ಭಾರತ ಮತ್ತು ಜಪಾನ್ ಜಾಗತಿಕ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯ ತೆರೆಯುತ್ತವೆ; ಪ್ರಧಾನಿ ಮೋದಿ

ವ್ಯಾಪಾರ, ಹೂಡಿಕೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಮಾತುಕತೆಗಳನ್ನು ನಡೆಸಿದರು. ಮೋದಿ ಜಪಾನ್ ರಾಜಧಾನಿಗೆ ಬಂದಿಳಿದ ಕೆಲವೇ ಗಂಟೆಗಳ ನಂತರ 15ನೇ ಭಾರತ-ಜಪಾನ್ ಶೃಂಗಸಭೆಗಾಗಿ ಇಬ್ಬರು ನಾಯಕರು ಭೇಟಿಯಾದರು. ಇಬ್ಬರು ನಾಯಕರ ನಡುವಿನ ಶೃಂಗಸಭೆಯ ಮಾತುಕತೆಗಳು ಹಲವಾರು ಫಲಿತಾಂಶಗಳನ್ನು ನೀಡುವ ನಿರೀಕ್ಷೆಯಿದೆ. ಅದರಲ್ಲೂ ವಿಶೇಷವಾಗಿ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಪ್ರಯೋಜನವಾಗುವ ಸಾಧ್ಯತೆಯಿದೆ.

ಭಾರತ ಮತ್ತು ಜಪಾನ್ ಜಾಗತಿಕ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯ ತೆರೆಯುತ್ತವೆ; ಪ್ರಧಾನಿ ಮೋದಿ
Modi In Japan

Updated on: Aug 29, 2025 | 6:00 PM

ನವದೆಹಲಿ, ಆಗಸ್ಟ್ 29: ಭಾರತ ಮತ್ತು ಜಪಾನ್ ನಡುವಿನ ಪಾಲುದಾರಿಕೆಯು ಎರಡು ದೇಶಗಳಿಗೆ ಮಾತ್ರವಲ್ಲ, ಜಾಗತಿಕ ಶಾಂತಿ ಮತ್ತು ಸುರಕ್ಷತೆಗೂ ಸಹ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಹೇಳಿದ್ದಾರೆ. ಟೋಕಿಯೊದಲ್ಲಿ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ (PM Modi) ಈ ಹೇಳಿಕೆ ನೀಡಿದ್ದಾರೆ. ಉತ್ತಮ ಜಗತ್ತನ್ನು ರೂಪಿಸುವಲ್ಲಿ ಭಾರತ ಮತ್ತು ಜಪಾನ್ ನೈಸರ್ಗಿಕ ಪಾಲುದಾರರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಭಾರತ-ಜಪಾನ್ ಜಂಟಿ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಎರಡು ರಾಷ್ಟ್ರಗಳ ನಡುವಿನ ಆಳವಾದ ಕಾರ್ಯತಂತ್ರ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಒತ್ತಿ ಹೇಳಿದ್ದಾರೆ. ಟೋಕಿಯೊದಲ್ಲಿ ಮಾತನಾಡಿದ ಪಿಎಂ ಮೋದಿ, ಭಾರತದ ತ್ವರಿತ ಬೆಳವಣಿಗೆ, ಜಪಾನಿನ ಹೂಡಿಕೆಗಳ ಹೆಚ್ಚುತ್ತಿರುವ ಪಾತ್ರ ಮತ್ತು ಜಾಗತಿಕ ಆರ್ಥಿಕ ಶಕ್ತಿ ಕೇಂದ್ರವಾಗಿ ಭಾರತದ ಭರವಸೆಯ ಭವಿಷ್ಯವನ್ನು ಎತ್ತಿ ತೋರಿಸಿದ್ದಾರೆ.

ತಮ್ಮ ಹೇಳಿಕೆಗಳನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ, “ಭಾರತದಲ್ಲಿ ಬಂಡವಾಳವು ಕೇವಲ ಬೆಳೆಯುವುದಿಲ್ಲ, ಅದು ಗುಣಿಸುತ್ತದೆ” ಎಂದು ಹೇಳಿದರು. ಇದು ದೇಶದ ಕ್ರಿಯಾತ್ಮಕ ಹೂಡಿಕೆ ವಾತಾವರಣವನ್ನು ಒತ್ತಿಹೇಳುತ್ತದೆ. ಜಪಾನಿನ ಕಂಪನಿಗಳು ಭಾರತದಲ್ಲಿ 40 ಶತಕೋಟಿ ಡಾಲರ್​​ಗಿಂ ಹೆಚ್ಚು ಹೂಡಿಕೆ ಮಾಡಿವೆ. ಕಳೆದ 2 ವರ್ಷಗಳಲ್ಲಿ 13 ಶತಕೋಟಿ ಡಾಲರ್ ಹರಿದುಬರುತ್ತಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಇದು ಭಾರತದ ಬೆಳವಣಿಗೆಯ ಪಥದಲ್ಲಿ ಬಲವಾದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.


ಭಾರತದ ಸ್ಥಿರ ರಾಜಕೀಯ ಪರಿಸರ ಮತ್ತು ಪಾರದರ್ಶಕ ನೀತಿ ಚೌಕಟ್ಟನ್ನು ಗುರುತಿಸಿದ ಪ್ರಧಾನಿ ಮೋದಿ, “ಇಂದು ಭಾರತ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯನ್ನು ಅನುಭವಿಸುತ್ತಿದೆ. ನಮ್ಮ ನೀತಿಗಳಲ್ಲಿ ಪಾರದರ್ಶಕತೆ ಇದೆ” ಎಂದು ಹೇಳಿದ್ದಾರೆ. ಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದು, ಮುಂದಿನ ದಿನಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಎಂದಿದ್ದಾರೆ.

ಇದನ್ನೂ ಓದಿ: ಜಪಾನೀ ಉದ್ದಿಮೆಗಳಿಗೆ ಗ್ಲೋಬಲ್ ಸೌತ್ ತಲುಪಲು ಭಾರತ ಸ್ಪ್ರಿಂಗ್​ಬೋರ್ಡ್ ಇದ್ದಂತೆ: ನರೇಂದ್ರ ಮೋದಿ

ಪ್ರಧಾನಿ ಮೋದಿ ಜಪಾನ್ ಅನ್ನು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಪ್ರಮುಖ ಪಾಲುದಾರ ಎಂದು ಶ್ಲಾಘಿಸಿದ್ದಾರೆ. “ಮೆಟ್ರೋ ರೈಲಿನಿಂದ ಉತ್ಪಾದನೆಯವರೆಗೆ, ಸೆಮಿಕಂಡಕ್ಟರ್‌ಗಳಿಂದ ಸ್ಟಾರ್ಟ್‌ಅಪ್‌ಗಳವರೆಗೆ ಜಪಾನ್ ಯಾವಾಗಲೂ ಪ್ರಮುಖ ಪಾಲುದಾರನಾಗಿದೆ” ಎಂದು ಅವರು ಹೇಳಿದ್ದಾರೆ.


ಪ್ರಧಾನಿಯವರ ಎರಡು ದಿನಗಳ ಜಪಾನ್ ಭೇಟಿಯು 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸುವಿಕೆ ಮತ್ತು ಜಪಾನಿನ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಉನ್ನತ ಮಟ್ಟದ ಚರ್ಚೆಗಳನ್ನು ಒಳಗೊಂಡಿದೆ. ಜಪಾನ್ ಭಾರತದಲ್ಲಿ ತನ್ನ ಹೂಡಿಕೆ ಗುರಿಗಳನ್ನು ದ್ವಿಗುಣಗೊಳಿಸುವುದಾಗಿ ಘೋಷಿಸುವ ಮತ್ತು ವ್ಯಾಪಾರ, ರಕ್ಷಣೆ, ವಿಜ್ಞಾನ, ತಂತ್ರಜ್ಞಾನದಲ್ಲಿ ಸಹಕಾರವನ್ನು ಹೆಚ್ಚಿಸಲು ಹೊಸ ಒಪ್ಪಂದಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.


ಇದನ್ನೂ ಓದಿ: ಜಪಾನ್‌ನಲ್ಲಿ ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ ದಾರುಮಾ ಗೊಂಬೆಯ ವಿಶೇಷತೆಯೇನು?

ಜಪಾನ್ ಪ್ರವಾಸದ ನಂತರ ಪ್ರಧಾನಿ ಮೋದಿ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗಾಗಿ ಚೀನಾಕ್ಕೆ ತೆರಳಲಿದ್ದಾರೆ. ತಮ್ಮ ಚೀನಾದ ಭೇಟಿಯ ಸಮಯದಲ್ಲಿ ಮೋದಿ ಎರಡು ನಿರ್ಣಾಯಕ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಅದರಲ್ಲಿ ಒಂದು ಕ್ಸಿ ಅವರೊಂದಿಗೆ ಮತ್ತು ಇನ್ನೊಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ. ಟ್ರಂಪ್ ಆಡಳಿತವು ಭಾರತ ರಷ್ಯಾದ ಕಚ್ಚಾ ತೈಲ ಖರೀದಿಸಿದ್ದಕ್ಕಾಗಿ ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದ ನಂತರ ಅಮೆರಿಕದೊಂದಿಗೆ ಸಂಬಂಧಗಳು ಹದಗೆಟ್ಟ ಹಿನ್ನೆಲೆಯಲ್ಲಿ ಎರಡೂ ದೇಶಗಳು ಭಾರತವನ್ನು ಬೆಂಬಲಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ