ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಕೋವಿಡ್-19

ಪಾಕಿಸ್ತಾನದ ಪಿಎಂ ಶೆಹಬಾಜ್ ಷರೀಫ್ ಅವರಿಗೆ ಕೋವಿಡ್-19 ದೃಢಪಟ್ಟಿದೆ ಎಂದು ಮಾಹಿತಿ ಸಚಿವೆ ಮರಿಯುಮ್ ಔರಂಗಜೇಬ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಕೋವಿಡ್-19
ಶೆಹಬಾಜ್ ಷರೀಫ್
Updated By: ರಶ್ಮಿ ಕಲ್ಲಕಟ್ಟ

Updated on: Nov 15, 2022 | 2:55 PM

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರಿಗೆ ಕೋವಿಡ್-19 (Covid-19) ದೃಢಪಟ್ಟಿದೆ ಎಂದು ಮಾಹಿತಿ ಸಚಿವೆ ಮರಿಯುಮ್ ಔರಂಗಜೇಬ್ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಷರೀಫ್ ಇತ್ತೀಚೆಗೆ ಲಂಡನ್‌ನಿಂದ ಹಿಂದಿರುಗಿದ್ದರು. ಅಲ್ಲಿ ಅವರು ತಮ್ಮ ಸಹೋದರ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿದ್ದರು. ಶೆಹಬಾಜ್ ಷರೀಫ್ ಅವರು ಕಳೆದ ಎರಡು ದಿನಗಳಿಂದ ಅಸ್ವಸ್ಥರಾಗಿದ್ದಾರೆ.ವೈದ್ಯರ ಸಲಹೆಯ ಮೇರೆಗೆ ಮಂಗಳವಾರ  ಕೋವಿಡ್ ಪರೀಕ್ಷೆ ಮಾಡಿಸಿದ್ದು, ಅದು ಪಾಸಿಟಿವ್ ಆಗಿದೆ ಎಂದು ಮಾಹಿತಿ ಸಚಿವೆ ಟ್ವೀಟ್ ಮಾಡಿದ್ದಾರೆ.

 

ಪ್ರಧಾನ ಮಂತ್ರಿ ಶೆಹಬಾಜ್ ಅವರ ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸುವಂತೆ ಸಚಿವೆ ರಾಷ್ಟ್ರಕ್ಕೆ ಮತ್ತು ಪಿಎಂಎಲ್-ಎನ್ ಕಾರ್ಯಕರ್ತರಿಗೆ ಮನವಿ ಮಾಡಿದರು.

ಈ ವರ್ಷ ಜನವರಿಯಲ್ಲಿ ಮತ್ತು 2020 ರ ಜೂನ್‌ನಲ್ಲಿಯೂ ಪಾಕ್ ಪ್ರಧಾನಿಗೆ ಕೋವಿಡ್ ತಗುಲಿತ್ತು. ಇದೀಗ ಪಾಕ್ ಪ್ರಧಾನಿ ಕೊರೊನಾ ವೈರಸ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದು ಇದು ಮೂರನೇ ಬಾರಿ.

ಕೆಲವು ದಿನಗಳ ಹಿಂದೆಯಷ್ಟೇ ಶೆಹಬಾಜ್ ಅವರು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಅವರೊಂದಿಗೆ ರಾಜಕೀಯ ಸಮಾಲೋಚನೆ ನಡೆಸಿ ಬ್ರಿಟನ್‌ನಿಂದ ಪಾಕಿಸ್ತಾನಕ್ಕೆ ಬಂದಿದ್ದರು. ಭೇಟಿಯ ವೇಳೆ ಖವಾಜಾ ಆಸಿಫ್ ಸೇರಿದಂತೆ ಪಿಎಂಎಲ್-ಎನ್ ನಾಯಕರು ಅವರ ಜೊತೆಗಿದ್ದರು ಎಂದು ದಿ ನ್ಯೂಸ್ ಇಂಟರ್‌ನ್ಯಾಶನಲ್ ವರದಿ ಮಾಡಿದೆ. ಅವರು ಮೊದಲೇ ವಾಪಸ್ ಬರಬೇಕಿತ್ತು. ಆದರೆ ಅವರ ಆರೋಗ್ಯ ಹದಗೆಟ್ಟ ಕಾರಣ ಬರುವುದು ವಿಳಂಬವಾಯಿತು. ಅವರ ಒತ್ತಡದ ವೇಳಾಪಟ್ಟಿ ಆರೋಗ್ಯದ ಮೇಲೆ ಪರಿಣಾಮ ಬೀರಿದೆ . ಹಾಗಾಗಿ ಅವರು ಲಂಡನ್ ನಲ್ಲಿ ಹೆಚ್ಚು ದಿನ ಉಳಿದರು ಎಂದು ಕುಟುಂಬದ ಮೂಲಗಳು ಹೇಳಿವೆ.

ಷರೀಫ್ ಕುಟುಂಬಕ್ಕೆ ಹತ್ತಿರವಿರುವ ಮೂಲಗಳ ಪ್ರಕಾರ, ಶನಿವಾರ ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಪಿಎಂ ಶೆಹಬಾಜ್ ಅವರಿಗೆ ಜ್ವರವಿದ್ದು ಅವರ ಕುಟುಂಬವು ಪ್ರಯಾಣಿಸದಂತೆ ಸಲಹೆ ನೀಡಿತು. ಆದ್ದರಿಂದ ಅವರು ಭಾನುವಾರದ ಪ್ರಯಾಣವನ್ನು ಮರು ನಿಗದಿಪಡಿಸಿದ್ದರು ಎಂದು ದಿ ನ್ಯೂಸ್ ಇಂಟರ್‌ನ್ಯಾಶನಲ್ ವರದಿ ಮಾಡಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Tue, 15 November 22