ವಾಷಿಂಗ್ಟನ್: ಭಯೋತ್ಪಾದನೆಯನ್ನು ಎದುರಿಸಲು ಮತ್ತು 2008 ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ಗಳಾದ ಜೈಶ್-ಎ-ಮೊಹಮ್ಮದ್ (JEM) ಸಂಸ್ಥಾಪಕ ಮಸೂದ್ ಅಜರ್ ಮತ್ತು ಲಷ್ಕರ್-ಎ-ತೈಬಾದ (LeT) ಸಾಜಿದ್ ಮಿರ್ ಸೇರಿದಂತೆ ಭಯೋತ್ಪಾದಕರನ್ನು ವಿಚಾರಣೆಗೆ ಒಳಪಡಿಸಲು ಪಾಕಿಸ್ತಾನ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಅಮೆರಿಕದ ಹೊಸ ವರದಿ ತಿಳಿಸಿದೆ. ವಿಳಂಬ ಅಥವಾ ತಾರತಮ್ಯವಿಲ್ಲದೆ ಎಲ್ಲಾ ಭಯೋತ್ಪಾದಕ ಸಂಘಟನೆಗಳನ್ನು ಕಿತ್ತೊಗೆಯುವ ಪ್ರತಿಜ್ಞೆಯಲ್ಲಿ ಪಾಕಿಸ್ತಾನವು “ಸೀಮಿತ ಪ್ರಗತಿ” ಸಾಧಿಸಿದೆ ಎಂದು ಅದು ಹೇಳಿದೆ. “ಭಯೋತ್ಪಾದನೆ ನಿಗ್ರಹಕ್ಕೆ 2015 ರ ರಾಷ್ಟ್ರೀಯ ಕ್ರಿಯಾ ಯೋಜನೆಯ ಅತ್ಯಂತ ಕಷ್ಟಕರ ಅಂಶಗಳ ಮೇಲೆ ಮತ್ತು ನಿರ್ದಿಷ್ಟವಾಗಿ ಎಲ್ಲಾ ಭಯೋತ್ಪಾದಕ ಸಂಘಟನೆಗಳನ್ನು ವಿಳಂಬ ಅಥವಾ ತಾರತಮ್ಯವಿಲ್ಲದೆ ಕಿತ್ತೊಗೆಯುವ ಪ್ರತಿಜ್ಞೆಯಲ್ಲಿ ಅದು ಸೀಮಿತ ಪ್ರಗತಿಯನ್ನು ಸಾಧಿಸಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ 2020ರ ಕಂಟ್ರಿ ರಿಪೋರ್ಟ್ಸ್ ಆನ್ ಟೆರರಿಸಂ (Country Reports on Terrorism)ವರದಿಯಲ್ಲಿ ಹೇಳಿದೆ.
ಅದೇ ಸಮಯದಲ್ಲಿ ಭಯೋತ್ಪಾದಕ ಬೆದರಿಕೆಗಳನ್ನು ಅಡ್ಡಿಪಡಿಸುವಲ್ಲಿ ಭಾರತೀಯ ಭದ್ರತಾ ಏಜೆನ್ಸಿಗಳು ಪರಿಣಾಮಕಾರಿಯಾಗಿವೆ. ಭಯೋತ್ಪಾದನೆಯ ತನಿಖೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಯುನೈಟೆಡ್ ಸ್ಟೇಟ್ಸ್ ಮಾಡಿದ ವಿನಂತಿಗಳಿಗೆ “ಸಕಾಲಿಕವಾಗಿ” ಅವು ಪ್ರತಿಕ್ರಿಯಿಸುತ್ತವೆ ಎಂದು ಯುಎಸ್ ವರದಿ ಹೇಳಿದೆ.
ಫೆಬ್ರವರಿಯಲ್ಲಿ ಮತ್ತು ನವೆಂಬರ್‌ನಲ್ಲಿ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಹಲವು ಆರೋಪಗಳ ಮೇಲೆ ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ತಪ್ಪಿತಸ್ಥ ಎಂದು ಘೋಷಿಸಿತು. ನಂತರ ಐದು ವರ್ಷ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತು. ಆದರೆ ಇತರ ಉಗ್ರ ನಾಯಕರು ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಪಾಕಿಸ್ತಾನದ ಬಗ್ಗೆ ಯುಎಸ್ ವರದಿ ಹೇಳಿದೆ.
ಕಳೆದ ವರ್ಷ ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ವರದಿ ಪಟ್ಟಿ ಮಾಡಿದೆ. ಇದರಲ್ಲಿ ಕ್ವೆಟ್ಟಾದಲ್ಲಿ 15 ಜನರು ಸಾವನ್ನಪ್ಪಿದರು ಮತ್ತು 18 ಜನರು ಗಾಯಗೊಂಡರು. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತು.
ಜೂನ್ 29 ರಂದು ನಾಲ್ಕು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಉಗ್ರಗಾಮಿಗಳು ಬಂದೂಕುಗಳು ಮತ್ತು ಗ್ರೆನೇಡ್‌ಗಳನ್ನು ಹಿಡಿದು ಕರಾಚಿಯ ಪಾಕಿಸ್ತಾನ ಸ್ಟಾಕ್ ಎಕ್ಸ್‌ಚೇಂಜ್‌ನ ಭದ್ರತಾ ತಡೆಗೋಡೆಗೆ ಚಾರ್ಜ್ ಮಾಡಿದರು ಎಂದು ವರದಿ ಹೇಳಿದೆ. ನಂತರ ನಡೆದ ಗುಂಡಿನ ಕಾಳಗದಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದರು. ಅಕ್ಟೋಬರ್ 27 ರಂದು ಪೇಶಾವರದ ಮದರಸಾದಲ್ಲಿ ಧಾರ್ಮಿಕ ಉಪನ್ಯಾಸದಲ್ಲಿ ಐದು ಕೆಜಿ ಐಇಡಿ ಸ್ಫೋಟಗೊಂಡಿತು, ಇದರಲ್ಲಿ ಎಂಟು ಜನರು ಸಾವನ್ನಪ್ಪಿದರು ಮತ್ತು 136 ಜನರು ಗಾಯಗೊಂಡರು.
ಪಾಕಿಸ್ತಾನದ ಕೆಲವು ಮದರಸಾಗಳು ಹಿಂಸಾತ್ಮಕ ಉಗ್ರಗಾಮಿ ಸಿದ್ಧಾಂತವನ್ನು ಬೋಧಿಸುವುದನ್ನು ಮುಂದುವರೆಸುತ್ತವೆ ಎಂದು ವಿದೇಶಾಂಗ ಇಲಾಖೆ ವರದಿ ಹೇಳಿದ್ದು ಈ ಸಂಸ್ಥೆಗಳನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರವು ತೆಗೆದುಕೊಂಡ ಕ್ರಮಗಳನ್ನು ಉಲ್ಲೇಖಿಸಿದೆ.
Published On - 10:32 am, Fri, 17 December 21