Say No to Alcohol ಕೊವಿಡ್ ಲಸಿಕೆ ತೆಗೆದುಕೊಂಡ ಮದ್ಯಪ್ರಿಯರು ತಕ್ಷಣಕ್ಕೆ ಮದ್ಯ ಸೇವಿಸುವಂತಿಲ್ಲ! ‘ಮಧ್ಯಂತರ ರಜೆ’ ಕಡ್ಡಾಯ
ಜಗತ್ತಿನಲ್ಲಿ ಅತಿಹೆಚ್ಚು ಆಲ್ಕೋಹಾಲ್ ಬಳಸುವ ದೇಶಗಳ ಪಟ್ಟಿಯಲ್ಲಿ ರಷ್ಯಾ ನಾಲ್ಕನೇ ಸ್ಥಾನದಲ್ಲಿದೆ. ರಷ್ಯಾದ ವ್ಯಕ್ತಿಯೊಬ್ಬ ವರ್ಷಕ್ಕೆ ಸರಾಸರಿ 15.1ಲೀಟರ್ ಆಲ್ಕೋಹಾಲ್ ಸೇವಿಸುತ್ತಾನೆಂದು ಅಂದಾಜಿಸಲಾಗಿದೆ.
ಕೊವಿಡ್ ಲಸಿಕೆ ಪಡೆದ ಕನಿಷ್ಟ ಎರಡು ತಿಂಗಳ ತನಕ ಮದ್ಯಪಾನ ಮಾಡದಂತೆ ರಷ್ಯಾ ದೇಶದ ಉಪಪ್ರಧಾನಿ ಟೆಟಿಯಾನ ಗೊಲಿಕೋವ ತಮ್ಮ ಪ್ರಜೆಗಳಿಗೆ ಸಲಹೆ ನೀಡಿದ್ದಾರೆ. ಲಸಿಕೆ ಪಡೆದ ನಂತರ ಮದ್ಯಪಾನ ಹಾಗೂ ಡ್ರಗ್ಸ್ ಸೇವನೆ ತ್ಯಜಿಸಬೇಕು. ಅಂತೆಯೇ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಇವುಗಳ ಬಗ್ಗೆ ಎಂದಿನಂತೆ ನಿಗಾ ವಹಿಸಲೇಬೇಕು ಎಂದು ಖಡಕ್ಕಾಗಿ ಹೇಳಿದ್ದಾರೆ
‘ಮದ್ಯಂತರ ರಜೆ’ 42 ದಿನಗಳ ಕಾಲ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಲಸಿಕೆಯು ಕೊವಿಡ್ ವೈರಾಣುವನ್ನು ಸಂಪೂರ್ಣ ನಿಯಂತ್ರಿಸಲು ಸರಿಸುಮಾರು 42 ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಲಸಿಕೆ ಪಡೆದವರು ಹೆಚ್ಚು ಜಾಗೃತರಾಗಿರಲು ರಷ್ಯಾದ ಉಪಪ್ರಧಾನಿ ಟೆಟಿಯಾನ ಗೊಲಿಕೋವ ತಿಳಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾದಲ್ಲಿ ಕೋವಿಡ್ ಪೀಡಿತರೂ ಹೆಚ್ಚು, ಕುಡುಕರೂ ಹೆಚ್ಚು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಲ್ಲಿ ಅತಿಹೆಚ್ಚು ಆಲ್ಕೋಹಾಲ್ ಬಳಸುವ ದೇಶಗಳ ಪಟ್ಟಿಯಲ್ಲಿ ರಷ್ಯಾ ನಾಲ್ಕನೇ ಸ್ಥಾನದಲ್ಲಿದೆ. ರಷ್ಯಾದ ವ್ಯಕ್ತಿಯೊಬ್ಬ ವರ್ಷಕ್ಕೆ ಸರಾಸರಿ 15.1 ಲೀಟರ್ ಆಲ್ಕೋಹಾಲ್ ಸೇವಿಸುತ್ತಾನೆಂದು ಅಂದಾಜಿಸಲಾಗಿದೆ.
ಕಾಕತಾಳೀಯವೆಂಬಂತೆ ಅತಿ ಹೆಚ್ಚು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲೂ ರಷ್ಯಾ ನಾಲ್ಕನೇ ಸ್ಥಾನದಲ್ಲಿದ್ದು, 25 ಲಕ್ಷಕ್ಕೂ ಅಧಿಕ ಜನ ಸೋಂಕಿತರಾಗಿದ್ದಾರೆ. ಇದುವರೆಗೆ ಸುಮಾರು 44,220 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಲಸಿಕೆ ಪಡೆಯಲು ಅಧ್ಯಕ್ಷರೇ ತಯಾರಿಲ್ಲ! ಇನ್ನೊಂದೆಡೆ ರಷ್ಯಾದ ತಜ್ಞರು ಸ್ಪುಟ್ನಿಕ್ ವಿ ಲಸಿಕೆ ಶೇ. 90ರಷ್ಟು ಪರಿಣಾಮಕಾರಿ ಎಂದು ಹೇಳುತ್ತಿದ್ದರೂ ಅಲ್ಲಿನ ಅಧ್ಯಕ್ಷ ಪುಟಿನ್ ಮಾತ್ರ ಲಸಿಕೆ ತೆಗೆದುಕೊಳ್ಳಲು ಒಲ್ಲೆ ಎನ್ನುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದ್ರೆ ಈ ಹಿಂದೆ ಖುದ್ದು ಪುಟಿನ್, ತಾನು ಕೊರೊನಾ ಲಸಿಕೆ ತೆಗೆದುಕೊಳ್ಳಲು ಸಿದ್ಧನಿದ್ದೇನೆ ಎಂದು ಸಾರ್ವಜನಿಕವಾಗಿ ಪ್ರಕಟಿಸಿದ್ದರು.
ಇದೀಗ, ಮರುಸೋಂಕು ಹಾಗೂ ಅಡ್ಡಪರಿಣಾಮ ತಡೆಗಟ್ಟಬೇಕಾದರೆ ಲಸಿಕೆ ಪಡೆದ ಎರಡು ತಿಂಗಳ ತನಕ ಮದ್ಯಪಾನ ಮಾಡಲೇಬೇಡಿ ಎಂದು ಆರೋಗ್ಯ ಅಧಿಕಾರಿಗಳೂ ಸಲಹೆ ನೀಡಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆ ಎಂಬುದು ಮಾತ್ರ ಕುತೂಹಲ ಮೂಡಿಸಿದೆ.
ಈ ಸಲಹೆಯನ್ನೇನಾದರೂ ಕಠಿಣ ನಿಯಮವನ್ನಾಗಿ ಪರಿವರ್ತಿಸಿದರೆ ಕೊರೊನಾ ತಡೆಗಟ್ಟಲು ಮದ್ಯವೇ ಪರಿಣಾಮಕಾರಿ ಔಷಧ ಎಂದು ಒಕ್ಕೊರಲಿಂದ ಹೇಳುತ್ತಿರುವ ನಮ್ಮ ಮದ್ಯಪ್ರಿಯರು ಏನನ್ನುತ್ತಾರೋ!?