ಉತ್ತರ ಕೊರಿಯಾದಲ್ಲಿ ಸ್ಕ್ವಿಡ್ ಗೇಮ್ ಶೋ ಪ್ರತಿ ವಿತರಿಸಿದ್ದಕ್ಕೆ ವಿದ್ಯಾರ್ಥಿಗೆ ಮರಣದಂಡನೆ; 6 ಮಂದಿಗೆ ಜೈಲು ಶಿಕ್ಷೆ
ಸ್ಕ್ವಿಡ್ ಗೇಮ್ ಒಂಭತ್ತು ಎಪಿಸೋಡ್ಗಳ ಶೋ ಆಗಿದ್ದು, ಒಂದು ಕುತೂಹಲಕಾರಿ, ಆಸಕ್ತಿದಾಯಕ ಕಥಾವಸ್ತುವನ್ನು ಒಳಗೊಂಡಿದೆ.
ಜನಪ್ರಿಯ ನೆಟ್ಫ್ಲಿಕ್ಸ್ ಸರಣಿಯಾದ ಸ್ಕ್ವಿಡ್ ಗೇಮ್ನ್ನು ಕಳ್ಳಸಾಗಣೆ ಮಾಡಿದ ಆರೋಪದಡಿ ಉತ್ತರ ಕೊರಿಯಾದಲ್ಲಿ ವ್ಯಕ್ತಿಯೊಬ್ಬನಿಗೆ ಮರಣದಂಡನೆ ವಿಧಿಸಲಾಗಿದೆ. ಹಾಗೇ, ಈ ವ್ಯಕ್ತಿ ವಿತರಿಸಿದ ಸ್ಕ್ವಿಡ್ ಗೇಮ್ ಶೋವನ್ನು ಅಕ್ರಮವಾಗಿ ವೀಕ್ಷಿಸಿದವರಿಗೆ ಕಠಿಣ ಶ್ರಮದ 5ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ. ಇದೀಗ ಮರಣದಂಡನೆಗೆ ಗುರಿಯಾದ ವ್ಯಕ್ತಿ ಸ್ಕ್ವಿಡ್ ಗೇಮ್ ಶೋ ಪ್ರತಿಯನ್ನು ಚೀನಾದಿಂದ ಉತ್ತರ ಕೊರಿಯಾಕ್ಕೆ ತಂದಿದ್ದ. ಹಾಗೇ ಅದನ್ನು ಯುಎಸ್ಬಿ ಫ್ಲ್ಯಾಶ್ ಡ್ರೈವ್ ಮೂಲಕ ಮಾರಾಟ ಮಾಡಿದ್ದ ಎಂದು ರೇಡಿಯೋ ಫ್ರೀ ಏಷ್ಯಾ ವರದಿ ಮಾಡಿದೆ.
ಈ ಸ್ಕ್ವಿಡ್ ಗೇಮ್ ಒಂಭತ್ತು ಎಪಿಸೋಡ್ಗಳ ಶೋ ಆಗಿದ್ದು, ಒಂದು ಕುತೂಹಲಕಾರಿ, ಆಸಕ್ತಿದಾಯಕ ಕಥಾವಸ್ತುವನ್ನು ಒಳಗೊಂಡಿದೆ. ಭಾರಿ ನಗದು ಬಹುಮಾನ ಗೆಲ್ಲುವ ಆಸೆಯಿಂದ ಒಂದಷ್ಟು ಜನರು, ಮಕ್ಕಳ ನಿಗೂಢ ಆಟಗಳನ್ನು ಆಡಲು ಸೈನ್ಅಪ್ ಆಗುವ ಕಥೆಯನ್ನು ಈ ಒಂಭತ್ತು ಎಪಿಸೋಡ್ಗಳು ಹೇಳುತ್ತವೆ. ಅಂದಹಾಗೆ ಇದು ದಕ್ಷಿಣ ಕೊರಿಯಾದ ಡ್ರಾಮಾ ಶೋ. ಇದೀಗ ಈ ಶೋವನ್ನು ಖರೀದಿಸಿ ಉಳಿದವರಿಗೆ ವಿತರಿಸಿ ಮರಣದಂಡನೆಗೆ ಒಳಗಾದವನು ವಿದ್ಯಾರ್ಥಿಯಾಗಿದ್ದಾನೆ. ಇನ್ನು ಈತ ಓದುತ್ತಿದ್ದ ಶಾಲೆ ಶಿಕ್ಷಕರು ಮತ್ತು ನಿರ್ವಾಹಕರನ್ನೂ ಕೆಲಸದಿಂದ ತೆಗೆದುಹಾಕಲಾಗಿದ್ದು, ಕೆಲಸ ಮಾಡುವಂತೆ ಗಣಿಗಳಿಗೆ ಕಳಿಸಲಾಗಿದೆ. ವಿದ್ಯಾರ್ಥಿ ತಾನು ಚೀನಾದಿಂದ ತಂದು ಇಲ್ಲಿ ತನ್ನ ಆಸಕ್ತಿ ಇರುವ ಸ್ನೇಹಿತರಿಗೆ ವಿತರಿಸಿದ್ದ. ಆದರೆ ಉತ್ತರ ಕೊರಿಯಾದಲ್ಲಿ ಇತ್ತೀಚೆಗಷ್ಟೇ ಅಂಗೀಕರಿಸಲ್ಪಟ್ಟ ಪ್ರತಿಕ್ರಿಯಾತ್ಮಕ ಚಿಂತನೆ ಮತ್ತು ಸಂಸ್ಕೃತಿ ನಿರ್ಮೂಲನೆ ವಿರೋಧಿ ಕಾನೂನಿನ ಅನ್ವಯ ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಲಾಗಿದ್ದು, ಮರಣದದಂಡನೆಗೆ ಗುರಿಪಡಿಸಲಾಗಿದೆ.
ಈ ಕಾನೂನಿನ ಅನ್ವಯ ಉತ್ತರ ಕೊರಿಯಾದಲ್ಲಿ ವಿದೇಶಗಳ ಅದರಲ್ಲೂ ವಿಶೇಷವಾಗಿ ಯುಎಸ್ ಮತ್ತು ದಕ್ಷಿಣ ಕೊರಿಯಾದ ಶೋಗಳನ್ನು ವೀಕ್ಷಿಸುವುದು, ಅದರ ಕಾಪಿಗಳನ್ನು ಇಟ್ಟುಕೊಳ್ಳುವುದು ಮತ್ತು ಇತರರಿಗೆ ವಿತರಿಸುವುದು ಬಹುದೊಡ್ಡ ಅಪರಾಧವಾಗಿದ್ದು, ಮರಣದಂಡನೆಯವರೆಗೂ ಶಿಕ್ಷೆ ನೀಡಬಹುದಾಗಿದೆ. ಉತ್ತರ ಕೊರಿಯಾದಲ್ಲಿ ಇತ್ತೀಚೆಗೆಷ್ಟೇ ಸೌತ್ ಕೊರಿಯಾದ ಪಾಪ್ ಸಂಗೀತ ನಿಷೇಧಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: IPL 2022: ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರ ನೇರ ಆಯ್ಕೆ: ಏನಿದು ನಿಯಮ?