ವಾಷಿಂಗ್ಟನ್: ಭಯೋತ್ಪಾದನೆ, ಮೂಲಭೂತವಾದದ ವಿರುದ್ಧ ಭಾರತ ಮತ್ತು ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ಹೋರಾಟ ನಡೆಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ಹೇಳಿದರು. ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಅಮೆರಿಕ ಭೇಟಿ ವೇಳೆ ಅದ್ಧೂರಿ ಸ್ವಾಗತ ನೀಡಿದ್ದಕ್ಕೆ ಬೈಡನ್ಗೆ ಧನ್ಯವಾದ ಸಮರ್ಪಿಸಿದ ಮೋದಿ, ಅಮೆರಿಕ-ಭಾರತ ನಡುವೆ ವ್ಯಾಪಾರ ವಹಿವಾಟು ಉತ್ತಮವಾಗಿದೆ. ಎರಡೂ ದೇಶಗಳ ನಡುವೆ ಸಂಬಂಧ ಹೊಸ ಉದ್ಯಮ ಸೃಷ್ಟಿಗೆ ನಾಂದಿ ಹಾಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹಳೇ ಸಂಬಂಧ ಮತ್ತಷ್ಟು ಸದೃಢವಾಗಿದೆ ಎಂದರು.
ಶ್ವೇತಭವನಕ್ಕೆ ಭೇಟಿ ನೀಡಿದ ವೇಳೆ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದರಿಂದ ಅಮೆರಿಕ, ಭಾರತ ನಡುವೆ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಭಯೋತ್ಪಾದನೆ, ಮೂಲಭೂತವಾದದ ವಿರುದ್ಧ ಒಗ್ಗಟ್ಟಿನ ಹೋರಾಟ ಮುಂದುವರಿದಿದೆ. ಭಾರತ, ಅಮೆರಿಕ ಮುಂದೆಯೂ ಹೆಗಲಿಗೆ ಹೆಗಲು ಕೊಟ್ಟು ಹೋರಾಟ ನಡೆಸಲಿವೆ. ಪ್ರಜಾತಂತ್ರದ ಮೂಲ ಉದ್ದೇಶ ಗಟ್ಟಿಗೊಳಿಸುವುದೇ ಈ ಭೇಟಿಯ ಉದ್ದೇಶವಾಗಿದೆ. ಬೆಂಗಳೂರು, ಅಹಮದಾಬಾದ್ನಲ್ಲಿ ಅಮೆರಿಕದ ರಾಯಭಾರ ಕಚೇರಿ ಆರಂಭವಾಗಲಿದೆ ಎಂದು ಮೋದಿ ಹೇಳಿದರು.
ರಾಜತಾಂತ್ರಿಕ ಮಾರ್ಗದ ಮೂಲಕ ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದರು.
ಭಾರತ ಹಾಗೂ ಅಮೆರಿಕ ನಡುವಣ ಬಾಂಧವ್ಯಕ್ಕೆ ಆಕಾಶವೂ ಸಾಟಿಯಲ್ಲ ಎಂದು ಮೋದಿ ಬಣ್ಣಿಸಿದರು. ವ್ಯಾಪಾರ ಮತ್ತು ಹೂಡಿಕೆಯಲ್ಲಿ ಅಮೆರಿಕ-ಭಾರತದ ಪಾಲುದಾರಿಕೆ ಈ ಎರಡೂ ದೇಶಗಳಿಗೆ ಮಾತ್ರವಲ್ಲದೆ ಜಾಗತಿಕ ಆರ್ಥಿಕತೆಗೂ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು. ಇಂದು, ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಸಮಸ್ಯೆಗಳನ್ನು ಕೊನೆಗೊಳಿಸಲು ಮತ್ತು ಹೊಸ ಆರಂಭವನ್ನು ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.
Addressing the press meet with @POTUS @JoeBiden. https://t.co/qWx0tH82HH
— Narendra Modi (@narendramodi) June 22, 2023
ಇದನ್ನೂ ಓದಿ: PM Modi at White House: ಅಮೆರಿಕ, ಭಾರತದ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ; ಶ್ವೇತಭವನದಲ್ಲಿ ಪ್ರಧಾನಿ ಮೋದಿ
ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮತ್ತು ಭಾರತದ ನಿಯೋಗದ ಇತರ ಸದಸ್ಯರು ಪ್ರಧಾನಿ ಮೋದಿ ಮತ್ತು ಬೈಡನ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಫಲಪ್ರದವಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದರು. ಭಾರತ, ಅಮೆರಿಕ ನಡುವೆ ಬಾಂಧವ್ಯ ಮತ್ತಷ್ಟು ಶಕ್ತಿಶಾಲಿಯಾಗಿದೆ. ರಕ್ಷಣೆ, ಸಂಪರ್ಕ, ಹಣಕಾಸು ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವೃದ್ಧಿಯಾಗಲಿದೆ. ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ದೊರೆಯಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ, ಅಮೆರಿಕ ನಡುವೆ ಒಪ್ಪಂದ ಏರ್ಪಟ್ಟಿದೆ. ಭಾರತ, ಅಮೆರಿಕ ಸಂಬಂಧಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಇದು ಮತ್ತಷ್ಟು ವೃದ್ಧಿಸಲಿದೆ. 2 ದಶಕದಲ್ಲಿ ಉಭಯ ದೇಶಗಳ ನಡುವೆ ವ್ಯಾಪಾರ ದ್ವಿಗುಣವಾಗಿದೆ. ಹೊಸದಾಗಿ 2 ಬಿಲಿಯನ್ ಡಾಲರ್ಗೂ ಹೆಚ್ಚು ಹೂಡಿಕೆ ಘೋಷಣೆ ಮಾಡಲಾಗಿದೆ ಎಂದು ಬೈಡನ್ ತಿಳಿಸಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 am, Fri, 23 June 23