ಆಸ್ಟ್ರೇಲಿಯಾದ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಭೇಟಿ, ಮೆಲ್ಬೋರ್ನ್ ಕ್ಲಬ್ ಜೊತೆ ಐತಿಹಾಸಿಕ ಒಪ್ಪಂದ

ಪ್ರಧಾನಿ ಮೋದಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿ, MCC ಜೊತೆ ಐತಿಹಾಸಿಕ ಕ್ರೀಡಾ ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕ್ರಿಕೆಟ್, ಫುಟ್‌ಬಾಲ್, ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಉಭಯ ದೇಶಗಳ ಪ್ರತಿಭೆಗಳನ್ನು ಗುರುತಿಸಿ, ತರಬೇತಿ ನೀಡುವ ಗುರಿ ಹೊಂದಿದೆ. ಇದು ಭಾರತ-ಆಸ್ಟ್ರೇಲಿಯಾ ಕ್ರೀಡಾ ಸಂಬಂಧವನ್ನು ಬಲಪಡಿಸಿ, ಅಥ್ಲೀಟ್‌ಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಕ್ರೀಡಾ ವಿಜ್ಞಾನ ವಿನಿಮಯಕ್ಕೂ ಒಪ್ಪಿಗೆ ಸಿಕ್ಕಿದೆ.

ಆಸ್ಟ್ರೇಲಿಯಾದ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಭೇಟಿ, ಮೆಲ್ಬೋರ್ನ್ ಕ್ಲಬ್ ಜೊತೆ ಐತಿಹಾಸಿಕ ಒಪ್ಪಂದ
ನರೇಂದ್ರ ಮೋದಿ

Updated on: Jul 10, 2026 | 9:40 AM

ಮೆಲ್ಬೋರ್ನ್, ಜುಲೈ 10: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಾಂಸ್ಕೃತಿಕ ಹಾಗೂ ಆರ್ಥಿಕ ಮೈತ್ರಿಯ ಬೆನ್ನಲ್ಲೇ, ಉಭಯ ದೇಶಗಳ ಕ್ರೀಡಾ ಬಾಂಧವ್ಯಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ಮೆಲ್ಬೋರ್ನ್‌ನ ಜಗತ್ಪ್ರಸಿದ್ಧ ಕ್ರೀಡಾಂಗಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳ ಜಂಟಿ ಅಭಿವೃದ್ಧಿಗಾಗಿ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (MCC) ಜೊತೆ ಭಾರತವು ಅತ್ಯಂತ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಘೋಷಿಸಿದರು.

ಕ್ರಿಕೆಟ್, ಫುಟ್‌ಬಾಲ್ ಹಾಗೂ ಕಬಡ್ಡಿಗೆ ಜಾಗತಿಕ ಬಲ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಫುಟ್‌ಬಾಲ್ ಹಾಗೂ ಭಾರತದ ಸಾಂಪ್ರದಾಯಿಕ ಕ್ರೀಡೆಯಾದ ಕಬಡ್ಡಿಯ ಜಂಟಿ ಅಭಿವೃದ್ಧಿಗೂ ಐತಿಹಾಸಿಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಉಭಯ ದೇಶಗಳಲ್ಲಿರುವ ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ತಳಮಟ್ಟದಿಂದಲೇ ಗುರುತಿಸಿ, ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಕೋಚಿಂಗ್ ಸೌಲಭ್ಯಗಳನ್ನು ಒದಗಿಸಲು ಈ ಒಪ್ಪಂದ ನೆರವಾಗಲಿದೆ. ಶಾಲಾ ಮಕ್ಕಳಲ್ಲಿರುವ ಕ್ರೀಡಾ ಕೌಶಲ್ಯಗಳನ್ನು ಗುರುತಿಸಿ, ಅವರಿಗೆ ವಿಶ್ವದರ್ಜೆಯ ನೆರವು ನೀಡುವುದು ಈ ಒಪ್ಪಂದದ ಪ್ರಮುಖ ಗುರಿಯಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧಕ್ಕೆ ದಶಕಗಳ ಇತಿಹಾಸವಿದೆ. ಮೈದಾನದಲ್ಲಿ ನಮ್ಮ ನಡುವೆ ಎಷ್ಟೇ ತೀವ್ರ ಪೈಪೋಟಿ ಇದ್ದರೂ, ಮೈದಾನದ ಹೊರಗೆ ನಮ್ಮದು ಅದ್ಭುತ ಕ್ರೀಡಾ ಸ್ಫೂರ್ತಿಯ ಬಾಂಧವ್ಯ ಎಂದು ಮೋದಿ ಬಣ್ಣಿಸಿದರು.

ಮತ್ತಷ್ಟು ಓದಿ: ಇಂಡೋನೇಷ್ಯಾ ಸಂಸತ್​​ನಲ್ಲಿ ಭಾರತದ ಬಿಜು ಪಟ್ನಾಯಕ್ ಸಾಹಸಗಾಥೆ ಬಿಚ್ಚಿಟ್ಟ ಪ್ರಧಾನಿ ಮೋದಿ; ಏನಿದು ಕತೆ?

ಉಭಯ ದೇಶಗಳ ನಡುವೆ ನಡೆದಿದ್ದ ಬಾರ್ಡರ್, ಗವಾಸ್ಕರ್ ಟ್ರೋಫಿ ಸರಣಿಯ ಐತಿಹಾಸಿಕ ಪಂದ್ಯಗಳನ್ನು ನೆನೆದ ಪ್ರಧಾನಿ, ನಾನು ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಅವರು ಒಟ್ಟಿಗೆ ಕುಳಿತು ಭಾರತದಲ್ಲೇ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದೆವು. ಆ ಕ್ಷಣಗಳು ನಮ್ಮ ದೇಶಗಳ ನಡುವಿನ ಆಳವಾದ ಸ್ನೇಹ ಮತ್ತು ಪರಸ್ಪರ ಗೌರವಕ್ಕೆ ಸಾಕ್ಷಿಯಾಗಿವೆ ಎಂದರು.

ವಿಶ್ವವಿಜೇತ ಆಸೀಸ್ ಮಹಿಳಾ ತಂಡಕ್ಕೆ ಮೋದಿ ಅಭಿನಂದನೆ

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಅದ್ಭುತ ಸಾಧನೆಯನ್ನು ಪ್ರಧಾನಿ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದರು. ಜಾಗತಿಕ ಕ್ರಿಕೆಟ್‌ನಲ್ಲಿ ಆಸೀಸ್ ವನಿತೆಯರ ಸ್ಥಿರ ಪ್ರದರ್ಶನ ಮತ್ತು ಪ್ರಾಬಲ್ಯದ ಆಟ ಇತರ ದೇಶಗಳ ಕ್ರೀಡಾಪಟುಗಳಿಗೂ ಪ್ರೇರಣೆಯಾಗಿದೆ ಎಂದು ಹೇಳಿದ ಮೋದಿ, ಇಡೀ ತಂಡಕ್ಕೆ ಭಾರತದ ಪರವಾಗಿ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.

ವಿಡಿಯೋ

ಈ ಪ್ರವಾಸದಲ್ಲಿ ಉಭಯ ದೇಶಗಳ ನಡುವೆ ಕ್ರೀಡಾ ವಿಜ್ಞಾನ ಮತ್ತು ಕ್ರೀಡಾಪಟುಗಳ ಪುನಶ್ಚೇತನ ತಂತ್ರಜ್ಞಾನ ವಿನಿಮಯಕ್ಕೂ ಒಪ್ಪಿಗೆ ಸಿಕ್ಕಿರುವುದರಿಂದ, ಮುಂಬರುವ ಒಲಿಂಪಿಕ್ಸ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟಗಳಿಗೆ ಭಾರತೀಯ ಅಥ್ಲೀಟ್‌ಗಳಿಗೆ ಆಸ್ಟ್ರೇಲಿಯಾದ ಹೈ-ಟೆಕ್ ಕ್ರೀಡಾ ಕೇಂದ್ರಗಳಲ್ಲಿ ತರಬೇತಿ ಪಡೆಯಲು ದೊಡ್ಡ ಅವಕಾಶ ಸಿಕ್ಕಂತಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us