ಈಗಾಗಲೇ ತುಂಬ ವಿಳಂಬವಾಗಿರುವ ಸಾರ್ಕ್ ಶೃಂಗಸಭೆ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ-South Asian Association for Regional Cooperation)ಯಲ್ಲಿ ಪಾಲ್ಗೊಳ್ಳುವಂತೆ ಭಾರತಕ್ಕೆ, ನೆರೆರಾಷ್ಟ್ರ ಪಾಕಿಸ್ತಾನ ಆಹ್ವಾನ ನೀಡಿದೆ. ಸಾರ್ಕ್ ಶೃಂಗಸಭೆ ವರ್ಚ್ಯುವಲ್ ಆಗಿ ನಡೆಯಲಿದ್ದು, ಭಾರತಕ್ಕೆ, ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಮಹಮ್ಮದ್ ಖುರೇಶಿ ಇಂದು ಆಹ್ವಾನ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ್ದ ಖುರೇಶಿ, ಇದೀಗ ಕೊವಿಡ್ 19 ಸಾಂಕ್ರಾಮಿಕ ಮತ್ತೆ ಹೆಚ್ಚುತ್ತಿದೆ. ಹೀಗಾಗಿ ಭಾರತ ಸಾರ್ಕ್ ಶೃಂಗಸಭೆಯಲ್ಲಿ ಭೌತಿಕವಾಗಿ ಪಾಲ್ಗೊಳ್ಳಲು ಇಚ್ಛಿಸದೆ ಇದ್ದರೆ, ವರ್ಚ್ಯುವಲ್ ಆಗಿ ಭಾಗವಹಿಸಬಹುದು ಎಂದು ಹೇಳಿದ್ದರು. ಅಂದರೆ ಈ ಮೂಲಕ ಆಹ್ವಾನ ನೀಡಿದ್ದರು. ಆದರೆ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ನಮಗೆ ಯಾವುದೇ ಔಪಚಾರಿಕ ಆಮಂತ್ರಣ ಕೊಟ್ಟಿಲ್ಲ. ಆ ದೇಶದಿಂದ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಈ ಸಾರ್ಕ್ ಎಂಬುದು ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘಟನೆಯಾಗಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳನ್ನು ಒಳಗೊಂಡ ಪ್ರಾದೇಶಿಕ ಗುಂಪಾಗಿದೆ. 2016ರಿಂದಲೂ ಸಾರ್ಕ್ ಅಷ್ಟೊಂದು ಪರಿಣಾಮಕಾರಿಯಾಗಿ ಸಕ್ರಿಯವಾಗಿಲ್ಲ. 2014ರಲ್ಲಿ ನೇಪಾಳದ ಕಾಠ್ಮಂಡುವಿನಲ್ಲಿ ಸಾರ್ಕ್ ದ್ವೈವಾರ್ಷಿಕ ಶೃಂಗಸಭೆ ನಡೆದಿತ್ತು. ಅದಾದ ನಂತರ 2016ರ ನವೆಂಬರ್ 15-19ರ ಅವಧಿಯಲ್ಲಿ ಇಸ್ಲಮಾಬಾದ್ನಲ್ಲಿ ನಡೆಯಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಉರಿ ವಲಯದಲ್ಲಿ ಉಗ್ರದಾಳಿಯಾಗಿದ್ದರಿಂದ ಭಾರತ ಸರ್ಕಾರ ಪಾಕ್ ಆತಿಥ್ಯ ವಹಿಸಿದ್ದ ಸಾರ್ಕ್ನಲ್ಲಿ ಪಾಲ್ಗೊಳ್ಳಲು ಮುಂದಾಗಲಿಲ್ಲ. ಉರಿಯಲ್ಲಿ ದಾಳಿ ಮಾಡಿದವರು ಪಾಕಿಸ್ತಾನ ಮೂಲದ ಉಗ್ರರೇ ಆಗಿದ್ದಾರೆ. ನಾವು ಸಾರ್ಕ್ ಸಮಿಟ್ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭಾರತ ಹೇಳಿತ್ತು.
ಈ ಬಾರಿ ಸಾರ್ಕ್ ಶೃಂಗಸಭೆ ಆಯೋಜಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಇಂದು ಹೇಳಿಕೊಂಡಿರುವ ಖುರೇಶಿ, ಭಾರತವನ್ನು ದೂಷಿಸಿದ್ದಾರೆ. ಸಾರ್ಕ್ ಒಂದು ಒಳ್ಳೆಯ ವೇದಿಕೆ. ಆದರೆ ಭಾರತ ತನ್ನ ಮೊಂಡುತನದಿಂದ ಈ ಫೋರಮ್ನ್ನು ನಿಷ್ಕ್ರಿಯಗೊಳಿಸಿದೆ. ಅವರು ಇಸ್ಲಮಾಬಾದ್ಗೆ ಬರಲು ಹಿಂಜರಿಯುತ್ತಾರೆ. ಇಲ್ಲಿಗೆ ಬರುವುದಿಲ್ಲ ಎಂದು ಹೇಳಿದರು. ಈಗಲೂ ಹೇಳುತ್ತೇನೆ..ಭಾರತದ ಹಠಕ್ಕೆ ಈ ವೇದಿಕೆ ಹಾಳಾಗುವುದು ಬೇಡ. ಒಮ್ಮೆ ಆ ದೇಶಕ್ಕೆ ಇಸ್ಲಮಾಬಾದ್ಗೆ ಬರಲು ಇಷ್ಟವಿಲ್ಲದೆ ಹೋದಲ್ಲಿ ಅಥವಾ ಕೊವಿಡ್ 19 ಸಾಂಕ್ರಾಮಿಕ ಇದೆ ಎಂಬ ಆತಂಕ ಇದ್ದಲ್ಲಿ ವರ್ಚ್ಯುವಲ್ ಆಗಿಯೇ ಪಾಳ್ಗೊಳ್ಳಲಿ ಎಂದು ಹೇಳಿದ್ದಾರೆ.
ಆದರೆ ಸಾರ್ಕ್ ಶೃಂಗಸಭೆಗೆ ಸಂಬಂಧಪಟ್ಟ ಅಧಿಕೃತ ಆಹ್ವಾನ ನಮಗೆ ಬಂದಿಲ್ಲ ಎಂದು ಭಾರತ ಹೇಳಿದ್ದು ಬಿಟ್ಟರೆ ಇನ್ಯಾವುದೇ ಮಾಹಿತಿಯೂ ಇಲ್ಲ. ಭಾರತ-ಪಾಕ್ ನಡುವೆ ಏನೇನೂ ಸರಿಯಿಲ್ಲ. ಹಾಗೇ, ಸಾರ್ಕ್ನಲ್ಲಿ ಒಂದಾದ ಅಫ್ಘಾನಿಸ್ತಾನದಲ್ಲೂ ಕೂಡ ತೀವ್ರ ಸ್ವರೂಪದ ಅಸ್ಥಿರತೆ ತಾಂಡವವಾಡುತ್ತಿದೆ. ಈ ಒಕ್ಕೂಟದ ಯಾವುದೇ ಒಂದು ದೇಶ ಶೃಂಗಸಭೆ ಮಾಡುತ್ತೇವೆ ಬನ್ನಿ ಎಂದು ಕರೆಯಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಾಗಿಯೇ ನಿರ್ಧಾರ ಮಾಡಬೇಕಾಗುತ್ತದೆ. ಭಾರತದ ನಿಲುವು ಸದ್ಯದಲ್ಲೇ ಪ್ರಕಟವಾಗಲಿದೆ.
ಇದನ್ನೂ ಓದಿ: ಮೂರನೇ ಅಲೆ ಶುರುವಾದರೂ ಜಾತ್ರೆ ಮತ್ತು ಉತ್ಸವಗಳಲ್ಲಿ ಸಹಸ್ರಾರು ಜನ ಸೇರುವುದು ಮುಂದುವರಿದಿದೆ!
Published On - 7:19 pm, Mon, 3 January 22