AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistan: ಶಹಬಾಜ್ ಶರೀಫ್ ಎರಡನೇ ಬಾರಿ ಪಾಕಿಸ್ತಾನ ಪ್ರಧಾನಿ; ಇದು ಲೂಸರ್​ಗಳ ಮೈತ್ರಿ ಎಂದು ಇಮ್ರಾನ್ ಖಾನ್ ಪಕ್ಷ ಟೀಕೆ

Shahbaz Sharif To Take Oath As Pak PM On March 4th: ಪಾಕಿಸ್ತಾನದ ಮೂರು ಬಾರಿ ಪ್ರಧಾನಿ ನವಾಜ್ ಶರೀಫ್ ಅವರ ಕಿರಿಯ ಸಹೋದರ ಶಹಬಾಜ್ ಶರೀಫ್ ಎರಡನೇ ಬಾರಿ ಪ್ರಧಾನಿ ಪಟ್ಟ ಪಡೆದಿದ್ದಾರೆ. ಪಾಕಿಸ್ತಾನ ಸಂಸತ್​ನಲ್ಲಿ ನಾಯಕನ ಆಯ್ಕೆಗೆ ನಡೆದ ಮತದಾನದಲ್ಲಿ ಶಹಬಾಜ್ ಶರೀಫ್ ಭಾರೀ ಅಂತರದಿಂದ ಪಿಟಿಐ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಫೆಬ್ರುವರಿಯಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಪಿಟಿಐ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆದ್ದಿದ್ದರು, ಪಿಎಂಎಲ್​ಎನ್, ಪಿಪಿಪಿ ಮೊದಲಾದ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ.

Pakistan: ಶಹಬಾಜ್ ಶರೀಫ್ ಎರಡನೇ ಬಾರಿ ಪಾಕಿಸ್ತಾನ ಪ್ರಧಾನಿ; ಇದು ಲೂಸರ್​ಗಳ ಮೈತ್ರಿ ಎಂದು ಇಮ್ರಾನ್ ಖಾನ್ ಪಕ್ಷ ಟೀಕೆ
ಶಹಬಾಜ್ ಶರೀಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 03, 2024 | 5:30 PM

ಇಸ್ಲಾಮಾಬಾದ್, ಮಾರ್ಚ್ 3: ಪಾಕಿಸ್ತಾನದ ರಾಜಕೀಯ ಅನಿಶ್ಚಿತತೆ ತಾತ್ಕಾಲಿಕ ವಿರಾಮ ಪಡೆದಿದೆ. ಶಹಬಾಜ್ ಶರೀಫ್ (Shahbaz Sharif) ಎರಡನೇ ಬಾರಿ ಪ್ರಧಾನಿಯಾಗಿದ್ದಾರೆ. ಪಿಎಂಎಲ್​ಎನ್, ಪಿಪಿಪಿ ನೇತೃತ್ವದ ಮೈತ್ರಿಕೂಟದಿಂದ ಪ್ರಧಾನಿ ಸ್ಥಾನಕ್ಕೆ ಒಮ್ಮತದಿಂದ ಅವರು ಆಯ್ಕೆಯಾಗಿದ್ದಾರೆ. ಚುನಾವಣೆಗೂ ಮುನ್ನ ಶರೀಫ್ ಅವರೇ ಪ್ರಧಾನಿಯಾಗಿದ್ದರು. ಮೈತ್ರಿ ಪಕ್ಷಗಳು ತನ್ನ ಮೇಲೆ ನಂಬಿಕೆ ಇರಿಸಿ ಈ ಸದನದ ನಾಯಕನನ್ನಾಗಿ ಮಾಡಿವೆ. ಅವುಗಳಿಗೆ ನನ್ನ ಧನ್ಯವಾದ ಎಂದು ಹೇಳಿದ 72 ವರ್ಷದ ಶರೀಫ್, ತನ್ನ ಅಣ್ಣ ನವಾಜ್ ಶರೀಫ್ ಅವರಿಗೂ ಕೃತಜ್ಞತೆ ತಿಳಿಸಿದ್ದಾರೆ.

ನವಾಜ್ ಶರೀಫ್ ಮೂರು ಬಾರಿ ಪಾಕ್ ಪ್ರಧಾನಿ ಆಗಿದ್ದರು. ‘ನನ್ನ ನಾಯಕ (ನವಾಜ್ ಶರೀಫ್) ಮೂರು ಬಾರಿ ಪ್ರಧಾನಿಯಾದಾಗ ದೇಶದಲ್ಲಿ ಆದ ಅಭಿವೃದ್ಧಿ ನಿಜಕ್ಕೂ ಮಾದರಿಯಾಗಿದೆ. ನವಾಜ್ ಅವರನ್ನು ಪಾಕಿಸ್ತಾನದ ನಿರ್ಮಾತೃ ಎಂದರೂ ತಪ್ಪಾಗುವುದಿಲ್ಲ,’ ಎಂದು ಶಹಬಾಜ್ ಶರೀಫ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದರು. ಆದರೆ, ಪಕ್ಷವಾರು ಪಿಎಂಎಲ್​ಎನ್ ಪಕ್ಷ ಅಗ್ರಸ್ಥಾನ ಬಂದರೆ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಎರಡನೇ ಸ್ಥಾನ ಪಡೆದಿದೆ. ಸದನದ ನಾಯಕನಾಗಲು ನಡೆದ ಮತದಾನದಲ್ಲಿ ಪಿಎಂಎಲ್​ಎನ್ ಮತ್ತು ಪಿಪಿಪಿಯ ಒಮ್ಮತದ ಅಭ್ಯರ್ಥಿಯಾಗಿ ಶಹಬಾಜ್ ಶರೀಫ್ ಸ್ಪರ್ಧಿಸಿದ್ದರು. ವಿಪಕ್ಷಗಳು ಉಮರ್ ಅಯೂಬ್ ಖಾನ್ ಅವರನ್ನು ಕಣಕ್ಕಿಳಿಸಿದ್ದವು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಾರತದ ಮೋಸ್ಟ್​ ವಾಂಟೆಡ್ ಉಗ್ರನ ನಿಗೂಢ ಹತ್ಯೆ

336 ಸದಸ್ಯಬಲದ ಪಾಕಿಸ್ತಾನದ ಸಂಸತ್​ನಲ್ಲಿ ಪ್ರಧಾನಿ ಆಯ್ಕೆಗೆ ನಡೆದ ಮತದಾನದಲ್ಲಿ ಶಹಬಾಜ್ ಶರೀಫ್ 201 ವೋಟುಗಳನ್ನು ಪಡೆದರೆ, ಪ್ರತಿಸ್ಪರ್ಧಿ ಉಮರ್ ಅವರು ಗಳಿಸಿದ್ದು ಕೇವಲ 92 ವೋಟು ಮಾತ್ರ. ಶಹಬಾಜ್ ಶರೀಫ್ ಮಾರ್ಚ್ 4, ಸೋಮವಾರದಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಲಜ್ಜೆಗೆಟ್ಟವರ ದರ್ಬಾರ್ ಎಂದ ಪಿಟಿಐ

ಶಹಬಾಜ್ ಶರೀಫ್ ಸದನದ ನಾಯಕನಾಗಿ ಆಯ್ಕೆ ಆಗುತ್ತಿದ್ದಂತೆಯೇ ಪಾಕಿಸ್ತಾನ ಸಂಸತ್ತಿನಲ್ಲಿ ಪ್ರತಿಭಟನೆಗಳು ನಡೆದವು. ಜನಾದೇಶವನ್ನು ಕಡೆಗಣಿಸಿ ಸರ್ಕಾರ ರಚಿಸಲಾಗಿದೆ. ಇದು ಲಜ್ಜೆಗೇಡಿಗಳ ಸರ್ಕಾರ ಎಂದು ಪಿಟಿಐ ಬೆಂಬಲಿತ ಸಂಸದರು ಪ್ರತಿಭಟಿಸಿದರು.

ಇದನ್ನೂ ಓದಿ: ಪಾಕಿಸ್ತಾನದ ಆರ್ಥಿಕತೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ಮಾರುಕಟ್ಟೆ ಬಂಡವಾಳ

‘ನವಾಜ್ ಶರೀಫ್ ಸೋಲನ್ನು ಸ್ವೀಕರಿಸಿದ್ದರೆ ಅವರಿಗೊಂದು ಗೌರವ ಇರುತ್ತಿತ್ತು. ಆದರೆ, ಲಜ್ಜೆಗೆಟ್ಟ ಬದುಕನ್ನು ಅವರು ಆರಿಸಿಕೊಂಡಿದ್ದಾರೆ. ಈ ಲೂಸರ್​ಗಳ ಮೈತ್ರಿಯಲ್ಲಿರುವವರಿಗೆ ಹಿಂದಿನದಕ್ಕಿಂತ ಈ ಬಾರಿ ಪ್ರತೀ ದಿನವೂ ಹೀನಾಯವಾಗಿರುತ್ತದೆ,’ ಎಂದು ಪಿಟಿಐ ಪಕ್ಷ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Sun, 3 March 24