ಸದ್ಯ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ (Pakistan Prime Minister Imran Khan)ಕುರ್ಚಿ ಅಲ್ಲಾಡುತ್ತಿದೆ. ಯಾವ ಕ್ಷಣದಲ್ಲಿ ಬೇಕಾದರೂ ಅವರ ರಾಜೀನಾಮೆ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಪಾಕಿಸ್ತಾನದಲ್ಲಿ ಆರ್ಥಿಕತೆ ಅಧಃಪತನಕ್ಕೆ ಇಳಿಯಲು ಇಮ್ರಾನ್ ಖಾನ್ ಸರ್ಕಾರವೇ ಕಾರಣ ಎಂದು ಹೇಳಿ, ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ 100 ಶಾಸಕರು ಮಾರ್ಚ್ 8ರಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಅಷ್ಟೇ ಅಲ್ಲ ಇಮ್ರಾನ್ ಖಾನ್ ಪಕ್ಷದ (ತೆಹ್ರೀಕ್-ಎ-ಇನ್ಸಾಫ್ ನ (PTI) (ಪಿಟಿಐ) ಸಂಸ್ಥಾಪಕ ನಜೀಬ್ ಹರೂನ್ ಕೂಡ ಈ ರಾಜಕೀಯ ಪ್ರಕ್ಷುಬ್ಧತೆ ಬಗ್ಗೆ ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಎದ್ದಿರುವ ರಾಜಕೀಯ ಗೊಂದಲ ಪರಿಹಾರವಾಗಲು ಏಕೈಕ ಮಾರ್ಗವೆಂದರೆ, ಇಮ್ರಾನ್ ಖಾನ್ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಎಂದು ಹೇಳಿದ್ದರು.
ಇದೀಗ ಇನ್ನೊಂದು ಬೆಳವಣಿಗೆ ನಡೆದ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದೇ ತಿಂಗಳ ಕೊನೆಯಲ್ಲಿ ನಡೆಯಲಿರುವ ಇಸ್ಲಾಮಿಕ್ ಆರ್ಗನೈಸೇಶನ್ ಕಾರ್ಪೋರೇಶನ್ನ ಸಮ್ಮೇಳನ ಮುಗಿದ ಬಳಿಕ ರಾಜೀನಾಮೆ ನೀಡಬೇಕು ಎಂದು ಇಮ್ರಾನ್ ಖಾನ್ಗೆ ಪಾಕಿಸ್ತಾನ ಸೇನಾ ಆಡಳಿತ ಸೂಚಿಸಿದೆ ಎಂದು ಹೇಳಲಾಗಿದೆ. ಪಾಕಿಸ್ತಾನ ಸೇನೆಗೆ ಜನರಲ್ ಖಮರ್ ಜಾವೇದ್ ಬಾಜ್ವಾ ಮುಖಸ್ಥರಾಗಿದ್ದಾರೆ. ಅವರ ನೇತೃತ್ವದಲ್ಲಿ ಸಭೆ ನಡೆಸಿದ ಬಳಿಕ, ಇಮ್ರಾನ್ ಖಾನ್ ಬಳಿ ರಾಜೀನಾಮೆ ಕೇಳಲಾಗಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಿದ ಜನರಲ್ ಬಾಜ್ವಾ ಮತ್ತು ಉಳಿದ ಮೂವರು ಹಿರಿಯ ಲೆಫ್ಟಿನೆಂಟ್ಗಳು ಇಮ್ರಾನ್ಖಾನ್ರಿಂದ ರಾಜೀನಾಮೆ ಪಡೆಯುವ ನಿರ್ಧಾರ ಮಾಡಿದ್ದಾರೆ. ಸಭೆ ಬಳಿಕ ಬಾಜ್ವಾ ಮತ್ತು ಪಾಕ್ ಗೂಢಚಾರಿ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಸೇರಿ ಇಮ್ರಾನ್ ಖಾನ್ರನ್ನು ಭೇಟಿಯಾಗಿ, ರಾಜೀನಾಮೆ ನೀಡಬೇಕಾಗಿ ತಿಳಿಸಿದ್ದಾರೆಂದು ಪಾಕ್ ಮಾಧ್ಯಮಗಳಲ್ಲಿ ಒಂದಾದ ಕ್ಯಾಪಿಟಲ್ ಟಿವಿ ವರದಿ ಮಾಡಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತು ಸೇನಾ ಆಡಳಿತದ ನಡುವೆ ಕಳೆದ ಕೆಲವು ತಿಂಗಳುಗಳಿಂದಲೂ ಏನೂ ಸರಿಯಲ್ಲ. ಅದರಲ್ಲೂ ಮಾರ್ಚ್ 11ರಂದು ಇಮ್ರಾನ್ ಖಾನ್ ಪ್ರತಿಪಕ್ಷಗಳ ನಾಯಕರನ್ನು ತೀವ್ರವಾಗಿ ಅವಹೇಳನ ಮಾಡಿ ಭಾಷಣ ಮಾಡಿದ್ದರು. ಅದಾದ ಬಳಿಕ ಸೇನಾ ಮುಖ್ಯಸ್ಥ ಬಾಜ್ವಾ, ವಿರೋಧ ಪಕ್ಷಗಳ ನಾಯಕರಿಗೆ ಅಷ್ಟು ಕೀಳುಮಟ್ಟದ ಪದ ಪ್ರಯೋಗ ಮಾಡಬೇಡಿ ಎಂದು ಸೂಚಿಸಿದ್ದರು. ಆಗಿನಿಂದ ಬಿರುಕು ಇನ್ನಷ್ಟು ದೊಡ್ಡದಾಗಿತ್ತು.
ಇದನ್ನೂ ಓದಿ: ಮೈಸೂರಿನಲ್ಲಿ ಒಣಗಿದ ಬೆಳೆಯನ್ನು ಕಂಡು ಕಣ್ಣೀರಾಕಿದ ವೃದ್ಧೆ; ಆಕ್ರೋಶ ಹೊರಹಾಕಿದ ಅಜ್ಜಿ ವಿಡಿಯೋ ಇಲ್ಲಿದೆ
Published On - 11:29 am, Wed, 23 March 22