ಸಿಡ್ನಿ: ಮೊನ್ನೆಯಷ್ಟೇ ಗತಿಸಿದ ಬ್ರಿಟನ್ ರಾಣಿ ಎಲಿಜಬೆತ್ II (Queen Elizabeth II) ಅವರು ಬರೆದಿರುವ ರಹಸ್ಯಮಯ ಪತ್ರವೊಂದು ಆಸ್ಟ್ರೇಲಿಯದ ಪ್ರಮುಖ ನಗರ ಸಿಡ್ನಿಯಲ್ಲಿರುವ (Sydney) ಕಮಾನಿನ ಛಾವಣಿಯೊಂದರಲ್ಲಿ ಇಡಲಾಗಿದೆ ಮತ್ತು ಅದಕ್ಕಿಂತ ಕುತೂಹಲಕಾರಿ ಸಂಗತಿಯೇನೆಂದರೆ, ಆ ಪತ್ರವನ್ನು ಇನ್ನೂ 63 ವರ್ಷಗಳ ಕಾಲ ಹೊರತೆಗೆಯಲಾಗದು!
ಆಸ್ಟ್ರೇಲಿಯದ 7ನ್ಯೂಸ್ ವರದಿಯೊಂದರ ಪ್ರಕಾರ ಸದರಿ ಪತ್ರವನ್ನು ರಾಣಿಯು ಸಿಡ್ನಿ ನಿವಾಸಿಗಳನ್ನು ಉದ್ದೇಶಿಸಿ ನವೆಂಬರ್ 1985ರಲ್ಲಿ ಬರೆದಿದ್ದರು ಮತ್ತು ಅದನ್ನು ಸಿಡ್ನಿಯ ಐತಿಹಾಸಿಕ ಕಟ್ಟಡವೊಂದರ ಕಮಾನಿನಲ್ಲಿ ಬಚ್ಚಿಡಲಾಗಿದೆ.
ರಾಣಿ ಬರೆದಿರುವ ಪತ್ರವನ್ನು ಒಂದು ಗುಟ್ಟಾದ ಸ್ಥಳದಲ್ಲಿ ಗ್ಲಾಸಿನ ಕೇಸೊಂದಲ್ಲಿ ಇಟ್ಟಿರುವುದರಿಂದ ಅದರ ಬಗ್ಗೆ ಮಾಹಿತಿ ರಾಣಿಯ ಖಾಸಗಿ ಸಿಬ್ಬಂದಿ ಸೇರಿದಂತೆ ಯಾರಲ್ಲೂ ಇಲ್ಲ ಎಂದು 7ನ್ಯೂಸ್ ವರದಿ ಮಾಡಿದೆ. ಆದರೆ, ಒಂದಂತೂ ಸತ್ಯ, 2085 ರವರೆಗೆ ಪತ್ರವನ್ನು ಹೊರತೆಗೆಯಲಾಗದು.
ಪತ್ರವನ್ನು ಸಿಡ್ನಿಯ ಮೇಯರ್ ಗೆ ಅಡ್ರೆಸ್ ಮಾಡಲಾಗಿದ್ದು ಅದರ ಮೇಲಿನ ಒಕ್ಕಣೆ ಹೀಗಿದೆ: ‘ಕ್ರಿಸ್ತ ಶಕ 2085 ನೀವಂದುಕೊಳ್ಳುವ ಯಾವುದೇ ದಿನದಂದು ಈ ಲಕೋಟೆಯನ್ನು ಓಪನ್ ಮಾಡಿ ಅದರಲ್ಲಿ ಸಿಡ್ನಿ ನಿವಾಸಿಗಳಿಗೆ ಇರುವ ನನ್ನ ಸಂದೇಶವನ್ನು ಓದಿ ಹೇಳಬೇಕು’.
ಒಕ್ಕಣೆಯ ಕೆಳಗೆ ಅವರು ಸರಳವಾಗಿ ಎಲಿಜಬೆತ್ ಆರ್ ಅಂತ ಸಹಿ ಮಾಡಿದ್ದಾರೆ.
ಬ್ರಿಟನ್ನಿನ ಮಹಾರಾಣಿಯಾಗಿ ಎಲಿಜಬೆತ್ ಆಸ್ಟ್ರೇಲಿಯಗೆ 16 ಬಾರಿ ಭೇಟಿ ನೀಡಿದ್ದರು.
‘ತಮ್ಮ ಮೊದಲ ಭೇಟಿಯಿಂದಲೇ ಮಹಾರಾಣಿಗೆ ಆಸ್ಟ್ರೇಲಿಯ ಮೇಲೆ ಒಂದು ಬಗೆಯ ವ್ಯಾಮೋಹ ಹುಟ್ಟಿಕೊಂಡಿತ್ತು, ಮತ್ತು ಈ ದೇಶಕ್ಕೆ ಅವರು ತಮ್ಮ ಹೃದಯದಲ್ಲಿ ವಿಶಿಷ್ಟ ಸ್ಥಾನವನ್ನು ನೀಡಿದ್ದರು, ಆಸ್ಟ್ರೇಲಿಯಗೆ ಭೇಟಿ ನೀಡಿದ ಯಾವುದೇ ಅರಸೊತ್ತಿಗೆ ಏಕೈಕ ಪ್ರತಿನಿಧಿ ಅವರಾಗಿದ್ದರು,’ ಎಂದು ಆಸ್ಟ್ರೇಲಿಯದ ಪ್ರಧಾನ ಮಂತ್ರಿ ಅಂತೋಣಿ ಅಲ್ಬಾನೀಸ್ ಅವರು ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಆದಾದ ಮೇಲೆ ಅವರು ಆಸ್ಟ್ರೇಲಿಯಗೆ ಭೇಟಿ ನೀಡಿ ದೇಶದ ಪ್ರತಿ ಭಾಗದಲ್ಲಿ ಜನರನ್ನು ಭೇಟಿಯಾಗಿ ಅವರಿಗೆ ವಿಶ್ ಮಾಡಿದ್ದು ಅವರಿಗೆ ಈ ದೇಶದ ಮೇಲಿದ್ದ ಪ್ರೀತಿಯನ್ನು ಖಚಿತಪಡಿಸುತ್ತದೆ,’ ಎಂದು ಅಲ್ಬಾನೀಸ್ ಹೇಳಿದ್ದಾರೆ.
ರಾಣಿಗೆ ಶ್ರದ್ಧಾಂಜಲಿಯಾಗಿ ಸಿಡ್ನಿಯ ಐತಿಹಾಸಿಕ ಒಪೆರಾ ಹೌಸನ್ನು ಶುಕ್ರವಾರದಂದು ವಿದ್ದುದ್ದೀಪಗಳಿಂದ ಬೆಳಗಿಸಲಾಗಿತ್ತು.
ಕಾಮನ್ ವೆಲ್ತ್ ದೇಶಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯದ ನೆರೆರಾಷ್ಟ್ರ ನ್ಯೂಜಿಲೆಂಡ್ ಸಹ ರವಿವಾರದಂದು ಕಿಂಗ್ ಚಾರ್ಲ್ಸ್ III ಅವರನ್ನು ಬ್ರಿಟನ್ನಿನ ಹೊಸ ದೊರೆಯಾಗಿ ಘೋಷಿಸಿತು. ಬ್ರಿಟನ್ನಿನ ಆಕ್ಸೆಷನ್ ಕೌನ್ಸಿಲ್ ಚಾರ್ಲ್ಸ್ III ಅವರನ್ನು ಅಧಿಕೃತವಾಗಿ ದೊರೆಯನ್ನಾಗಿ ಘೋಷಿಸಿದ ಕಾರ್ಯಕ್ರಮವನ್ನು ಯುನೈಟೆಡ್ ಕಿಂಗ್ಡಮ್ ನಲ್ಲಿ ನೇರಪ್ರಸಾರ ಮಾಡಲಾಗಿತ್ತು.
ರವಿವಾರದಂದೇ ಆಸ್ಟ್ರೇಲಿಯ ಕೂಡ ಚಾರ್ಲ್ಸ್ III ಅವರನ್ನು ಬ್ರಿಟನ್ನಿನ ನೂತನ ಅರಸನಾಗಿ ಅಂಗೀಕರಿಸಿತು. ರಾಣಿ ಎಲಿಜಬೆತ್ ಅವರ ಸುದೀರ್ಘ 7 ದಶಕಗಳ ಆಳ್ವಿಕೆ ನಂತರ ಒಬ್ಬ ಅರಸ ಬ್ರಿಟನ್ನಿನ ಗದ್ದುಗೆ ಏರಿದ್ದಾರೆ.