ಮುಂಬೈ ದಾಳಿಗೆ ಆರ್ಥಿಕ ನೆರವು ಒದಗಿಸಿದ ಭಯೋತ್ಪಾದಕ ಲಖ್ವಿ​ಗೆ 15 ವರ್ಷ ಶಿಕ್ಷೆ ವಿಧಿಸಿದ ಪಾಕ್

| Updated By: ರಾಜೇಶ್ ದುಗ್ಗುಮನೆ

Updated on: Jan 08, 2021 | 6:59 PM

ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ತನ್ನನ್ನು ಬೂದು ಪಟ್ಟಿಗೆ ಸೇರಿಸುವ ಭಯದಿಂದ ಜಾಕಿರ್-ಉರ್-ರೆಹ್ಮಾನ್ ಲಖ್ವಿಗೆ ಪಾಕಿಸ್ತಾನ ಶಿಕ್ಷೆ ವಿಧಿಸಿದೆ ಎಂದು ಹೇಳಲಾಗಿದೆ.

ಮುಂಬೈ ದಾಳಿಗೆ ಆರ್ಥಿಕ ನೆರವು ಒದಗಿಸಿದ ಭಯೋತ್ಪಾದಕ ಲಖ್ವಿ​ಗೆ 15 ವರ್ಷ ಶಿಕ್ಷೆ ವಿಧಿಸಿದ ಪಾಕ್
ಝಾಕಿರ್-ಉರ್-ರೆಹ್ಮಾನ್
Follow us on

ಲಾಹೋರ್: 2008ರ ಮುಂಬೈ ದಾಳಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಜಾಕಿರ್​-ಉರ್-ರೆಹ್ಮಾನ್ ಲಖ್ವಿಗೆ ಪಾಕಿಸ್ತಾನದ ನ್ಯಾಯಾಲಯ  15 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಭಯೋತ್ಪಾದನಾ ಕೃತ್ಯಗಳಿಗೆ ಹಣ ಸಹಾಯ ಮಾಡುತ್ತಿದ್ದ ಆರೋಪದಡಿ ಜಾಕಿರ್  ಲಖ್ವಿಯನ್ನು ಪಾಕಿಸ್ತಾನದ ಕೌಂಟರ್ ಟೆರರಿಸಂ ಡಿಪಾರ್ಟ್​ಮೆಂಟ್ (CTD) ಬಂಧಿಸಿತ್ತು. ಈ ಮೊದಲೇ ಒಮ್ಮೆ ಬಂಧನಕ್ಕೊಳಪಟ್ಟಿದ್ದರೂ ಲಾಹೋರ್ ಹೈಕೋರ್ಟ್ 2015ರಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು. ಜಾಮೀನಿಗಾಗಿ ನೀಡಿದ 20 ಲಕ್ಷ ಹಣದ ಮೂಲವನ್ನು ಸಹ ಲಖ್ವಿ ಬಹಿರಂಗಪಡಿಸಿರಲಿಲ್ಲ. ಅಲ್ಲದೇ ಕಳೆದ ವರ್ಷ ಪಾಕಿಸ್ತಾನ ಬಿಡುಗಡೆಗೊಳಿಸಿದ ಭಯೋತ್ಪಾದಕರ ಪಟ್ಟಿಯಲ್ಲೂ ಜಾಕಿರ್-ಉರ್-ರೆಹ್ಮಾನ್ ಲಖ್ವಿಯ ಹೆಸರಿರಲಿಲ್ಲ.

ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಜಾಗತಿಕ ಸಂಸ್ಥೆಯಾದ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATP) ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸುವ ಪ್ರಸ್ತಾಪವೆತ್ತಿತ್ತು. ಪಾಕಿಸ್ತಾನ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗವಹಿಸಿದವರಿಗೆ ಆಶ್ರಯ ನೀಡುತ್ತಿದೆ ಎಂಬ ಆರೋಪದಡಿ ಬೂದು ಪಟ್ಟಿಗೆ ಸೇರಿಸುವ ಕುರಿತು ಚರ್ಚಿಸಲು ಫೆಬ್ರವರಿಯಲ್ಲಿ ಸಭೆ ನಿಯೋಜನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಧನ ಸಹಾಯದ ಕೊರತೆ ಎದುರಾಗಬಹುದು ಎಂಬ ಭಯದಿಂದ ಪಾಕಿಸ್ತಾನ ಜಾಕಿರ್-ಉರ್-ರೆಹ್ಮಾನ್ ಲಖ್ವಿಗೆ ಶಿಕ್ಷೆ ವಿಧಿಸಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನ​ ಕೋರ್ಟ್​ ತೀರ್ಪು: ಡೇನಿಯಲ್ ಪರ್ಲ್ ಕೊಲೆ ಆರೋಪ ಎದುರಿಸುತ್ತಿದ್ದವನ ಬಿಡುಗಡೆ

Published On - 6:51 pm, Fri, 8 January 21