‘ಜಮ್ಮು ಕಾಶ್ಮೀರ ಭಾರತದ ಪ್ರಮುಖ ಭಾಗ’ ಎಂದ ಅಮೆರಿಕಕ್ಕೆ ಪಾಕಿಸ್ತಾನದಿಂದ ಸಮನ್ಸ್!

ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಅವರು ಜಮ್ಮು ಮತ್ತು ಕಾಶ್ಮೀರ ಭೇಟಿಯ ವೇಳೆ ನೀಡಿದ ಹೇಳಿಕೆಯನ್ನು ಖಂಡಿಸಿ, ಪಾಕಿಸ್ತಾನವು ಇಂದು ಇಸ್ಲಮಾಬಾದ್‌ನಲ್ಲಿರುವ ಅಮೆರಿಕದ ಹಿರಿಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು, ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರಿಯನ್ನು ಕರೆಸಿ ಗೋರ್ ಅವರ ಹೇಳಿಕೆ ವಿರುದ್ಧ "ತೀವ್ರ ಪ್ರತಿಭಟನೆ" ದಾಖಲಿಸಲಾಗಿದೆ ಎಂದು ತಿಳಿಸಿದೆ.

ಜಮ್ಮು ಕಾಶ್ಮೀರ ಭಾರತದ ಪ್ರಮುಖ ಭಾಗ ಎಂದ ಅಮೆರಿಕಕ್ಕೆ ಪಾಕಿಸ್ತಾನದಿಂದ ಸಮನ್ಸ್!
Omar Abdullak And Sergio Gor
Image Credit source: PTI

Updated on: Aug 19, 2026 | 11:32 PM

ಇಸ್ಲಮಾಬಾದ್, ಆಗಸ್ಟ್ 19: ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಜಮ್ಮು ಮತ್ತು ಕಾಶ್ಮೀರವನ್ನು (Jammu and Kashmir) ‘ಭಾರತದ ಪ್ರಮುಖ ಭಾಗ’ ಎಂದು ಬಣ್ಣಿಸಿರುವುದು ಪಾಕಿಸ್ತಾನಕ್ಕೆ ತೀವ್ರ ಕಳವಳ ಮೂಡಿಸಿದೆ. ಸೆರ್ಗಿಯೋ ಗೋರ್ ಅವರ ಈ ಹೇಳಿಕೆ “ವಾಸ್ತವಕ್ಕೆ ದೂರವಾದದ್ದು” ಎಂದು ಕಿಡಿಕಾರಿರುವ ಪಾಕಿಸ್ತಾನ, ತನ್ನ ಆಕ್ಷೇಪವನ್ನು ದಾಖಲಿಸಲು ಇಸ್ಲಮಾಬಾದ್‌ನಲ್ಲಿರುವ ಅಮೆರಿಕದ ಹಿರಿಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.

ಅಮೆರಿಕದ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜಮ್ಮು-ಕಾಶ್ಮೀರಕ್ಕೆ 2 ದಿನಗಳ ಭೇಟಿ ನೀಡಿದ್ದ ಸೆರ್ಗಿಯೋ ಗೋರ್, ಶ್ರೀನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಮಹತ್ವದ ಹೇಳಿಕೆ ನೀಡಿದ್ದರು. ಜಮ್ಮು-ಕಾಶ್ಮೀರ ಭೇಟಿಯ ವೇಳೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಭೇಟಿಯಾದ ನಂತರ ಮಾತನಾಡಿದ್ದ ಸೆರ್ಗಿಯೋ ಗೋರ್, “ಜಮ್ಮು ಮತ್ತು ಕಾಶ್ಮೀರ ಭಾರತದ ಅತ್ಯಂತ ಪ್ರಮುಖ ಭಾಗವಾಗಿದೆ. ನಾನು ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಈ ಪ್ರದೇಶಕ್ಕೆ ಬಂದಿರುವುದು ಸಂತಸ ತಂದಿದೆ” ಎಂದು ಹೇಳಿದ್ದರು. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಭದ್ರತಾ ವಾತಾವರಣ ಸುಧಾರಿಸಿರುವುದನ್ನು ಶ್ಲಾಘಿಸಿದ್ದ ಅವರು, ಪ್ರಸ್ತುತ ಜಾರಿಯಲ್ಲಿರುವ ಅಮೆರಿಕದ ಪ್ರಯಾಣ ಸಲಹೆಗಳನ್ನು ಸಡಿಲಗೊಳಿಸುವ ಸುಳಿವು ನೀಡಿದ್ದರು.


ಇದನ್ನೂ ಓದಿ: ‘ಜಮ್ಮು ಕಾಶ್ಮೀರ ಭಾರತದ ಮುಖ್ಯ ಭಾಗ’; ಐತಿಹಾಸಿಕ ಭೇಟಿ ವೇಳೆ ಅಮೆರಿಕ ರಾಯಭಾರಿ ಸೆರ್ಗಿಯೋ ಮಹತ್ವದ ಹೇಳಿಕೆ

ಪಾಕಿಸ್ತಾನದ ತೀವ್ರ ಆಕ್ಷೇಪ:

ಸೆರ್ಗಿಯೋ ಗೋರ್ ಅವರ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಇಸ್ಲಮಾಬಾದ್‌ನಲ್ಲಿರುವ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿ ಆಕ್ಷೇಪ ದಾಖಲಿಸಿದೆ. ಜಮ್ಮು ಮತ್ತು ಕಾಶ್ಮೀರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಿತ ಪ್ರದೇಶವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ನಿರ್ಣಯಗಳಿಗೆ ಬದ್ಧವಾಗಿ ಇತ್ಯರ್ಥವಾಗಬೇಕಿದೆ ಎಂದು ಪಾಕಿಸ್ತಾನ ವಾದಿಸಿದೆ.


ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಅಮೆರಿಕದ ಉನ್ನತ ರಾಯಭಾರಿಯೊಬ್ಬರು ಬಹಿರಂಗವಾಗಿ ಪುನರುಚ್ಚರಿಸಿರುವುದು ಭಾರತದ ರಾಜತಾಂತ್ರಿಕ ನಿಲುವಿಗೆ ದೊರೆತ ದೊಡ್ಡ ಬೆಂಬಲವೆಂದು ವಿಶ್ಲೇಷಿಸಲಾಗಿದೆ. ಅಮೆರಿಕ ಜಮ್ಮು ಕಾಶ್ಮೀರದ ಪ್ರಯಾಣದ ಎಚ್ಚರಿಕೆಯನ್ನು ಸಡಿಲಗೊಳಿಸಿದರೆ ಈ ಪ್ರದೇಶದಲ್ಲಿ ವಿದೇಶಿ ಹೂಡಿಕೆ ಹಾಗೂ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:27 pm, Wed, 19 August 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us