಾ ಮತ್ತು ಒಮಿಕ್ರಾನ್ ರೂಪಾಂತರಗಳು ವುಹಾನ್ ವೈರಸ್​ಗಂತ ಎರಡು ಪಟ್ಟು ಹೆಚ್ಚು ದೀರ್ಘಾವಧಿಯ ಬದುಕುಳಿಯುವ ಸಮಯವನ್ನು ಹೊಂದಿರುತ್ತವೆ. ಚರ್ಮದ ಮೇಲ್ಮೈಗಳಲ್ಲಿ 16 ಗಂಟೆಗಳಿಗೂ ಹೆಚ್ಚು ಕಾಲ ಒಮಿಕ್ರಾನ್ ಸೋಂಕು ಸಕ್ರಿಯವಾಗಿರುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ.

ಒಮಿಕ್ರಾನ್ ವೈರಸ್ ಶವಗಳ ಮೇಲಿನ ಚರ್ಮದಲ್ಲಿ 21.1 ಗಂಟೆಗಳ ಕಾಲ ಉಳಿದುಕೊಂಡಿತು. ಉಳಿದಂತೆ ವುಹಾನ್ ವೈರಸ್ (8.6 ಗಂಟೆಗಳು), ಗಾಮಾ (11 ಗಂಟೆಗಳು) ಮತ್ತು ಡೆಲ್ಟಾ (16.8 ಗಂಟೆಗಳು) ರೂಪಾಂತರಿಗಳು ಬದುಕುಳಿದಿರುತ್ತವೆ. ಆಲ್ಫಾ (19.6 ಗಂಟೆಗಳು) ಮತ್ತು ಬೀಟಾ (19.1 ಗಂಟೆಗಳು) ರೂಪಾಂತರಿಗಳು ಬದುಕುಳಿಯುವಿಕೆಯು ಕೂಡ ಇದೇ ರೀತಿ ಇದೆ ಎಂದು ಕಂಡುಬಂದಿದೆ.

“ಈ ಹೆಚ್ಚಿನ ಸ್ಥಿರತೆಯು ಡೆಲ್ಟಾ ರೂಪಾಂತರವನ್ನು ಬದಲಿಸಲು ಮತ್ತು ವೇಗವಾಗಿ ಹರಡಲು ಒಮಿಕ್ರಾನ್ ರೂಪಾಂತರವನ್ನು ಅನುಮತಿಸಿದ ಅಂಶಗಳಲ್ಲಿ ಒಂದಾಗಿರಬಹುದು” ಎಂದು ಕ್ಯೋಟೋ ಪ್ರಿಫೆಕ್ಚುರಲ್ ಯುನಿವರ್ಸಿಟಿ ಆಫ್ ಮೆಡಿಸಿನ್ ಇನ್ ಜಪಾನ್​ ಅಧ್ಯಯನ ತಂಡ ತಿಳಿಸಿದೆ.

ಇದಲ್ಲದೆ, ಒಮಿಕ್ರಾನ್ ಪ್ಲಾಸ್ಟಿಕ್ ಮೇಲೆ 193.5 ಗಂಟೆಗಳ ಕಾಲ (ಸುಮಾರು 8 ದಿನಗಳು) ಬದುಕಬಲ್ಲದು ಎಂದು ಅಧ್ಯಯನ ತಂಡವು ಕಂಡುಹಿಡಿದಿದೆ. ಆಲ್ಫಾ, ಬೀಟಾ, ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಎಥೆನಾಲ್ ಪ್ರತಿರೋಧದಲ್ಲಿ ಸ್ವಲ್ಪ ಹೆಚ್ಚಳವನ್ನು ತೋರಿಸಿದರೂ, ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್‌ಗೆ ಒಡ್ಡಿಕೊಂಡ 15 ಸೆಕೆಂಡುಗಳಲ್ಲಿ ಚರ್ಮದ ಮೇಲ್ಮೈಯಲ್ಲಿರುವ ಎಲ್ಲಾ VOCಗಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡವು ಎಂದು ಅಧ್ಯಯನವು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಪ್ರಸ್ತಾಪಿಸಿದಂತೆ ಆಗಾಗ ಕೈ ತೊಳೆದುಕೊಳ್ಳುವುದು, ಸೂಕ್ತವಾದ ಸ್ಯಾನಿಟೈಸರ್ ಬಳಕೆಯನ್ನು ಸಂಶೋಧಕರು ಹೆಚ್ಚು ಶಿಫಾರಸು ಮಾಡಿದ್ದಾರೆ. ಈ ಅಧ್ಯಯನವು ಮೇಲ್ಮೈಯಲ್ಲಿ ಉಳಿದಿರುವ ವೈರಸ್‌ನ ಪ್ರಮಾಣ ಮತ್ತು ಪ್ರಸರಣದ ಅಪಾಯದ ನಡುವಿನ ಸಂಬಂಧದಂತಹ ಮಿತಿಗಳನ್ನು ಈ ಹಂತದಲ್ಲಿ ಇನ್ನೂ ಅಸ್ಪಷ್ಟವಾಗಿದೆ ಎಂದು ಒಪ್ಪಿಕೊಂಡಿದೆ.

ಇದನ್ನೂ ಓದಿ: ಒಮಿಕ್ರಾನ್​​ಗೆ ನಿರ್ದಿಷ್ಟ ಲಸಿಕೆ ತಂತ್ರದ ಅಗತ್ಯವಿದೆ ಎಂದ ಐಸಿಎಂಆರ್; ಯಾಕೆ ಎಂಬುದಕ್ಕೆ ಇಲ್ಲಿದೆ ತಜ್ಞರ ವಿವರಣೆ

ಮುಂಬೈನಲ್ಲಿ ದಾಖಲಾಗುತ್ತಿರುವ ಹೊಸ ಕೊವಿಡ್​ 19 ಕೇಸ್​ಗಳಲ್ಲಿ ಶೇ.89ರಷ್ಟು ಒಮಿಕ್ರಾನ್​ ಪ್ರಕರಣಗಳು; ಸಮೀಕ್ಷೆ ವರದಿ