ಆಸ್ಟ್ರೇಲಿಯಾದಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ, ಆಸ್ಪತ್ರೆಗೆ ದಾಖಲಾಗುವರ ಪ್ರಮಾಣ ದಾಖಲೆ ಮಟ್ಟದಲ್ಲಿ ಏರಿಕೆ; ಭಾರತಕ್ಕೆ ಎಚ್ಚರಿಕೆಯ ಗಂಟೆ
ವಿಕ್ಟೋರಿಯಾದಲ್ಲಿ ಇಂದು 14,020 ಕೇಸ್ಗಳು ದಾಖಲಾಗಿವೆ. ಸೋಮವಾರ 8577 ಸೋಂಕಿತರು ಪತ್ತೆಯಾಗಿದ್ದರು. ಒಂದೇ ದಿನದಲ್ಲಿ ಅರ್ಧದ ಹತ್ತಿರ ಏರಿಕೆಯಾಗಿದ್ದು, ಇಲ್ಲಿ 516 ಜನ ಆಸ್ಪತ್ರೆಗಳಲ್ಲಿ ಇದ್ದಾರೆ.
ಇದೀಗ ಮತ್ತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊವಿಡ್ 19 ಸೋಂಕಿತ(Covid 19 Virus)ರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಆಸ್ಟ್ರೇಲಿಯಾ(Australia)ದಲ್ಲಿ ಇಂದು ದಾಖಲೆ ಮಟ್ಟದಲ್ಲಿ ಕೊರೊನಾ ಕೇಸ್ಗಳು ಕಾಣಿಸಿಕೊಂಡಿವೆ. ಹೀಗಾಗಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ತಪಾಸಣಾ ಕೇಂದ್ರಗಳೂ ತುಂಬಿ ತುಳುಕುತ್ತಿವೆ. ಇಡೀ ಆರೋಗ್ಯ ವ್ಯವಸ್ಥೆಯ ಮೇಲೆ ಮತ್ತೆ ಒತ್ತಡ ಉಂಟಾಗುತ್ತಿದೆ. ಇದು ಭಾರತದ ಪಾಲಿಗೂ ಕೂಡ ಎಚ್ಚರಿಕೆಯ ಸಂಕೇತವಾಗಿದೆ. ಭಾರತದಲ್ಲೂ ಕೂಡ ಇದೀಗ ಕೊವಿಡ್ 19 ಸೋಂಕಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದು ಕೂಡ ಭಾರತದ ಆರೋಗ್ಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ. ಭಾರತದಲ್ಲಿ 2ನೇ ಅಲೆ ಉತ್ತುಂಗಕ್ಕೆ ಏರಿದಾಗ ಆಕ್ಸಿಜನ್, ಬೆಡ್ಗಳ ಕೊರತೆಯಾಗಿತ್ತು. ಅದೇ ಸ್ಥಿತಿ ಮತ್ತೆ ತಲುಪಬಹುದಾದ ಆತಂಕ ಕಾಡುತ್ತಿದೆ.
ಯುಕೆ, ಯುಎಸ್ ಬಳಿಕ ಇದೀಗ ಆಸ್ಟ್ರೇಲಿಯಾದಲ್ಲಿ ಕೊವಿಡ್ 19 ಉತ್ತುಂಗಕ್ಕೇರುತ್ತಿದೆ. ಆಸ್ಟ್ರೇಲಿಯಾದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ನ್ಯೂ ಸೌತ್ ವೇಲ್ಸ್ನಲ್ಲಿ ಇಂದು 23, 131 ಪ್ರಕರಣಗಳು ದಾಖಲಾಗಿವೆ. ಹೊಸ ವರ್ಷದ ಮೊದಲ ದಿನ 22,577 ಹೊಸ ಕೊವಿಡ್ ಸೋಂಕಿನ ಕೇಸ್ಗಳು ದಾಖಲಾಗಿದ್ದವು. ಒಟ್ಟು 83, 376 ಮಂದಿಗೆ ತಪಾಸಣೆ ಮಾಡಲಾಗಿತ್ತು. ಅದರಲ್ಲಿ 23, 131 ಕೇಸ್ಗಳು ದಾಖಲಾಗಿವೆ. 1,344 ಸೋಂಕಿತರು ಆಸ್ಪತ್ರೆಯಲ್ಲಿ ಇದ್ದಾರೆ. ಇದು ಸೆಪ್ಟೆಂಬರ್ಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ. ಅಂದಹಾಗೆ, ಇಲ್ಲಿ ಕೊವಿಡ್ 19 ಪಾಸಿಟಿವಿಟಿ ರೇಟ್ ಶೇ.28ರಷ್ಟು ಇದೆ.
ಇನ್ನೊಂದು ಪ್ರಮುಖ ರಾಜ್ಯ ವಿಕ್ಟೋರಿಯಾದಲ್ಲಿ ಇಂದು 14,020 ಕೇಸ್ಗಳು ದಾಖಲಾಗಿವೆ. ಸೋಮವಾರ 8577 ಸೋಂಕಿತರು ಪತ್ತೆಯಾಗಿದ್ದರು. ಒಂದೇ ದಿನದಲ್ಲಿ ಅರ್ಧದ ಹತ್ತಿರ ಏರಿಕೆಯಾಗಿದ್ದು, ಇಲ್ಲಿ 516 ಜನ ಆಸ್ಪತ್ರೆಗಳಲ್ಲಿ ಇದ್ದಾರೆ. ಅದರಲ್ಲೂ 108 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಒಟ್ಟಾರೆ ಕೊವಿಡ್ 19 ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ಈ ಮಧ್ಯೆ ನ್ಯೂ ಸೌತ್ ವೇಲ್ನ ಮುಖ್ಯ ವೈದ್ಯಾಧಿಕಾರಿ ಕೆರ್ರಿ ಚಾಂಟ್, ಕೊರೊನಾ ಸೋಂಕು ಕಾಣಿಸಿಕೊಂಡ ತಕ್ಷಣ ಹೋಗಿ ಆಸ್ಪತ್ರೆಗಳಿಗೆ ದಾಖಲಾಗಬೇಡಿ. ಅಗತ್ಯ ಇಲ್ಲದಿದ್ದರೆ ಮನೆಯಲ್ಲೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆದುಕೊಳ್ಳಿ. ಅನಗತ್ಯವಾಗಿ ಆರೋಗ್ಯ ವ್ಯವಸ್ಥೆಗೆ ಹೊರೆಯಾಗಬಾರದು ಎಂದಿದ್ದಾರೆ.
Published On - 4:54 pm, Tue, 4 January 22