ಐ ಹೇಟ್ ಇಂಡಿಯಾ ಪ್ರವಾಸ ಮುಂದುವರೆಸಿ; ಪ್ರಧಾನಿ ಮೋದಿ ಕುರಿತ ಹೇಳಿಕೆಗೆ ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡಿದ ಯುಎಸ್ ಗಾಯಕಿ

ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಪ್ರಧಾನಿ ನರೇಂದ್ರ ಮೋದಿಯನ್ನು ಸಮರ್ಥಿಸಿಕೊಂಡಿದ್ದು, ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೆದರುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಭಾರತದ ರಷ್ಯಾದ ತೈಲ ನೀತಿಯನ್ನು ನಿರ್ದೇಶಿಸಲು ಅಮೆರಿಕಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳ ನಡುವೆ ಅಮೆರಿಕನ್ ಗಾಯಕಿ ಮೇರಿ ಅವರು ರಾಹುಲ್ ಗಾಂಧಿಗೆ "ನಿಮ್ಮ ಐ ಹೇಟ್ ಇಂಡಿಯಾ ಪ್ರವಾಸಕ್ಕೆ ಹಿಂತಿರುಗಿ" ಎಂದು ಹೇಳುವ ಮೂಲಕ ಲೇವಡಿ ಮಾಡಿದ್ದಾರೆ.

ಐ ಹೇಟ್ ಇಂಡಿಯಾ ಪ್ರವಾಸ ಮುಂದುವರೆಸಿ; ಪ್ರಧಾನಿ ಮೋದಿ ಕುರಿತ ಹೇಳಿಕೆಗೆ ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡಿದ ಯುಎಸ್ ಗಾಯಕಿ
Modi With Mary

Updated on: Oct 17, 2025 | 3:17 PM

ನವದೆಹಲಿ, ಅಕ್ಟೋಬರ್ 17: ಡೊನಾಲ್ಡ್ ಟ್ರಂಪ್ ಕುರಿತು ಪ್ರಧಾನಿ ನರೇಂದ್ರ ಮೋದಿಯವರ (PM Modi) ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ್ದ ಹೇಳಿಕೆಗಳ ವಿರುದ್ಧ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಇಂದು ವಾಗ್ದಾಳಿ ನಡೆಸಿದ್ದಾರೆ. “ನಿಮ್ಮ ಐ ಹೇಟ್ ಇಂಡಿಯಾ ಪ್ರವಾಸಕ್ಕೆ ಹಿಂತಿರುಗಿ” ಎಂದು ಆಕೆ ರಾಹುಲ್ ಗಾಂಧಿಗೆ ಸೂಚಿಸಿ ಟ್ರೋಲ್ ಮಾಡಿದ್ದಾರೆ. ಪ್ರಧಾನಿ ಮೋದಿಯನ್ನು ಆಗಾಗ ಹೊಗಳುವ ಗಾಯಕಿ ಮೇರಿ ಮಿಲ್ಬೆನ್ ಈ ಬಾರಿಯೂ ಮೋದಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ನಿನ್ನೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಪ್ರಧಾನಿ ಮೋದಿ ಭಯಗೊಂಡಿದ್ದಾರೆ. ಪ್ರಧಾನಿ ಮೋದಿ ಟ್ರಂಪ್‌ಗೆ ಹೆದರುತ್ತಾರೆ. ಭಾರತ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ಟ್ರಂಪ್ ನಿರ್ಧರಿಸಲು ಮತ್ತು ಘೋಷಿಸಲು ಮೋದಿ ಏಕೆ ಅವಕಾಶ ಮಾಡಿ ಕೊಡುತ್ತಾರೆ? ಪದೇ ಪದೇ ಭಾರತವನ್ನು ನಿಂದಿಸುತ್ತಿದ್ದರೂ ಟ್ರಂಪ್ ಅವರೊಂದಿಗೆ ಮೋದಿ ಮಾತನಾಡಿ ಅಭಿನಂದನೆ ಹೇಳುತ್ತಿರುತ್ತಾರೆ. ನಮ್ಮ ದೇಶದ ಹಣಕಾಸು ಸಚಿವರ ಅಮೆರಿಕ ಭೇಟಿಯನ್ನು ರದ್ದುಗೊಳಿಸಲಾಗಿದೆ. ಶರ್ಮ್ ಎಲ್-ಶೇಖ್ ಶೃಂಗಸಭೆಗೆ ಮೋದಿ ಹೋಗಲಿಲ್ಲ. ಇದರ ಅರ್ಥವೇನು? ಎಂದು ಪ್ರಶ್ನಿಸಿದ್ದರು.


ಇದನ್ನೂ ಓದಿ: ನಿನ್ನೆ ಪ್ರಧಾನಿ ಮೋದಿ- ಟ್ರಂಪ್ ನಡುವೆ ಫೋನ್ ಮಾತುಕತೆ ನಡೆದಿಲ್ಲ; ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಭಾರತ ಸ್ಪಷ್ಟನೆ

ಇದರ ಬೆನ್ನಲ್ಲೇ ಮೋದಿಯನ್ನು ಸಮರ್ಥಿಸಿಕೊಂಡಿರುವ ಅಮೆರಿಕನ್ ಗಾಯಕಿ ಮೇರಿ, “ನೀವು ಹೇಳಿರುವುದು ತಪ್ಪು ರಾಹುಲ್ ಗಾಂಧಿಯವರೇ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಅಧ್ಯಕ್ಷ ಟ್ರಂಪ್‌ಗೆ ಹೆದರುವುದಿಲ್ಲ. ಪ್ರಧಾನಿ ಮೋದಿ ದೀರ್ಘ ಆಟವನ್ನು ಅರ್ಥಮಾಡಿಕೊಂಡಿದ್ದಾರೆ. ಇದು ಅಮೆರಿಕದೊಂದಿಗಿನ ಅವರ ರಾಜತಾಂತ್ರಿಕತೆಯ ಕಾರ್ಯತಂತ್ರವಾಗಿದೆ. ನಮ್ಮ ಸರ್ಕಾರ ಯಾವಾಗಲೂ ಅಮೆರಿಕದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವಂತೆಯೇ, ಪ್ರಧಾನಿ ಮೋದಿಯೂ ಭಾರತಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ. ನಾನು ಅದನ್ನು ಶ್ಲಾಘಿಸುತ್ತೇನೆ, ” ಎಂದು ಹೇಳಿದ್ದಾರೆ.


ಇದಿಷ್ಟೇ ಅಲ್ಲದೆ, “ನೀವು ಈ ರೀತಿಯ ನಾಯಕತ್ವವನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ನಾನು ನಿರೀಕ್ಷಿಸುವುದಿಲ್ಲ. ಏಕೆಂದರೆ ನೀವು ಭಾರತದ ಪ್ರಧಾನಿಯಾಗುವ ಕುಶಾಗ್ರಮತಿ ಹೊಂದಿಲ್ಲ. ನೀವೊಬ್ಬರೇ ಇರುವ ನಿಮ್ಮ “ಐ ಹೇಟ್ ಇಂಡಿಯಾ” ಪ್ರವಾಸಕ್ಕೆ ಹಿಂತಿರುಗುವುದು ಉತ್ತಮ” ಎಂದು ಮೇರಿ ಟೀಕಿಸಿದ್ದಾರೆ.

ಇದನ್ನೂ ಓದಿ: ರಷ್ಯನ್ ತೈಲ ಖರೀದಿಸಲ್ಲ ಅಂತ ಟ್ರಂಪ್​ಗೆ ಮೋದಿ ಭರವಸೆ ಕೊಟ್ಟರಾ? ಇಲ್ಲಿದೆ ಭಾರತದ ನಿಲುವು

ನಟಿ ಮತ್ತು ಸಾಂಸ್ಕೃತಿಕ ರಾಯಭಾರಿಯೂ ಆಗಿರುವ ಮೇರಿ ಮಿಲ್ಬೆನ್ ಜೂನ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಆಗ ಅವರು ರೊನಾಲ್ಡ್ ರೇಗನ್ ಕಟ್ಟಡದಲ್ಲಿ ಭಾರತದ ರಾಷ್ಟ್ರಗೀತೆಯನ್ನು ಹಾಡಿದ್ದರು. ನಂತರ ಅವರು ಪ್ರಧಾನಿ ಮೋದಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದರು. ಈ ಕ್ಷಣವು ವಿಶ್ವದಾದ್ಯಂತ ಗಮನ ಸೆಳೆದಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ