ಕೊರೊನಾ ಲಸಿಕೆಗೂ ತಪ್ಪಲಿಲ್ಲ ಹ್ಯಾಕರ್ಸ್​ ಕಾಟ; ಸೈಬರ್​ ಅಟ್ಯಾಕ್​ಗೆ ಬೆದರಿದ ಫೈಜರ್​, ಬಯೋಎನ್​ಟೆಕ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 7:24 PM

ಕೊರೊನಾ ಲಸಿಕೆಗೆ ಸಂಬಂಧಿಸಿದ ಡೇಟಾ ಕಾನೂನು ಬಾಹಿರವಾಗಿ ಹ್ಯಾಕರ್​ಗಳ ಕೈ ಸೇರಿದೆ ಎಂದು ಫೈಜರ್ ಮತ್ತು ಬಯೋಎನ್​ಟೆಕ್​ ಸಂಸ್ಥೆಗಳು ಹೇಳಿಕೊಂಡಿವೆ. ಡೇಟಾ ಯಾರ ಕೈ ಸೇರಿದೆ ಎಂಬುದೂ ತಿಳಿಯುತ್ತಿಲ್ಲವೆಂದು ಆತಂಕ ವ್ಯಕ್ತಪಡಿಸಿವೆ.

ಕೊರೊನಾ ಲಸಿಕೆಗೂ ತಪ್ಪಲಿಲ್ಲ ಹ್ಯಾಕರ್ಸ್​ ಕಾಟ; ಸೈಬರ್​ ಅಟ್ಯಾಕ್​ಗೆ ಬೆದರಿದ ಫೈಜರ್​, ಬಯೋಎನ್​ಟೆಕ್
ಸಾಂದರ್ಭಿಕ ಚಿತ್ರ
Follow us on

ಲಂಡನ್: ಕೊರೊನಾ ಲಸಿಕೆಗೆ ಸೇರಿದ ಬಹುಮುಖ್ಯ ಮಾಹಿತಿ ಸೋರಿಕೆಯಾಗಿದೆ ಎಂದು ಫೈಜರ್​ ಮತ್ತು ಬಯೋಎನ್​ಟೆಕ್​ ಸಂಸ್ಥೆಗಳು ಆರೋಪ ಮಾಡಿವೆ. ಯುರೋಪ್​ ದೇಶದ ಔಷಧೀಯ ಸಂಸ್ಥೆಯು (EMA) ತನ್ನ ಮೇಲೆ ಸೈಬರ್​ ಅಟ್ಯಾಕ್​ ಆಗಿದೆಯೆಂದು ಹೇಳಿದ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ.

ಕೊರೊನಾ ಲಸಿಕೆಗೆ ಸಂಬಂಧಿಸಿದ ಡೇಟಾ ಕಾನೂನು ಬಾಹಿರವಾಗಿ ಹ್ಯಾಕರ್​ಗಳ ಕೈ ಸೇರಿದೆ ಎಂದು ಫೈಜರ್ ಮತ್ತು ಬಯೋಎನ್​ಟೆಕ್ ಸಂಸ್ಥೆಗಳು ಹೇಳಿಕೊಂಡಿವೆ. ಡೇಟಾ ಸೋರಿಕೆಯಾಗುತ್ತಿರುವ ಕುರಿತು ನಮಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ. ಡೇಟಾ ಯಾರ ಕೈ ಸೇರಿದೆ ಎಂಬುದೂ ತಿಳಿಯುತ್ತಿಲ್ಲವೆಂದು ಆತಂಕ ವ್ಯಕ್ತಪಡಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ EMA ಹ್ಯಾಕರ್​ಗಳನ್ನು ಪತ್ತೆ ಹಚ್ಚಲು ಕಾನೂನು ತಜ್ಞರ ಸಹಾಯ ಪಡೆದಿದ್ದೇವೆ. ಕೊರೊನಾ ಲಸಿಕೆ ಉತ್ಪಾದಕ ಸಂಸ್ಥೆಗಳಿಗೆ ಯಾವುದೇ ರೀತಿಯ ತೊಂದರೆಯಾಗದು ಎಂದು ಭರವಸೆ ನೀಡಿದೆ. ಈ ವರ್ಷದ ಆರಂಭದಲ್ಲಿ ಬ್ರಿಟನ್​ ದೇಶವು ತನ್ನಲ್ಲಿರುವ ಕೊವಿಡ್​ ಲಸಿಕೆ ಸಂಬಂಧಿತ ವಿಷಯಗಳನ್ನು ರಷ್ಯಾದ ಹ್ಯಾಕರ್ಸ್​ ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿತ್ತು.

ಇಷ್ಟೇ ಅಲ್ಲದೇ.. ಜಾನ್ಸನ್ ಅಂಡ್ ಜಾನ್ಸನ್, ನೋವಾವ್ಯಾಕ್ಸ್, ಆಸ್ಟ್ರಾಜೆನೆಕಾ ಹಾಗೂ ಸೌತ್ ಕೊರಿಯನ್​ ಪ್ರಯೋಗಶಾಲೆಗಳ ಮಾಹಿತಿಯನ್ನು ಕದಿಯಲು ಹ್ಯಾಕರ್ಸ್​ ಯತ್ನಿಸಿದ್ದಾರೆ ಎಂದು ವಾಲ್​ ಸ್ಟ್ರೀಟ್ ಜರ್ನಲ್​ ವರದಿ ಮಾಡಿದೆ.

ಬಡರಾಷ್ಟ್ರಗಳ ಬಡಪಾಯಿಗಳಿಗೆ ಕೊರೊನಾ ಲಸಿಕೆ ಮರೀಚಿಕೆಯಷ್ಟೇ.. ಅಧ್ಯಯನ ಹೇಳಿದ ಕಟು ಸತ್ಯ ಇಲ್ಲಿದೆ

Published On - 7:22 pm, Thu, 10 December 20