ಜೀವಮಾನದ ಅನುಭವ: ಬಾಹ್ಯಾಕಾಶ ಯಾತ್ರೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ರಿಚರ್ಡ್​ ಬ್ರಾನ್​ಸನ್ ಹೇಳಿದ ಮಾತಿದು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 11, 2021 | 10:58 PM

ಈ ಪ್ರಯಾಣವು ‘ಜೀವನದ ಅತಿಶ್ರೇಷ್ಠ ಅನುಭವ’ ಎಂದು ಅವರು ಬಣ್ಣಿಸಿದರು. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಈ ಪ್ರಯಾಣವು ಮುನ್ನುಡಿ ಬರೆಯಲಿದೆ ಎಂದು ಹೇಳಿದರು.

ಜೀವಮಾನದ ಅನುಭವ: ಬಾಹ್ಯಾಕಾಶ ಯಾತ್ರೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ರಿಚರ್ಡ್​ ಬ್ರಾನ್​ಸನ್ ಹೇಳಿದ ಮಾತಿದು
ಸಹ ಪ್ರಯಾಣಿಕರೊಂದಿಗೆ ರಿಚರ್ಡ್​ ಬ್ರಾನ್​ಸನ್
Follow us on

ನ್ಯೂ ಮೆಕ್ಸಿಕೊ: ಬ್ರಿಟನ್​ನ ಶ್ರೀಮಂತ ಉದ್ಯಮಿ ರಿಚರ್ಡ್​ ಬ್ರಾನ್​ಸನ್ ಭಾನುವಾರ ವರ್ಜಿನ್ ಗ್ಯಾಲಕ್ಟಿಕ್​ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರಿದರು. ಈ ಪ್ರಯಾಣವು ‘ಜೀವನದ ಅತಿಶ್ರೇಷ್ಠ ಅನುಭವ’ ಎಂದು ಅವರು ಬಣ್ಣಿಸಿದರು. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಈ ಪ್ರಯಾಣವು ಮುನ್ನುಡಿ ಬರೆಯಲಿದೆ ಎಂದು ಹೇಳಿದರು. ಬಾಹ್ಯಾಕಾಶದ ನೌಕೆ ಏರಲು ಸೈಕಲ್​ನಲ್ಲಿ ಬಂದ ಬ್ರಾನ್​ಸನ್​ ನಿರ್ಧಾರವೂ ಎಲ್ಲರ ಗಮನ ಸೆಳೆಯಿತು.

ವರ್ಜಿನ್ ಗ್ಯಾಲಸ್ಟಿಕ್​ನ ಅದ್ಭುತ ತಂಡಕ್ಕೆ ಅಭಿನಂದನೆಗಳು. 17 ವರ್ಷಗಳ ಅತಿ ಕಠಿಣ ಪರಿಶ್ರಮದಿಂದ ಇದು ಸಾಧ್ಯವಾಯಿತು’ ಎಂದು ವಿಎಸ್​ಎಸ್​ ಯುನಿಟಿ ಬಾಹ್ಯಾಕಾಶ ನೌಕೆಯಿಂದ ಲೈವ್​ಫೀಡ್​ನಲ್ಲಿ ಮಾತನಾಡಿದ ಅವರು ಹೇಳಿದರು. ಭೂಮಿಯಿಂದ 85 ಕಿಲೋಮೀಟರ್ ಎತ್ತರಕ್ಕೆ ಏರಿದ ಬಾಹ್ಯಾಕಾಶ ನೌಕೆಯು ಪ್ರಯಾಣಿಕರಿಗೆ ತೂಕ ಕಳೆದುಕೊಳ್ಳುವ ಅನುಭವ ಕಲ್ಪಿಸಿತು. ಭೂಮಿಯನ್ನು ಒಂದು ಗೋಲವಾಗಿ ಒಂದೇ ಎಟುಕಿಗೆ ಕಣ್ಣು ತುಂಬಿಕೊಳ್ಳುವ ಅವಕಾಶವನ್ನೂ ಈ ನೌಕೆ ನೀಡಿತು.

ಟೇಕ್​ ಆಫ್ ಆದ ಒಂದು ತಾಸಿನ ಅವಧಿಯಲ್ಲಿ ನಿಗದಿತ ಅಂತರವನ್ನು ಯಾವುದೇ ಗೊಂದಲಗಳಿಲ್ಲದೆ ಬಾಹ್ಯಾಕಾಶ ನೌಕೆ ಕ್ರಮಿಸಿತು. ಬಾಹ್ಯಾಕಾಶ ಪ್ರವಾಸೋದ್ಯಮಕ್ಕಾಗಿ ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿರುವ ಅಮೆಜಾನ್​ ಕಂಪನಿಗೆ ಇದು ಹಿನ್ನೆಡೆಯಾದಂತೆಯೇ ಸರಿ. ಏಕೆಂದರೆ ಅಮೆಜಾನ್​ನ ಬಾಹ್ಯಾಕಾಶಯಾನಕ್ಕೂ ಈಗಾಗಲೇ ದಿನಾಂಕ ನಿಗದಿಯಾಗಿದೆ. ಆದರೆ ಅಮೆಜಾನ್​ ಸಂಸ್ಥೆಯ ಅಂತಿಮ ಹಂತದ ಯಾನ ಆರಂಭವಾಗುವ ಮೊದಲೇ ರಿಚರ್ಡ್​ ಬ್ರಾನ್​ಸನ್ ಸ್ವತಃ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದಾರೆ.

ಇದಕ್ಕೂ ಮೊದಲು ವಿಎಸ್​ಎಸ್​ ಯೂನಿಟಿ ಬಾಹ್ಯಾಕಾಶ ನೌಕೆಯು 50,000 ಅಡಿಗಳಷ್ಟು ಎತ್ತರಕ್ಕೆ ವಿಮಾನವೊಂದರಲ್ಲಿ ಮೇಲೇರಿ, ಅಲ್ಲಿಂದ ರಾಕೆಟ್ ಚಾಲಿತ ಎಂಜಿನ್​ಗಳಿಂದ ಶಕ್ತಿಪಡೆದು ಮತ್ತಷ್ಟು ಮೇಲಕ್ಕೇರಿತು. ಬಾಹ್ಯಾಕಾಶ ವಿಮಾನದಲ್ಲಿ ಇಬ್ಬರು ಪೈಲಟ್​ಗಳು ಮತ್ತು ರಿಚರ್ಡ್​ ಬ್ರಾನ್​ಸನ್ ಸೇರಿದಂತೆ ನಾಲ್ವರು ಪ್ರಯಾಣಿಕರಿದ್ದರು. ಬಾಹ್ಯಾಕಾಶದದಲ್ಲಿ ಗಮ್ಯಸ್ಥಾನ ಮುಟ್ಟಿದ ನಂತರ ಮತ್ತೆ ಭೂಮಿಯ ವಾತಾವರಣ ಪ್ರವೇಶಿಸಿದ ನೌಕೆಯು ರನ್​ವೇಗೆ ಬಂದಿಳಿಯಿತು.

ಭೂಸ್ಪರ್ಶವಾದ ನಂತರ ನಗುಮುಖದ ಬ್ರಾನ್​ಸನ್​ ತನ್ನ ಪ್ರೀತಿಪಾತ್ರರನ್ನು ಬಿಗಿದಪ್ಪಿದರು. ಬಾಹ್ಯಾಕಾಶ ಯಾನಕ್ಕೆಂದು ವಿಮಾನ ನಿಲ್ದಾಣಕ್ಕೆ ರಿಚರ್ಡ್​ ಸೈಕಲ್​ನಲ್ಲಿ ಬಂದಿದ್ದು ಎಲ್ಲರ ಗಮನ ಸೆಳೆಯಿತು. ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ ನಂತರ ಬಾಹ್ಯಾಕಾಶ ನೌಕೆ ಏರಿದರು. ಸ್ಪೇಸ್​ ಎಕ್ಸ್​ ಸಂಸ್ಥೆಯ ಮಾಲೀಕ ಎಲನ್ ಮಸ್ಕ್​ ಸಹ ಈ ಸಂದರ್ಭ ರನ್​ವೇ ಸಮೀಪ ಬಂದಿದ್ದರು. ಅವರೊಂದಿಗೆ ಬ್ರಾನ್​ಸನ್ ಚಿತ್ರ ತೆಗೆಸಿಕೊಂಡರು.

(Richard Branson After Few Minutes Of Space Flight says its an Experience Of Lifetime)

ಇದನ್ನೂ ಓದಿ: Sirisha Bandla: ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನುಡಿ: ನಭಕ್ಕೆ ನೆಗೆದ ರಿಚರ್ಡ್​ ಬ್ರಾನ್​ಸನ್

ಇದನ್ನೂ ಓದಿ: ಮೂವರು ಗಗನಯಾತ್ರಿಗಳನ್ನು ಹೊತ್ತು ಆಕಾಶಕ್ಕೆ ಹಾರಿದ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ