ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಶೀಘ್ರ ಸಾವ್ರರ್ತಿಕ ಚುನಾವಣೆ (Pakistan Politics) ಘೋಷಿಸಬೇಕು. ಇಲ್ಲದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ (Imran Khan) ಗುರುವಾರ ಸರ್ಕಾರವನ್ನು ಎಚ್ಚರಿಸಿದ್ದಾರೆ. ಪಾಕ್ ರಾಜಧಾನಿ ಇಸ್ಲಾಮಾಬಾದ್ಗೆ ಸಾವಿರಾರು ಬೆಂಬಲಿಗರೊಂದಿಗೆ ಬಂದು ಪ್ರತಿಭಟನೆ ನಡೆಸಿದ ಅವರು, ತಮ್ಮ ರಾಜಕೀಯ ವಿರೋಧಿಗಳಿಗೆ ತಾವು ಹೊಂದಿರುವ ಜನಬೆಂಬಲ ಎಂಥದ್ದು ಎಂದು ತೋರಿಸಿದರು.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಕಳೆದ 24 ಗಂಟೆಗಳಿಂದ ಅಕ್ಷರಶಃ ಮುತ್ತಿಗೆಯಲ್ಲಿದ್ದಂತೆ ಇತ್ತು. ಇಮ್ರಾನ್ ಖಾನ್ ಬೆಂಬಲಿಗರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿದ್ದಲ್ಲದೆ, ಟ್ರಾಫಿಕ್ ಅಸ್ತವ್ಯಸ್ತಗೊಳ್ಳುವಂತೆ ಮಾಡಿದ್ದರು. ಪ್ರತಿಭಟನಾಕಾರರು ನಗರ ಪ್ರವೇಶಿಸದಂತೆ ತಡೆಯಲು ಸರ್ಕಾರವು ಎಲ್ಲ ಪ್ರಯತ್ನ ಮಾಡಿತ್ತು. ನಗರಕ್ಕೆ ಪ್ರವೇಶ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿತ್ತು. ಆದರೆ ಸುಪ್ರೀಂಕೋರ್ಟ್ ನೀಡಿದ ತುರ್ತು ಆದೇಶದ ಅನ್ವಯ ಪ್ರತಿಭಟನಾಕಾರರ ನಗರ ಪ್ರವೇಶಕ್ಕೆ ಅವಕಾಶ ನೀಡಬೇಕಾಯಿತು.
ಕಳೆದ ತಿಂಗಳು ಅವಿಶ್ವಾಸ ಗೊತ್ತುವಳಿಯ ಮೂಲಕ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದ ಇಮ್ರಾನ್ ಖಾನ್ ನಂತರದ ದಿನಗಳಲ್ಲಿ ದೇಶಾದ್ಯಂತ ಪ್ರತಿಭಟನೆಗಳನ್ನು ಸಂಘಟಿಸಲು ಆರಂಭಿಸಿದರು. ತಾವು ಅಧಿಕಾರ ಕಳೆದುಕೊಳ್ಳಲು ವಿದೇಶಿ ಸಂಚು ಕಾರಣ ಎಂದು ಎಲ್ಲೆಡೆ ಆರೋಪಿಸುತ್ತಾ, ‘ತಕ್ಷಣ ಚುನಾವಣೆ ನಡೆಸಬೇಕು’ ಎಂದು ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಒತ್ತಾಯಿಸುತ್ತಿದ್ದರು.
‘ವಿದೇಶಿ ಸಂಚಿನ ಭಾಗವಾಗಿ ಅಧಿಕಾರಕ್ಕೆ ಬಂದಿರುವ ಸರ್ಕಾರವು ಇನ್ನು ಆರು ದಿನಗಳಲ್ಲಿ ಚುನಾವಣೆ ಘೋಷಿಸಬೇಕು. ಸಂಸತ್ತು ವಿಸರ್ಜಿಸಿ, ಜೂನ್ ತಿಂಗಳಲ್ಲಿ ಚುನಾವಣೆ ನಡೆಸಿ’ ಎಂದು ಒತ್ತಾಯಿಸಿದ್ದರು. ಜಾಥಾದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಪ್ರತಿಭಟನಾಕಾರರು ಇಮ್ರಾನ್ ಹೇಳಿಕೆಗೆ ದನಿಗೂಡಿಸಿದ್ದರು. ಚುನಾವಣೆ ಘೋಷಿಸದಿದ್ದರೆ ಇನ್ನೊಂದು ಜನಜಾಥಾ ಆಯೋಜಿಸಿ ಇಸ್ಲಾಮಾಬಾದ್ಗೆ ಬರುತ್ತೇನೆ. ಸದ್ಯಕ್ಕೆ ಎಲ್ಲ ಬೆಂಬಲಿಗರೂ ಮನೆಗಳಿಗೆ ಹೋಗಬೇಕು ಎಂದು ವಿನಂತಿಸಿದರು.
ಸಂಸತ್ತು ವಿಸರ್ಜಿಸಿ ಚುನಾವಣೆ ನಡೆಸಬೇಕು ಎನ್ನುವ ಇಮ್ರಾನ್ ಖಾನ್ ವಿನಂತಿಗೆ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಈವರೆಗೆ ಸೊಪ್ಪು ಹಾಕಿಲ್ಲ. ‘ಚುನಾವಣೆ ನಡೆಸುವ ಯಾವುದೇ ಉದ್ದೇಶ ತನಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ನಡೆಸಬೇಕೆಂಬ ಇಮ್ರಾನ್ ಖಾನ್ ಆಗ್ರಹಕ್ಕೆ ದನಿಗೂಡಿಸಿ ಇಸ್ಲಾಮಾಬಾದ್ಗೆ ಸಾವಿರಾರು ಮಂದಿ ಬಂದಿದ್ದರು. ತಮ್ಮನ್ನು ತಡೆಯಲು ಯತ್ನಿಸಿದ ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು. ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ ಪೊಲೀಸರು ಹಲವು ಬಾರಿ ಅಶ್ರುವಾಯು ಶೆಲ್ಗಳನ್ನು ಸಿಡಿಸಿದರು.
ಇಸ್ಲಾಮಾಬಾದ್ ಮಾತ್ರವಲ್ಲ, ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿ ನಗರಗಳಲ್ಲಿಯೂ ಇಮ್ರಾನ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ದೇಶದ ವಿವಿಧೆಡೆ ನಡೆದ ಪ್ರತಿಭಟನಾ ಜಾಥಾಗಳಲ್ಲಿ ಪಾಲ್ಗೊಂಡಿದ್ದ 1,700 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಾಥಾಗಳಿಗೆ ಶಸ್ತ್ರಾಸ್ತ್ರ ಕೊಂಡೊಯ್ಯಲು ಯತ್ನಿಸಿದ ಇಮ್ರಾನ್ ಬೆಂಬಲಿಗರ ಮನೆಗಳ ಮೇಲೆಯೂ ಪೊಲೀಸರು ದಾಳಿ ನಡೆಸಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Thu, 26 May 22