ಪಾಕಿಸ್ತಾನ(Pakistan)ದಲ್ಲಿ ಭಾರೀ ಮಳೆಯಿಂದಾಗಿ, ಅನೇಕ ಮನೆಗಳು ಕುಸಿದು ಕನಿಷ್ಠ 37 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 48 ಗಂಟೆಗಳಲ್ಲಿ ದೇಶಾದ್ಯಂತ ಭಾರೀ ಮಳೆ(Rain)ಯಿಂದಾಗಿ ಕನಿಷ್ಠ 37 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ. ಮಳೆಗೆ ಹಲವು ಮನೆಗಳು ಕುಸಿದಿದ್ದು, ಭೂಕುಸಿತದಿಂದ ರಸ್ತೆಗಳು ಬಂದ್ ಆಗಿವೆ. ಪಾಕಿಸ್ತಾನದಲ್ಲಿ ಭಾರೀ ಹಿಮಪಾತವಾದ ಸಮಯದಲ್ಲೇ ಇದು ಸಂಭವಿಸಿದೆ.
ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹೇಳಿಕೆಯ ಪ್ರಕಾರ, ಗುರುವಾರ ರಾತ್ರಿಯಿಂದ, ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ವಿವಿಧ ಪ್ರದೇಶಗಳಲ್ಲಿ ಮಳೆಯಿಂದಾಗಿ ಸುಮಾರು 23 ಜನರು ಸಾವನ್ನಪ್ಪಿದ್ದಾರೆ. ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕರಾವಳಿ ನಗರವಾದ ಗ್ವಾದರ್‌ನಲ್ಲಿ ಪ್ರವಾಹದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ.
ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ
ಬಜಾರ್, ಸ್ವಾತ್, ಲೋವರ್ ದಿರ್, ಮಲಕಂಡ್, ಖೈಬರ್, ಪೇಶಾವರ, ಉತ್ತರ, ದಕ್ಷಿಣ ವಜೀರಿಸ್ತಾನ್ ಮತ್ತು ಲಕ್ಕಿ ಮಾರ್ವತ್ ಸೇರಿದಂತೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಹತ್ತು ಜಿಲ್ಲೆಗಳಲ್ಲಿ ಕಳೆದ 48 ಗಂಟೆಗಳಲ್ಲಿ ಧಾರಾಕಾರ ಮಳೆಗೆ 37 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹಲವಾರು ಡಜನ್‌ಗಟ್ಟಲೆ ಜನವಸತಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಕಟ್ಟಡಗಳು ಕುಸಿದುಬಿದ್ದಿವೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಾವುನೋವುಗಳು ಮತ್ತು ಹಾನಿಗಳು ವರದಿಯಾಗಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ, ಈ ಪ್ರದೇಶದಲ್ಲಿ ಐವರು ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಭಯೋತ್ಪಾದನೆ ಬಿಟ್ಟು ಬಂದರೆ ಮಾತ್ರ ಪಾಕಿಸ್ತಾನದ ಜತೆಗೆ ಮಾತುಕತೆಗೆ ಸಿದ್ಧ : ಎಸ್.ಜೈಶಂಕರ್
ಉತ್ತರ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದ ವಕ್ತಾರ ಫೈಜುಲ್ಲಾ ಫರಾಕ್ ಪ್ರಕಾರ, ಮಳೆ ಮತ್ತು ಹಿಮದಿಂದ ಉಂಟಾದ ಭೂಕುಸಿತದಿಂದಾಗಿ ಪಾಕಿಸ್ತಾನವನ್ನು ಚೀನಾದೊಂದಿಗೆ ಸಂಪರ್ಕಿಸುವ ಕಾರಕೋರಂ ಹೆದ್ದಾರಿ ಹಾಗೂ ಇನ್ನೂ ಕೆಲವು ಸ್ಥಳಗಳಲ್ಲಿ ನಿರ್ಬಂಧ ಹೇರಲಾಗಿದೆ.
2022 ರಲ್ಲಿ ಭಾರಿ ಮಳೆಯು ಪಾಕಿಸ್ತಾನದ ಹಲವು ಭಾಗಗಳನ್ನು ಧ್ವಂಸಗೊಳಿಸಿತ್ತು. 1,800 ಕ್ಕೂ ಹೆಚ್ಚು ಜನರನ್ನು ಕೊಂದಿತ್ತು. ಸುಮಾರು 33 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿತ್ತು. ಸುಮಾರು ಎಂಟು ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ