ತನ್ನ ವಿರುದ್ಧ ಕೊಲೆ ಸಂಚು ರೂಪಿಸಲಾಗಿದೆ, ತನಗೇನಾದರೆ ಮಾಡಿದರೆ ವಿಡಿಯೋ ಲೀಕ್ ಮಾಡಲಾಗುವುದು: ಇಮ್ರಾನ್ ಖಾನ್

ತನ್ನ ವಿರುದ್ದ ಕೊಲೆ ಸಂಚು ರೂಪಿಸಲಾಗಿದೆ ಎಂದು ಸ್ವತಃ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗಂಭೀರ ಆರೋಪ ಮಾಡಿದ್ದು, ಸಾರ್ವಜನಿಕ ಸಭೆಯಲ್ಲಿ ಶತ್ರುಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ತನ್ನ ವಿರುದ್ಧ ಕೊಲೆ ಸಂಚು ರೂಪಿಸಲಾಗಿದೆ, ತನಗೇನಾದರೆ ಮಾಡಿದರೆ ವಿಡಿಯೋ ಲೀಕ್ ಮಾಡಲಾಗುವುದು: ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್
Edited By:

Updated on: May 15, 2022 | 6:56 PM

ಇಸ್ಲಾಮಾಬಾದ್: ತನ್ನನ್ನು ಕೊಲ್ಲಲು ಸಂಚು(Conspiracy) ರೂಪಿಸಲಾಗುತ್ತಿದೆ ಎಂದು ಪಾಕಿಸ್ತಾನ(Pakistan)ದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ತನ್ನ ಸರ್ಕಾರವನ್ನು ಪದಚ್ಯುತಗೊಳಿಸುವ ಸಂಚಿನಲ್ಲಿ ಭಾಗಿಯಾದವರು ಹೆಸರುಳ್ಳ ವಿಡಿಯೋವನ್ನು ಮಾಡಿರುವುದಾಗಿ ಹೇಳಿದ್ದು, ತನಗೇನಾದರೂ ಮಾಡಿದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಸಾರ್ವಜನಿಕವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸಿಯಾಲ್​ಕೋಟ್​ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ತನ್ನನ್ನು ಕೊಲ್ಲಲು ಸಂಚು ರೂಪಿಸಲಾಗುತ್ತಿದೆ. ತನ್ನ ಸರ್ಕಾರವನ್ನು ಪದಚ್ಯುತಿಗೊಳಿಸುವ ಸಂಚಿನಲ್ಲಿ ಭಾಗಿಯಾಗಿರುವ ಎಲ್ಲಾ ವ್ಯಕ್ತಿಗಳ ಹೆಸರನ್ನು ಹೊಂದಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದೇನೆ. ಪಾಕಿಸ್ತಾನ ಮತ್ತು ವಿದೇಶದಲ್ಲಿರುವ ಜನರು ನನ್ನನ್ನು ಕೊಲ್ಲಲು ಯೋಜಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ. ತನಗೇನಾದರೂ ಸಂಭವಿಸಿದರೆ ಅದನ್ನು ಸಾರ್ವಜನಿಕ ಗೊಳಿಸಲಾಗುವುದು ಎಂದಿದ್ದಾರೆ.

ತನ್ನ ವಿರುದ್ಧದ ಪಿತೂರಿಯ ಸಂಪೂರ್ಣ ವಿವರಗಳೊಂದಿಗೆ ವಿಡಿಯೋವನ್ನು ರೆಕಾರ್ಡ್ ಮಾಡಿದ್ದೇನೆ. ಅದನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದೇನೆ ಎಂದು ಹೇಳಿದ್ದಾರೆ. ಆದರೆ, ವಿಡಿಯೋದಲ್ಲಿ ಯಾರ ಹೆಸರು ಇದೆ ಎಂಬುದನ್ನು ಅವರು ಬಹಿರಂಗ ಪಡಿಸಿಲ್ಲ.

ಇಮ್ರಾನ್ ಖಾನ್ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್(shehbaz sharif), ಇಮ್ರಾನ್ ಖಾನ್ ಅವರು ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಭಾಷಣ ಮಾಡುತ್ತಿದ್ದಾರೆ. ಆ ಮೂಲಕ ಜನರ ಮನಸ್ಸನ್ನು ವಿಷಪೂರಿತಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪರಮಾಣು ಬಾಂಬ್ ಎಸೆಯುವುದು ಉತ್ತಮ

ಕಳ್ಳರಿಗೆ ಚುಕ್ಕಾಣಿ ಹಸ್ತಾಂತರಿಸುವುದಕ್ಕಿಂತ ಪರಮಾಣು ಬಾಂಬ್(nuclear bomb) ಎಸೆಯುವುದು ಉತ್ತಮ ಎಂದು ಇಮ್ರಾನ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶುಕ್ರವಾರ ತಮ್ಮ ಬನಿಗಾಲ ನಿವಾಸದಲ್ಲಿ ಸುದ್ದಿಗಾರರೊಂದಿಗಿನ ಸಂವಾದದ ವೇಳೆ ಈ ಹೇಳಿಕೆ ನೀಡಿದ್ದಾರೆ. ಈ ಜನರಿಗೆ ದೇಶದ ಚುಕ್ಕಾಣಿ ಹಸ್ತಾಂತರಿಸುವುದಕ್ಕಿಂತ ಪರಮಾಣು ಬಾಂಬ್ ಹಾಕುವುದು ಉತ್ತಮ. ಅಧಿಕಾರಕ್ಕೆ ತಂದ ಕಳ್ಳರು ಪ್ರತಿಯೊಂದು ಸಂಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ನಾಶಪಡಿಸಿದ್ದಾರೆ. ಇನ್ನು ಯಾವ ಅಧಿಕಾರಿಗಳು ಈ ಅಪರಾಧಿಗಳ ಪ್ರಕರಣಗಳನ್ನು ತನಿಖೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಮೇ 20ರಂದು ನಡೆಯಲಿರುವ ಲಾಂಗ್ ಮಾರ್ಚ್​ನಲ್ಲಿ ಫೆಡರಲ್ ರಾಜಧಾನಿಗೆ ಪ್ರವೇಶಿಸುವುದನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ. ತಾಪಮಾನ ಹೆಚ್ಚಾದರೆ ಜನರು ಹೊರಗೆ ಬರುವುದಿಲ್ಲ ಎಂದು ನಮ್ಮ ವಿರೋಧಿಗಳು ಹೇಳುತ್ತಾರೆ. ಆದರೆ, ಎಷ್ಟು ಕಂಟೈನರ್​ಗಳನ್ನು ಬೇಕಾದರೂ ಹಾಕಿ. ಆದರೆ, 2 ಮಿಲಿಯನ್ ಜನರು ಇಸ್ಲಾಮಾಬಾದ್ಗೆ ಬರುತ್ತಾರೆ. ಸರ್ಕಾರವು ಅವರ ಉತ್ಸಾಹಕ್ಕೆ ಹೆದರುತ್ತದೆ ಎಂದು ಹೇಳಿದ ಇಮ್ರಾನ್ ಖಾನ್, ಈಗಿನ ಸರ್ಕಾರವನ್ನು ತೆಗೆದುಹಾಕಲು 11 ಪಕ್ಷಗಳು ಒಟ್ಟುಗೂಡಿವೆ ಎಂದಿದ್ದಾರೆ.

Published On - 6:56 pm, Sun, 15 May 22