ನಾವು ಎಂದಿಗೂ ಶಾಂತಿಯ ಪರ; ಭಾರತ-ಪಾಕಿಸ್ತಾನ ಕದನವಿರಾಮ ಒಪ್ಪಂದ ಸ್ವಾಗತಿಸಿ ಇಮ್ರಾನ್ ಖಾನ್ ಟ್ವೀಟ್

| Updated By: ganapathi bhat

Updated on: Apr 06, 2022 | 7:40 PM

Ceasefire Agreement: ಗಡಿನಿಯಂತ್ರಣ ರೇಖೆಯಲ್ಲಿ ಕದನವಿರಾಮ ಶಾಂತಿ ಒಪ್ಪಂದವನ್ನು ಸ್ವಾಗತಿಸುತ್ತೇನೆ. ಆದರೆ, ಹೆಚ್ಚಿನ ಅಭಿವೃದ್ಧಿಗಾಗಿ ಸೂಕ್ತ ವಾತಾವರಣ ನಿರ್ಮಿಸುವ ವಿಚಾರ ಭಾರತ ದೇಶವನ್ನು ಅವಲಂಬಿಸಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ನಾವು ಎಂದಿಗೂ ಶಾಂತಿಯ ಪರ; ಭಾರತ-ಪಾಕಿಸ್ತಾನ ಕದನವಿರಾಮ ಒಪ್ಪಂದ ಸ್ವಾಗತಿಸಿ ಇಮ್ರಾನ್ ಖಾನ್ ಟ್ವೀಟ್
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
Follow us on

ಇಸ್ಲಾಮಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನವಿರಾಮ ಒಪ್ಪಂದವನ್ನು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸ್ವಾಗತಿಸಿದ್ದಾರೆ. ದ್ವಿರಾಷ್ಟ್ರಗಳ ಸಂಬಂಧ ಸುಸೂತ್ರವಾಗಿರಲು ಸೂಕ್ತ ವಾತಾವರಣ ನಿರ್ಮಿಸುವ ವಿಚಾರಗಳು ಭಾರತದ ನಡೆಯನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ. ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕವೇ ಪರಿಹರಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.

ಗಡಿ ನಿಯಂತ್ರಣ ರೇಖೆ ಮತ್ತಿತರ ಭಾಗದಲ್ಲಿ ಯಾವುದೇ ರೀತಿಯಲ್ಲಿ ಕದನವಿರಾಮ ಉಲ್ಲಂಘಿಸುವುದಿಲ್ಲ ಎಂದು ಗುರುವಾರ (ಫೆ.25) ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಜಂಟಿ ಹೇಳಿಕೆ ನೀಡಿದ್ದರು.

ಗಡಿನಿಯಂತ್ರಣ ರೇಖೆಯಲ್ಲಿ ಕದನವಿರಾಮ ಶಾಂತಿ ಒಪ್ಪಂದವನ್ನು ಸ್ವಾಗತಿಸುತ್ತೇನೆ. ಆದರೆ, ಹೆಚ್ಚಿನ ಅಭಿವೃದ್ಧಿಗಾಗಿ ಸೂಕ್ತ ವಾತಾವರಣ ನಿರ್ಮಿಸುವ ವಿಚಾರ ಭಾರತ ದೇಶವನ್ನು ಅವಲಂಬಿಸಿದೆ. ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ (UNSC) ಪ್ರಕಾರ ದೀರ್ಘಾವಧಿ ಬೇಡಿಕೆ ಹಾಗೂ ಕಾಶ್ಮೀರಿ ಜನರ ಹಕ್ಕುಗಳನ್ನು ಪೂರ್ಣಗೊಳಿಸಲು ಸ್ವಯಂ ನಿರ್ಣಯ ಕೈಗೊಳ್ಳಬೇಕಿದೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ನಾವು ಎಂದಿಗೂ ಶಾಂತಿಯ ಪರವಾಗಿ ನಿಂತಿದ್ದೇವೆ. ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಲು ತಯಾರಿದ್ದೇವೆ ಎಂದು ಸರಣಿ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಗುರುವಾರ ಫೆ.24ರಂದು ಹೊಸದಾಗಿ ಕದನವಿರಾಮ ಒಪ್ಪಂದವನ್ನು ಮಾಡಿಕೊಂಡಿತ್ತು. ಹಾಟ್​ಲೈನ್ ಮಾತುಕತೆಯ ಬಳಿಕ, ಫೆ. 24 ಮಧ್ಯರಾತ್ರಿಯಿಂದ ಅಂದರೆ ಫೆ.25ರಿಂದ ಈ ನಿರ್ಣಯ ಜಾರಿಯಾಗುವ ಬಗ್ಗೆ ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಜಂಟಿ ಹೇಳಿಕೆ ನೀಡಿದ್ದರು.

ಬಾಲಾಕೋಟ್​ನಲ್ಲಿ 2019ರ ಫೆ.26ರಂದು ಭಾರತೀಯ ವಾಯುಸೇನೆ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮೂಲಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಫೆ.27ರಂದು ಪಾಕ್ ವಾಯುಸೇನೆ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನ ಮಾಡಿತ್ತು. ಈ ಘಟನೆ ನಡೆದು ಎರಡು ವರ್ಷಗಳನ್ನು ಪೂರೈಸಿರುವ ಈ ದಿನ, ಇಮ್ರಾನ್ ಖಾನ್ ಸರಣಿ ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನ ಯಾವತ್ತೂ ಶಾಂತಿಯ ಪರ ನಿಲ್ಲುತ್ತದೆ ಎಂದು ಬರೆದುಕೊಂಡಿದ್ದಾರೆ.

ಜತೆಗೆ, ಬಂಧಿತ ಭಾರತೀಯ ಯೋಧನನ್ನು ಹಿಂತಿರುಗಿ ಕಳುಹಿಸುವ ಮೂಲಕ ಪಾಕಿಸ್ತಾನ ಜವಾಬ್ದಾರಿಯುತ ನಡವಳಿಕೆಯನ್ನು ತೋರಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: ಬಾಲಾಕೋಟ್ ದಾಳಿಗೆ 2 ವರ್ಷ: ಭಾರತ-ಪಾಕ್ ನಡುವೆ ಹೊಸ ಕದನವಿರಾಮ ಒಪ್ಪಂದ; ಬದ್ಧವಾಗಿರುವುದೇ ಪಾಕ್?

Abhinandan Varthaman Video: ಅಭಿನಂದನ್ ವರ್ಧಮಾನ್ ಮಾತಾಡಿರುವ ವೀಡಿಯೋ ಹಂಚಿಕೊಂಡ ಪಾಕ್ ಮಾಧ್ಯಮ; ವೀಡಿಯೋದಲ್ಲಿ ಏನಿದೆ? 

Published On - 6:27 pm, Sat, 27 February 21