G-20 Summit: ರಷ್ಯಾ – ಉಕ್ರೇನ್ ಕದನ ವಿರಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ

ಇಂದಿನ ರಸಗೊಬ್ಬರ ಕೊರತೆಯೇ ನಾಳಿನ ಆಹಾರ ಬಿಕ್ಕಟ್ಟಿಗೆ ದಾರಿ. ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ನಾವೆಲ್ಲ ಜತೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದೂ ಪ್ರಧಾನಿ ಮೋದಿ ಹೇಳಿದರು.

G-20 Summit: ರಷ್ಯಾ - ಉಕ್ರೇನ್ ಕದನ ವಿರಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ
ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿImage Credit source: PTI
Follow us
TV9 Web
| Updated By: Ganapathi Sharma

Updated on:Nov 15, 2022 | 10:38 AM

ಬಾಲಿ: ರಷ್ಯಾ ಹಾಗೂ ಉಕ್ರೇನ್ ನಡುವೆ ಕದನ ವಿರಾಮ ಘೋಷಿಸುವಂತೆ ಮಾಡಬೇಕಿದೆ. ಅದಕ್ಕಾಗಿ ರಾಜತಾಂತ್ರಿಕ ಮಾರ್ಗದ ಮೂಲಕ ದಾರಿ ಕಂಡುಕೊಳ್ಳಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ (G20 Summit) ಸದಸ್ಯ ರಾಷ್ಟ್ರಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲ ಜತೆಯಾಗಿ ಉಕ್ರೇನ್​ನಲ್ಲಿ ಕದನ ವಿರಾಮ ಜಾರಿಗೆ ಬರುವಂತೆ ಮಾಡಬೇಕಿದೆ. ನಾನಿದನ್ನು ಹಲವು ಬಾರಿ ಹೇಳಿದ್ದೇನೆ, ಇದೀಗ ಪುನರುಚ್ಚರಿಸುತ್ತಿದ್ದೇನೆ ಎಂದು ಕರೆ ನೀಡಿದರು.

ಜಗತ್ತು ಕೋವಿಡ್ ಸಾಂಕ್ರಾಮಿಕದ ನಂತರದ ಹಂತಕ್ಕೆ ಬಂದಿದೆ. ನಾವೀಗ ವಿಶ್ವದಲ್ಲಿ ಶಾಂತಿ, ಸಾಮರಸ್ಯ ನೆಲೆಸುವಂತೆ ಮಾಡಬೇಕಿದೆ. ಜನರಿಗೆ ಭದ್ರತೆ ಮತ್ತು ಸುರಕ್ಷಿತ ವಾತಾವರಣ ನಿರ್ಮಿಸಬೇಕಿದೆ. ವಿಶ್ವಕ್ಕೆ ಶಾಂತಿ ಸಂದೇಶ ನೀಡೋಣ ಎಂದು ಮೋದಿ ಕರೆ ನೀಡಿದರು.

‘ಪೂರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳೋಣ’

ಇಂದಿನ ರಸಗೊಬ್ಬರ ಕೊರತೆಯೇ ನಾಳಿನ ಆಹಾರ ಬಿಕ್ಕಟ್ಟಿಗೆ ದಾರಿ. ಇದಕ್ಕೆ ಜಗತ್ತು ಇನ್ನೂ ಪರಿಹಾರ ಕಂಡುಕೊಂಡಿಲ್ಲ. ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ನಾವೆಲ್ಲ ಜತೆಯಾಗಿ ಕಾರ್ಯನಿರ್ವಹಿಸಬೇಕಿದೆ. ಭಾರತದಲ್ಲಿ ಆಹಾರ ಭದ್ರತೆಗಾಗಿ ನಾವು ನೈಸರ್ಗಿಕ ಕೃಷಿ, ಪೌಷ್ಟಿಕಾಂಶಯುಕ್ತ ಆಹಾರ ಬೆಳೆಗಳು, ರಾಗಿಯಂಥ ಸಾಂಪ್ರದಾಯಿಕ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ರಾಗಿಯಿಂದ ಜಾಗತಿಕ ಮಟ್ಟದಲ್ಲಿ ಅಪೌಷ್ಟಿಕತೆ ಹಾಗೂ ಹಸಿವನ್ನು ಹೋಗಲಾಡಿಸಲು ಸಾಧ್ಯವಿದೆ ಎಂದು ಮೋದಿ ಹೇಳಿದರು.

ಜಾಗತಿಕ ಆರ್ಥಿಕ ಬೆಳವಣಿಗೆಗೆ ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತದ ಇಂಧನ ಭದ್ರತೆ ಕೂಡ ಬಹು ಮುಖ್ಯ. ಇಂಧನ ಮಾರುಕಟ್ಟೆಯ ಪೂರೈಕೆ ಮೇಲಿನ ನಿರ್ಬಂಧಗಳನ್ನು ನಾವು ಪ್ರೋತ್ಸಾಹಿಸಬಾರದು. ಶುದ್ಧ ಇಂಧನ ಮತ್ತು ಪರಿಸರದ ವಿಚಾರದಲ್ಲಿ ಭಾರತ ಬದ್ಧವಾಗಿದೆ ಎಂದು ಅವರು ಹೇಳಿದರು.

2030ರ ವೇಳೆಗೆ ನಾವು ಬಳಸುವ ಶೇಕಡಾ 50ರಷ್ಟು ವಿದ್ಯುತ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ತಯಾರಾಗಲಿದೆ. ಇಂಧನ ಪರಿವರ್ತನೆಗಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಮಯಕ್ಕೆ ಸರಿಯಾಗಿ ಉತ್ತಮ ತಂತ್ರಜ್ಞಾನ ಮತ್ತು ಹಣಕಾಸಿನ ಲಭ್ಯತೆ ಸಿಗಬೇಕಾದ್ದು ಅತೀ ಅಗತ್ಯ ಎಂದು ಮೋದಿ ಪ್ರತಿಪಾದಿಸಿದರು.

ಬೈಡನ್ ಭೇಟಿಯಾದ ಮೋದಿ

ಜಿ-20 ಶೃಂಗಸಭೆಗೂ ಮುನ್ನ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾದರು. ಶೃಂಗಸಭೆಯಲ್ಲಿ ಮಾತನಾಡಿದ ಬಳಿಕ ಟ್ವೀಟ್ ಮಾಡಿ, ‘ಆಹಾರ ಮತ್ತು ಇಂಧನ ಭದ್ರತೆಗೆ ಸಂಬಂಧಿಸಿ ಜಿ-20 ಶೃಂಗಸಭೆಯಲ್ಲಿ ಮಾತನಾಡಿದೆ. ನಮ್ಮ ನಾಗರಿಕರಿಗೆ ಆಹಾರ ಭದ್ರತೆ ಒದಗಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಉಲ್ಲೇಖಿಸಿದೆ. ಆಹಾರ ಮತ್ತು ರಸಗೊಬ್ಬರ ಪೂರೈಕೆ ಸರಪಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯಗಳ ಬಗ್ಗೆ ಒತ್ತು ನೀಡಬೇಕೆಂದೂ ಹೇಳಿದೆ’ ಎಂದು ಉಲ್ಲೇಖಿಸಿದ್ದಾರೆ.

ಮತ್ತಷ್ಟು ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:18 am, Tue, 15 November 22