ಉತ್ತರ ಕೊರಿಯಾದಲ್ಲಿ 11 ದಿನ ರಾಷ್ಟ್ರೀಯ ಶೋಕಾಚರಣೆ; ನಗೋದು ಕೂಡ ಬ್ಯಾನ್! ಕಾರಣವೇನು ಗೊತ್ತಾ?
North Korea: ಉತ್ತರ ಕೊರಿಯಾದಲ್ಲಿ ಮಾಜಿ ಅಧ್ಯಕ್ಷ ಕಿಮ್ ಜಾಂಗ್ ಇಲ್ 10ನೇ ವರ್ಷದ ಸ್ಮರಣಾರ್ಥ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಯಾರೂ ಸಂತೋಷ ವ್ಯಕ್ತಪಡಿಸಲೇಬಾರದು ಎಂದು ಸರ್ಕಾರ ಆದೇಶಿಸಿದ್ದಾಗಿ ವರದಿಯಾಗಿದೆ.
ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್ ಜಾಂಗ್ ಇಲ್ (Kim Jong Il) ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರಸ್ತುತ ಆಳ್ವಿಕೆ ನಡೆಸುತ್ತಿರುವ ಕಿಮ್ ಜಾಂಗ್ ಉನ್ (Kim Jong Un) ಸರ್ಕಾರವು 11 ದಿನಗಳ ಶೋಕಾಚರಣೆಗೆ ಆದೇಶ ನೀಡಿದೆ. ಕಿಮ್ ಜಾಂಗ್ ಇಲ್ 1994 ರಿಂದ 2011ರ ಡಿಸೆಂಬರ್ 17ರವೆಗೆ ಆಳ್ವಿಕೆ ನಡೆಸಿದ್ದರು. ನಂತರ ಅವರ ಪುತ್ರ ಕಿಮ್ ಜಾಂಗ್ ಉನ್ ಆಳ್ವಿಕೆ ಮುಂದುವರೆಸುತ್ತಿದ್ದು, ತಮ್ಮ ತಂದೆಗೆ ಸ್ಮರಣಾರ್ಥ 11 ದಿನಗಳವರೆಗೆ ಯಾವುದೇ ಸಂತೋಷದ ಲಕ್ಷಣಗಳನ್ನು ವ್ಯಕ್ತಪಡಿಸದಂತೆ ಸಾರ್ವಜನಿಕರಿಗೆ ಆದೇಶ ನೀಡಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ. ಈ ರಾಷ್ಟ್ರೀಯ ಶೋಕಾಚರಣೆಯ ಸಂದರ್ಭದಲ್ಲಿ ಉತ್ತರ ಕೊರಿಯಾದ (North Korea) ಪ್ರಜೆಗಳು ಮದ್ಯಪಾನ ಮಾಡುವುದಕ್ಕೆ ಅವಕಾಶವಿಲ್ಲ. ತುಸು ನಗುವುದಕ್ಕೂ ಅವಕಾಶ ನೀಡಲಾಗಿಲ್ಲ. ಹಾಗೆಯೇ ನಾಗರಿಕರು ವಿನೋದದ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಖಡಕ್ ಆದೇಶ ನೀಡಲಾಗಿದೆ.
ಈಶಾನ್ಯ ಗಡಿ ನಗರವಾದ ಸಿನುಯಿಜುವಿನ ಒಬ್ಬ ನಾಗರಿಕ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ‘‘ಶೋಕ ಸಮಯದಲ್ಲಿ, ನಾವು ಮದ್ಯಪಾನ ಮಾಡಬಾರದು, ನಗಬಾರದು ಅಥವಾ ವಿರಾಮ ಚಟುವಟಿಕೆಗಳಲ್ಲಿ ತೊಡಗಬಾರದು’’ ಎಂದಿದ್ದಾರೆ. ಡಿಸೆಂಬರ್ 17 ಅಂದರೆ ಇಂದು ಉತ್ತರ ಕೊರಿಯನ್ನರಿಗೆ ದಿನಸಿ ಶಾಪಿಂಗ್ ಮಾಡಲು ಸಹ ಅನುಮತಿಸಲಾಗಿಲ್ಲ. ರೇಡಿಯೊ ಫ್ರೀ ಏಷ್ಯಾದೊಂದಿಗೆ ಮಾತನಾಡಿದ ಅವರು, ‘‘ಹಿಂದೆ ಶೋಕಾಚರಣೆಯ ಸಮಯದಲ್ಲಿ ಮದ್ಯಪಾನ ಅಥವಾ ಅಮಲಿನಲ್ಲಿ ಸಿಕ್ಕಿಬಿದ್ದ ಅನೇಕ ಜನರನ್ನು ಬಂಧಿಸಗಿತ್ತು. ಅವರನ್ನು ಸೈದ್ಧಾಂತಿಕ ಅಪರಾಧಿಗಳೆಂದು ಪರಿಗಣಿಸಿ ಕರೆದೊಯ್ಯಲಾಗಿತ್ತು. ಮತ್ತೆಂದೂ ಅವರು ಕಾಣಸಿಗಲಿಲ್ಲ’’ ಎಂದು ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ.
‘‘ಶೋಕ ಸಮಯದಲ್ಲಿ ಕುಟುಂಬದ ಸದಸ್ಯರು ಸತ್ತರೂ, ಜೋರಾಗಿ ಅಳಲು ಅನುಮತಿಸಲಾಗುವುದಿಲ್ಲ. ಶೋಕಾಚರಣೆ ಮುಗಿದ ನಂತರವೇ ದೇಹವನ್ನು ಹೊರತೆಗೆಯಬೇಕು. ಜನರ ಜನ್ಮದಿನಗಳು ಶೋಕ ದಿನದ ಅವಧಿಯಲ್ಲಿದ್ದರೆ ಅದರ ಆಚರಣೆಯೂ ಸಾಧ್ಯವಿಲ್ಲ’’ ಎಂದು ಮೂಲವು ತಿಳಿಸಿದೆ.
ನೈಋತ್ಯ ಪ್ರಾಂತ್ಯದ ದಕ್ಷಿಣ ಹ್ವಾಂಗ್‌ಹೇಯ ಮತ್ತೊಂದು ಮೂಲವು ತನ್ನ ಪ್ರತಿಕ್ರಿಯೆಯಲ್ಲಿ, ಶೋಕಾಚರಣೆಯ ಅವಧಿಯಲ್ಲಿ ಸೂಕ್ತವಾಗಿ ದುಃಖ ವ್ಯಕ್ತಪಡಿಸಲು ವಿಫಲರಾದ ಜನರನ್ನು ವೀಕ್ಷಿಸಲೆಂದೇ ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ‘‘ಡಿಸೆಂಬರ್ ಮೊದಲ ದಿನದಿಂದ, ಸಾಮೂಹಿಕ ಶೋಕಾಚರಣೆಯ ಮನಸ್ಥಿತಿಗೆ ಹಾನಿ ಮಾಡುವವರನ್ನು ದಮನ ಮಾಡುವ ವಿಶೇಷ ಕರ್ತವ್ಯವನ್ನು ಪೊಲೀಸರು ಹೊಂದಿರುತ್ತಾರೆ. ಇದು ಪೊಲೀಸರಿಗೆ ಒಂದು ತಿಂಗಳ ವಿಶೇಷ ಕರ್ತವ್ಯವಾಗಿದ್ದು, ಕಾನೂನು ಜಾರಿ ಅಧಿಕಾರಿಗಳು ನಿದ್ರಿಸಲೂ ಸಮಯವಿಲ್ಲ ಎಂದು ನಾನು ಕೇಳಿದೆ’’ ಎಂದು ಪ್ರತಿಕ್ರಿಯಿಸಿದ್ದಾರೆ.
ಉತ್ತರ ಕೊರಿಯಾದಲ್ಲಿ ಸದ್ಯ ಆಹಾರ ಬಿಕ್ಕಟ್ಟಿನ ಸಮಸ್ಯೆಯಿದೆ. ಆದ್ದರಿಂದ ಶೋಕಾಚರಣೆಯ ಅವಧಿಯಲ್ಲಿ ಬಡತನದಲ್ಲಿರುವವರನ್ನು ನೋಡಿಕೊಳ್ಳಲು ನಾಗರಿಕರ ಗುಂಪುಗಳು ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಆದೇಶಿಸಲಾಗಿದೆ ಎಂದು ಮೂಲವು ತಿಳಿಸಿದೆ.
ಇದನ್ನೂ ಓದಿ:
ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ಹೊಸ ವರ್ಷ!; ವಿಜ್ಞಾನಿಗಳು ಕಂಡುಹಿಡಿದ ಹೊಸ ಗ್ರಹದ ಮಾಹಿತಿ ಇಲ್ಲಿದೆ
Published On - 8:49 am, Fri, 17 December 21