Prague University Shootings: ಚೆಕ್ ರಿಪಬ್ಲಿಕ್​ನಲ್ಲಿ ಭೀಕರ ಶೂಟೌಟ್; 15 ಮಂದಿ ಕೊಂದ ವಿದ್ಯಾರ್ಥಿ; ಓದಿನಲ್ಲಿ ಮುಂದಿದ್ದ ಈತ ಉಗ್ರಾವತಾರ ತಾಳಿದ್ದು ಯಾಕೆ?

|

Updated on: Dec 22, 2023 | 10:47 AM

Czech Republic News: ಚೆಕ್ ಗಣರಾಜ್ಯ ದೇಶದ ಪ್ರೇಗ್ ನಗರದ ಚಾರ್ಲ್ಸ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ಎಸಗಿ 14 ಮಂದಿಯನ್ನು ಬಲಿತೆಗೆದುಕೊಂಡಿದ್ದಾನೆ. ಆರೋಪಿಯನ್ನು 24 ವರ್ಷದ ಡೇವಿಡ್ ಕೋಝಕ್ ಎಂದು ಗುರುತಿಸಲಾಗಿದೆ. ಶೂಟೌಟ್​ನಲ್ಲಿ ಈತನೂ ಕೊಲ್ಲಲ್ಪಟ್ಟಿದ್ದಾನೆ. ಶೂಟೌಟ್ ಮಾಡುವ ಮುನ್ನ ತನ್ನ ಸ್ವಂತ ತಂದೆಯನ್ನೇ ಕೊಂದಿದ್ದ ಡೇವಿಡ್​ನ ಈ ಪಾಪಕೃತ್ಯಕ್ಕೆ ಸ್ಪಷ್ಟ ಕಾರಣ ಇನ್ನೂ ಗೊತ್ತಾಗಿಲ್ಲ.

Prague University Shootings: ಚೆಕ್ ರಿಪಬ್ಲಿಕ್​ನಲ್ಲಿ ಭೀಕರ ಶೂಟೌಟ್; 15 ಮಂದಿ ಕೊಂದ ವಿದ್ಯಾರ್ಥಿ; ಓದಿನಲ್ಲಿ ಮುಂದಿದ್ದ ಈತ ಉಗ್ರಾವತಾರ ತಾಳಿದ್ದು ಯಾಕೆ?
ಪ್ರೇಗ್ ಶೂಟೌಟ್
Follow us on

ನವದೆಹಲಿ, ಡಿಸೆಂಬರ್ 22: ಚೆಕ್ ರಿಪಬ್ಲಿಕ್ ದೇಶದ ಪ್ರೇಗ್ ನಗರದ (Prague city in Czech Republic) ವಿಶ್ವವಿದ್ಯಾಲಯವೊಂದರಲ್ಲಿ ಭೀಕರ ಶೂಟೌಟ್ ಘಟನೆ ಸಂಭವಿಸಿದೆ. ಚಾರ್ಲ್ಸ್ ಯೂನಿವರ್ಸಿಟಿಯಲ್ಲಿ ಡೇವಿಡ್ ಕೋಝಕ್ (David Kozak) ಎಂಬ ವಿದ್ಯಾರ್ಥಿ ತನ್ನ ಸಹಪಾಠಿಗಳನ್ನೇ ಗುಂಡಿಟ್ಟು ಕೊಂದಿದ್ದಾನೆ. ಈ ಶೂಟೌಟ್​ನಲ್ಲಿ 14 ಮಂದಿ ಬಲಿಯಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ. 24 ವರ್ಷದ ಆರೋಪಿ ಡೇವಿಡ್ ಕೋಝಕ್ ಕೂಡ ಸತ್ತಿದ್ದಾನೆ. ಈ ನರಮೇಧಕ್ಕೆ ಮುನ್ನ ಡೇವಿಡ್ ತನ್ನ ಮನೆಯಲ್ಲಿ ಅಪ್ಪನನ್ನೇ ಕೊಂದು ಹೋಗಿದ್ದ ಘಟನೆಯೂ ಬೆಳಕಿಗೆ ಬಂದಿದೆ. ಒಟ್ಟಾರೆ ಈ ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಯೂನಿವರ್ಸಿಟಿಯಲ್ಲಿ ತನ್ನ ಸಹ-ವಿದ್ಯಾರ್ಥಿಗಳ ಮೇಲೆ ಡೇವಿಡ್ ಕೋಝಕ್ ಯಾಕೆ ಗುಂಡಿನ ದಾಳಿ ಎಸಗಿದ ಎಂದು ಕಾರಣ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ, ಡೇವಿಡ್ ಯಾವುದಾದರೂ ಉಗ್ರ ಸಂಘಟನೆ ಜೊತೆ ಸಂಬಂಧ ಹೊಂದಿರುವ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ.

ಓದಿನಲ್ಲಿ ಒಳ್ಳೆಯ ಹುಡುಗನಾಗಿದ್ದ ಡೇವಿಡ್

ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ, ಡೇವಿಡ್ ಕೋಝಕ್​ನು ಚಾರ್ಲ್ಸ್ ಯೂನಿವರ್ಸಿಟಿಯಲ್ಲಿ ಪೋಲಿಶ್ ಇತಿಹಾಸ ಅಧ್ಯಯನ ಮಾಡುತ್ತಿದ್ದ. ಓದಿನಲ್ಲಿ ಬಹಳ ಜಾಣನಿದ್ದ. ಯಾವುದೇ ಅಪರಾಧ ಹಿನ್ನೆಲೆಯೂ ಇರಲಿಲ್ಲ. ಪೊಲೀಸ್ ಕಡತಗಳಲ್ಲಿ ಆತನ ವಿರುದ್ದ ಯಾವ ಪ್ರಕರಣವೂ ದಾಖಲಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ವಾಯವ್ಯ ಚೀನಾದಲ್ಲಿ ಪ್ರಬಲ ಭೂಕಂಪ: ನೂರಕ್ಕೂ ಹೆಚ್ಚು ಜನ ಸಾವು

ಸೋಷಿಯಲ್ ಮೀಡಿಯಾದಲ್ಲಿ ಸುಳಿವು ಕೊಟ್ಟಿದ್ದನಾ ಡೇವಿಡ್…?

ಪ್ರೇಗ್​ನ ಸ್ಥಳೀಯ ಮಾಧ್ಯಮಗಳ ಪ್ರಕಾರ ಆರೋಪಿ ಡೇವಿಡ್ ಕೋಝಕ್​ನ ಕೆಲ ಸೋಷಿಯಲ್ ಮೀಡಿಯಾ ಪೋಸ್ಟ್​ಗಳು ಆತನ ವ್ಯತಿರಿಕ್ತ ವರ್ತನೆಗೆ ಸುಳಿವು ನೀಡುವಂತಿವೆ. ದಾಳಿಗೆ ಮುನ್ನ ಆತ ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ಸಾಮೂಹಿಕ ಹತ್ಯೆ ಮಾಡುವ ರೀತಿಯ ವಿಚಾರಗಳನ್ನು ಪ್ರಸ್ತಾಪಿಸಿದ್ದನೆನ್ನಲಾಗಿದೆ.

ಹಾಗೆಯೇ, ಹೊರದೇಶವೊಂದರಲ್ಲಿ ನಡೆದ ಒಂದು ಘಟನೆ ಆತನನ್ನು ಸೆಳೆದಿತ್ತು. ರಷ್ಯಾದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಒಬ್ಬ ಸಹಪಾಠಿಯನ್ನು ಕೊಂದು ಇತರ ಐವರನ್ನು ಗಾಯಗೊಳಿಸಿದ ಘಟನೆ ಬಗ್ಗೆ ಡೇವಿಡ್ ಹೆಮ್ಮೆ ವ್ಯಕ್ತಪಡಿಸಿದ್ದುದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ವಿದೇಶಿ ಕೋರ್ಟ್ ಮೊರೆ ಹೋದ ನಗರ ಪೊಲೀಸರು

ವಾರದ ಹಿಂದೆ ಇನ್ನೆರಡು ಹತ್ಯೆ ಮಾಡಿದ್ದನಾ?

ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ ಮಾಡಿ 14 ಮಂದಿಯನ್ನು ಬಲಿತೆಗೆದುಕೊಳ್ಳುವ ಮುನ್ನ ಡೇವಿಡ್ ಕೋಝಕ್ ತನ್ನ ಮನೆಯಲ್ಲಿ ಅಪ್ಪನನ್ನೇ ಕೊಂದಿರುತ್ತಾನೆ. ಈ ಕೃತ್ಯದ ಹಿಂದಿನ ಕಾರಣ ಗೊತ್ತಾಗಿಲ್ಲ. ತನಿಖೆ ವೇಳೆ ಪೊಲೀಸರಿಗೆ ಇನ್ನೆರಡು ಕೊಲೆಯ ಸುಳಿವು ಸಿಕ್ಕಿದೆ. ಡಿಸೆಂಬರ್ 15ರಂದು ಬೇರೊಬ್ಬ ವ್ಯಕ್ತಿ ಹಾಗೂ ಎರಡು ತಿಂಗಳ ಹಸುಗೂಸಿನ ಹತ್ಯೆಯಾಗಿತ್ತು. ಆ ಘಟನೆಯಲ್ಲಿ ಡೇವಿಡ್ ಹಸ್ತ ಇರಬಹುದು ಎಂಬುದು ಪೊಲೀಸರ ಶಂಕೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಈ ರೀತಿ ಶೂಟೌಟ್ ಘಟನೆಗಳು ಸಂಭವಿಸುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ