ಫೈಜರ್ ಫೈಟ್: ಕ್ರಿಸ್ಮಸ್ಗೂ ಮುನ್ನ ತುರ್ತು ಬಳಕೆಗಾಗಿ ಪುಣೆಯ ಕೊವಿಶೀಲ್ಡ್ಗೆ ‘ಬ್ರಿಟನ್ ಟೆಸ್ಟ್’
ಕೊವಿಶೀಲ್ಡ್ ಲಸಿಕೆಗೆ MHRA ಒಪ್ಪಿಗೆ ನೀಡಿದ ತಕ್ಷಣವೇ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಸಿಗುತ್ತದೆ ಎಂದು ಸಂಸ್ಥೆ ಭರವಸೆ ವ್ಯಕ್ತಪಡಿಸಿದೆ. ಕ್ರಿಸ್ಮಸ್ಗೂ ಮುನ್ನ ಅನುಮತಿ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದೆಹಲಿ: ಪುಣೆ ಮೂಲದ ಸೆರಮ್ ಸಂಸ್ಥೆ ಉತ್ಪಾದಿಸಿರುವ ಕೊರೊನಾ ಲಸಿಕೆ ಕೊವಿಶೀಲ್ಡ್ನ ತುರ್ತು ಬಳಕೆಗೆ ಕ್ರಿಸ್ಮಸ್ಗೂ ಮುನ್ನ ಅನುಮತಿ ಸಿಗುವ ಸಾಧ್ಯತೆ ಇದೆ. ಸದ್ಯ ಬ್ರಿಟನ್ ದೇಶದ ಔಷಧ ಮತ್ತು ಆಹಾರ ಉತ್ಪನ್ನಗಳ ನಿಯಂತ್ರಣಾ ಮಂಡಳಿಯು (MHRA) ಸೆರಮ್ ತಯಾರಿಸಿದ ಕೊರೊನಾ ಲಸಿಕೆಯನ್ನು ಪರಿಶೀಲಿಸುತ್ತಿದೆ.
ಭಾರತದಲ್ಲಿಯೂ ತುರ್ತು ಬಳಕೆಗೆ ಅನುಮತಿ ಸಿಗುತ್ತದೆ ಕೊವಿಶೀಲ್ಡ್ ಲಸಿಕೆಗೆ MHRA ಒಪ್ಪಿಗೆ ನೀಡಿದ ತಕ್ಷಣವೇ ಭಾರತದಲ್ಲಿಯೂ ತುರ್ತು ಬಳಕೆಗೆ ಅನುಮತಿ ಸಿಗುತ್ತದೆ ಎಂದು ಸಂಸ್ಥೆ ಭರವಸೆ ವ್ಯಕ್ತಪಡಿಸಿದೆ. ಪ್ರಸ್ತುತ ಕೊರೊನಾ ಲಸಿಕೆಯ ಕುರಿತಾದ ಮಾಹಿತಿ ಹಾಗೂ ದತ್ತಾಂಶಗಳನ್ನು MHRA ಪರಿಶೀಲಿಸುತ್ತಿದ್ದು 15 ದಿನಗಳ ಒಳಗೆ ಪರಿಶೀಲನಾ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕೆಲದಿನಗಳ ಹಿಂದೆ ಕೋವಿಶೀಲ್ಡ್ ಕೊರೊನಾ ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಿದಾಗ 2 ಡೋಸ್ ಲಸಿಕೆ ಶೇ. 62ರಷ್ಟು ಕಾರ್ಯಕ್ಷಮತೆ ತೋರಿದ್ದರೆ, 1 ಮತ್ತು ಅರ್ಧ ಡೋಸ್ ಲಸಿಕೆ ಶೇ. 90ರಷ್ಟು ಪರಿಣಾಮಕಾರಿಯಾಗಿ ಕಂಡುಬಂದಿತ್ತು. ಆದರೆ, ಈ ಪ್ರಯೋಗವು ಬೆರಳೆಣಿಕೆಯಷ್ಟು ಜನರ ಮೇಲೆ ನಡೆದಿದ್ದರಿಂದ ಇದನ್ನು ಪುನರ್ ಪರಿಶೀಲಸಲು MHRA ನಿರ್ಧರಿಸಿದೆ.
ಅಮೆರಿಕಾದಲ್ಲಿ ಅನುಮತಿ ಗಿಟ್ಟಿಸಿಕೊಳ್ಳಲು ಫೈಜರ್ ಫೈಟ್ ಇನ್ನೊಂದೆಡೆ ಮೂರು ಹಂತದ ವೈದ್ಯಕೀಯ ಪರಿಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿ ಹಲವು ದೇಶಗಳಲ್ಲಿ ಅನುಮತಿ ಗಿಟ್ಟಿಸಿಕೊಂಡ ವಿಶ್ವದ ಮೊದಲ ವ್ಯಾಕ್ಸಿನ್ ಎಂಬ ಹೆಗ್ಗಳಿಕೆಗೆ ಫೈಜರ್ ಪಾತ್ರವಾಗಿದೆ. ಬ್ರಿಟನ್, ಬಹ್ರೈನ್, ಕೆನಡಾ, ಸೌದಿ ಅರೇಬಿಯಾದಲ್ಲಿ ಫೈಜರ್ ಬಳಕೆಗೆ ಈಗಾಗಲೇ ಅನುಮತಿ ಸಿಕ್ಕಿದೆ.
ಫೈಜರ್ ಮತ್ತು ಬಯೋಎನ್ಟೆಕ್ ಸಂಸ್ಥೆಗಳು ತಾವು ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯ ಮೂಲಕ ಅಮೆರಿಕಾಕ್ಕೆ ಕಾಲಿಡಲು ತಯಾರಿ ನಡೆಸುತ್ತಿವೆ. ಇದಕ್ಕೆ ಪೂರಕವಾಗಿ ಅಮೆರಿಕಾ ತಜ್ಞರು ಫೈಜರ್ ಪರ ಮತ ಚಲಾಯಿಸಿದ್ದು, ಅಲ್ಲಿ ಅನುಮತಿ ಸಿಗುವ ಲಕ್ಷಣಗಳು ದಟ್ಟವಾಗಿವೆ.
ಫೈಜರ್ ತಯಾರಿಸಿದ ಕೊರೊನಾ ಲಸಿಕೆಯು 16 ವರ್ಷದೊಳಗಿನ ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು ಮತ್ತು ವೈಜ್ಞಾನಿಕವಾಗಿ ಇದರ ಸಾಧಕ ಬಾಧಕಗಳೇನು ಎಂದು ಪರಿಶೀಲಿಸಿದ ನಂತರ ಅಮೆರಿಕಾ ಅಸ್ತು ಎನ್ನಲಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.