ಧ್ವಂಸಗೊಂಡಿರುವ ಹಿಂದೂ ದೇವಾಲಯವನ್ನು 2 ವಾರಗಳಲ್ಲಿ ಪುನಃಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಆದೇಶ

| Updated By: ganapathi bhat

Updated on: Apr 06, 2022 | 10:57 PM

ಕೂಡಲೇ ದೇವಾಲಯದ ಮರುನಿರ್ಮಾಣ ಕೆಲಸ ಆರಂಭಿಸಿ, ಎರಡು ವಾರಗಳಲ್ಲಿ ಕೆಲಸದ ಪ್ರಗತಿಯ ಬಗ್ಗೆ ವರದಿ ನೀಡುವಂತೆ ಔಕಾಫ್ ವಿಭಾಗಕ್ಕೆ ಹಾಗೂ ಖೈಬರ್ ಪಖ್ತುನ್​ಖ್ವಕ್ಕೆ ನ್ಯಾಯಾಲಯ ಆದೇಶ ನೀಡಿದೆ.

ಧ್ವಂಸಗೊಂಡಿರುವ ಹಿಂದೂ ದೇವಾಲಯವನ್ನು 2 ವಾರಗಳಲ್ಲಿ ಪುನಃಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಆದೇಶ
ಪಾಕಿಸ್ತಾನದ ತೇರಿ ಗ್ರಾಮದ ಹಿಂದೂ ದೇವಾಲಯ ಧ್ವಂಸಗೊಂಡಿರುವುದು
Follow us on

ಇಸ್ಲಾಮಬಾದ್: ತೇರಿ ಗ್ರಾಮದ ಕೃಷ್ಣ ದ್ವಾರ ಮಂದಿರ ಹಾಗೂ ಶ್ರೀ ಪರಮಹಂಸ ಮಹಾರಾಜರ ಸಮಾಧಿಯನ್ನು ಮರುಸ್ಥಾಪಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಪ್ರಾಂತೀಯ ಸರ್ಕಾರಕ್ಕೆ ಆದೇಶ ಹೊರಡಿಸಿದೆ. ಖೈಬರ್ ಪಖ್ತುನ್​ಖ್ವದ ಪ್ರಾಂತೀಯ ಸರ್ಕಾರಕ್ಕೆ ಆದೇಶ ನೀಡಿರುವ ನ್ಯಾಯಾಲಯ, ಹಿಂದೂ ದೇವಾಲಯವನ್ನು ಪುನಃಸ್ಥಾಪಿಸುವಂತೆ ಆದೇಶಿಸಿದೆ.

ಕೂಡಲೇ ದೇವಾಲಯದ ಮರುನಿರ್ಮಾಣ ಕೆಲಸ ಆರಂಭಿಸಿ, ಎರಡು ವಾರಗಳಲ್ಲಿ ಕೆಲಸದ ಪ್ರಗತಿಯ ಬಗ್ಗೆ ವರದಿ ನೀಡುವಂತೆ ಔಕಾಫ್ ವಿಭಾಗಕ್ಕೆ ಹಾಗೂ ಖೈಬರ್ ಪಖ್ತುನ್​ಖ್ವಕ್ಕೆ ನ್ಯಾಯಾಲಯ ಆದೇಶ ನೀಡಿದೆ. ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾದ ಜನರು, ದೇವಾಲಯದ ಮರುನಿರ್ಮಾಣಕ್ಕೆ ಹಣ ನೀಡಬೇಕು ಎಂದೂ ಮುಖ್ಯ ನ್ಯಾಯಾಧೀಶರು ಹೇಳಿಕೆ ನೀಡಿದ್ದಾರೆ.

ಇಂತಹ ದುಷ್ಕೃತ್ಯ ಎಸಗುವ ಅನುಮಾನಾಸ್ಪದ ವ್ಯಕ್ತಿಗಳು ದೇವಾಲಯದೊಳಕ್ಕೆ ಬರದಂತೆ ತಡೆಯಬೇಕು ಎಂದು ಕೋರ್ಟ್, ಗೃಹ ಇಲಾಖೆಗೆ ಸೂಚನೆ ನೀಡಿದೆ. ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು. ಮುಂದೆ ಈ ರೀತಿಯ ಘಟನೆಗಳು ಆಗದಂತೆ ತಡೆಯಬೇಕು ಎಂದೂ ವರದಿಯಲ್ಲಿ ಹೇಳಲಾಗಿದೆ.

ಪಾಕಿಸ್ತಾನದಲ್ಲಿರುವ ಒಟ್ಟು ದೇವಾಲಯಗಳ ಸಂಖ್ಯೆ, ಔಕಾಫ್ ವಿಭಾಗಕ್ಕೆ ಒಳಪಟ್ಟ ಭೂಮಿ ಅತಿಕ್ರಮಣ, ಮತ್ತು ಆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿಯನ್ನೂ ನ್ಯಾಯಾಲಯ ಕೇಳಿದೆ. ಪಾಕಿಸ್ತಾನದಲ್ಲಿ ಎಲ್ಲಾ ದೇವಾಲಯಗಳೂ ಔಕಾಫ್ ವಿಭಾಗದ ಅಡಿಯಲ್ಲಿ ಬರುತ್ತವೆ.

ದೇವಾಲಯ ಧ್ವಂಸ ಕೃತ್ಯದ ಹಿನ್ನೆಲೆ ಏನು?
ದೇವಾಲಯವನ್ನು ಡಿಸೆಂಬರ್ 30ರಂದು ಬೆಂಕಿ ಹಚ್ಚಿ ಧ್ವಂಸಗೊಳಿಸಲಾಗಿತ್ತು. ನೂರಾರು ಮಂದಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದರು. ಘಟನೆ ನಡೆದ ಬಳಿಕ ಸುಮಾರು 350ರಷ್ಟು ಆರೋಪಿಗಳು ದೇವಾಲಯ ಧ್ವಂಸಗೊಳಿಸುವ ಕಾರ್ಯದಲ್ಲಿ ಭಾಗಿಯಾದದ್ದು ತಿಳಿದುಬಂದಿತ್ತು.

ದೇವಾಲಯದ ಹಳೆಯ ಕಟ್ಟಡವನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಆಡಳಿತ ಅನುಮತಿ ನೀಡಿದ ಬೆನ್ನಲ್ಲೇ ಈ ದುಷ್ಕೃತ್ಯ ನಡೆದಿದೆ. ಜಮಿಯಾತ್ ಉಲೆಮಾ-ಎ-ಇಸ್ಲಾಮ್ ಸಂಘಟನೆಯ ಕಾರ್ಯಕರ್ತರು ವಿಧ್ವಂಸಕ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದ್ದು, 50ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿರುವ ಬಗ್ಗೆ ಮಾಹಿತಿ ಇದೆ.

ಈ ಕೃತ್ಯದ ಬಗ್ಗೆ ಸ್ವಯಂದೂರು ದಾಖಲಿಸಿಕೊಂಡಿರುವ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ ಗುಲ್ಜರ್ ಅಹ್ಮದ್, ಸುಪ್ರೀಂ ಕೋರ್ಟ್ ಜನವರಿ 5ರಂದು ಪ್ರಕರಣದ ಬಗ್ಗೆ ತನಿಖೆ ನಡೆಸಲಿದೆ ಎಂದು ಹೇಳಿದ್ದರು. ದೇವಾಲಯ ಧ್ವಂಸಗೊಳಿಸಿದ ಕೃತ್ಯದ ಬಗ್ಗೆ ಅಲ್ಪಸಂಖ್ಯಾತ ಶಾಸಕ ರಮೇಶ್ ಕುಮಾರ್, ಕಳೆದ ವಾರ ಕರಾಚಿಯ ಸಭೆಯಲ್ಲಿ ವಿವರಣೆ ನೀಡಿದ್ದಾರೆ. ಆ ಬಳಿಕ, ಮುಖ್ಯ ನ್ಯಾಯಾಧೀಶರು ಇಂದು, ಪ್ರಕರಣದ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಹಿಂದೂ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳು: 26 ಮಂದಿಯನ್ನು ಬಂಧಿಸಿದ ಪಾಕ್ ಪೊಲೀಸರು

Published On - 4:08 pm, Tue, 5 January 21