Sirisha Bandla: ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನುಡಿ: ನಭಕ್ಕೆ ನೆಗೆದ ರಿಚರ್ಡ್ ಬ್ರಾನ್ಸನ್
ಅಮೆರಿಕದ ಶ್ರೀಮಂತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಮತ್ತು ವರ್ಜಿನ್ ಗಾಲಕ್ಟಿಕ್ ಹೋಲ್ಡಿಂಗ್ಸ್ ಕಂಪನಿಯ ಐವರು ಉದ್ಯೋಗಿಗಳಿದ್ದ ಬಾಹ್ಯಾಕಾಶ ನೌಕೆ ಭಾನುವಾರ ನಭಕ್ಕೆ ನೆಗೆಯಿತು. ಈ ಬಾಹ್ಯಾಕಾಶ ನೌಕೆಯಲ್ಲಿ ಭಾರತ ಮೂಲದ ಸಿರಿಶಾ ಬಾಂದ್ಲಾ ಸಹ ಇದ್ದಾರೆ.
ವಾಷಿಂಗ್ಟನ್: ಅಮೆರಿಕದ ಶ್ರೀಮಂತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಮತ್ತು ವರ್ಜಿನ್ ಗಾಲಕ್ಟಿಕ್ ಹೋಲ್ಡಿಂಗ್ಸ್ ಕಂಪನಿಯ ಐವರು ಉದ್ಯೋಗಿಗಳಿದ್ದ ಬಾಹ್ಯಾಕಾಶ ನೌಕೆ ಭಾನುವಾರ ನಭಕ್ಕೆ ನೆಗೆಯಿತು. 2004ರಲ್ಲಿ ಕಂಪನಿಯನ್ನು ಆರಂಭಿಸಿದ್ದ ರಿಚರ್ಡ್ ಬ್ರಾನ್ಸನ್ ಮುಂದಿನ ವರ್ಷದಿಂದ ಬಾಹ್ಯಾಕಾಶಕ್ಕೆ ಜನರನ್ನು ಟ್ರಿಪ್ ಕರೆದೊಯ್ಯುವ ಯೋಜನೆ ರೂಪಿಸಿದ್ದಾರೆ.
ಈ ಬಾಹ್ಯಾಕಾಶ ನೌಕೆಯಲ್ಲಿ ಭಾರತ ಮೂಲದ ಸಿರಿಶಾ ಬಾಂದ್ಲಾ ಸಹ ಇದ್ದಾರೆ. ವರ್ಜಿನ್ ಕಂಪನಿಯ ಸರ್ಕಾರಿ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷೆ. ಸಂಶೋಧಕರ ಅನುಭವದ ಬಗ್ಗೆ ಈ ಯಾನದಲ್ಲಿ ಇವರು ಗಮನ ಹರಿಸಲಿದ್ದಾರೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಜನಿಸಿದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ ಪ್ರಯಣಿತ್ತಿರುವ ಭಾರತ ಮೂಲದ ಎರಡನೇ ಮಹಿಳೆ ಎನಿಸಿದ್ದಾರೆ.
ನ್ಯೂ ಮೆಕ್ಸಿಕೊ ನಗರದಲ್ಲಿ ಭಾನುವಾರ ಮೋಡಗಳಿಲ್ಲದ ಶುಭ್ರ ಆಗಸಕ್ಕೆ ರಿಚರ್ಡ್ ಬ್ರಾನ್ಸನ್ ಮತ್ತು ಉದ್ಯೋಗಿಗಳಿದ್ದ ಬಾಹ್ಯಾಕಾಶ ನೌಕೆ ಟೇಕಾಫ್ ಆಯಿತು. ಈ ಸಂಸ್ಥೆಯು ರೂಪಿಸಿರುವ ವಿಎಸ್ಎಸ್ ಯುನಿಟಿ ಬಾಹ್ಯಾಕಾಶ ನೌಕೆಯು ಭೂಮಿಯಿಂದ 45,000 ಅಡಿಗಳಷ್ಟು ಎತ್ತರದವರೆಗೆ ವಿಮಾನದಲ್ಲಿ ಏರುತ್ತದೆ. ಅಲ್ಲಿ ವಿಮಾನದಿಂದ ಬೇರ್ಪಡುವ ಬಾಹ್ಯಾಕಾಶ ನೌಕೆಯು ರಾಕೆಂಟ್ ಎಂಜಿನ್ನ ಶಕ್ತಿಯಿಂದ 2,90,000 ಅಡಿ (89 ಕಿಮೀ) ಎತ್ತರಕ್ಕೆ ಹೋಗಲಿದೆ.
ಬಾಹ್ಯಾಕಾಶ ಯಾನ ಕ್ಷೇತ್ರದಲ್ಲಿ ವರ್ಜಿನ್ ಕಂಪನಿಯ ರಿಚರ್ಡ್ ಬ್ರಾನ್ಸನ್ ಮತ್ತು ಅಮೆಜಾನ್ ಕಂಪನಿಯ ಜೆಫ್ ಬಿಜೊಸ್ ನಡುವೆ ಪೈಪೋಟಿಯಿದೆ. ಅಮೆಜಾನ್ ಸಂಸ್ಥೆಯ ಜೆಫ್ ಬಿಜೊಸ್, ತಮ್ಮ ಬ್ಲೂ ಒರಿಜಿನ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ರಾಕೆಟ್ನಲ್ಲಿ ಮುಂದಿನ ವಾರ ಬಾಹ್ಯಾಕಾಶ ಯಾತ್ರೆ ಮಾಡಲಿದ್ದಾರೆ. ವಿಶ್ವದ ಅತಿಶ್ರೀಮಂತ ಪ್ರವಾಸಿಗರಿಗೆ ಬಾಹ್ಯಾಕಾಶ ಪ್ರವಾಸೋದ್ಯಮದ ಅವಕಾಶ ಕಲ್ಪಿಸುವ ಮೂಲಕ ದೊಡ್ಡಮಟ್ಟದ ಹಣಗಳಿಸುವುದು ಈ ಕಂಪನಿಗಳ ಉದ್ದೇಶವಾಗಿದೆ.
70 ವರ್ಷದ ಬ್ರಾನ್ಸನ್ ಮತ್ತು ಅವರ ಸಹ ಪ್ರಯಾಣಿಕರು ಬಾಹ್ಯಾಕಾಶದಲ್ಲಿ ನಾಲ್ಕು ನಿಮಿಷಗಳ ತೂಕರಹಿತ ಸ್ಥಿತಿ ಅನುಭವಿಸಲಿದ್ದಾರೆ. ಉದ್ದೇಶಿತ ಪ್ರಯಾಣದ ತುತ್ತತುದಿ ತಲುಪಿದ ನಂತರ ಯೂನಿಟಿ ಬಾಹ್ಯಾಕಾಶ ನೌಕೆಯು ವಾಪಸ್ ತನ್ನ ನೆಲೆಗೆ ಹಿಂದಿರುಗಲಿದೆ.
ನೌಕೆಯಲ್ಲಿ ಯಾರೆಲ್ಲಾ ಇದ್ದಾರೆ? ಡೇವ್ ಮ್ಯಾಕ್: ಇವರೇ ಚೀಫ್ ಪೈಲಟ್. ವರ್ಜಿನ್ ಗ್ಯಾಲಕ್ಟಿಕ್ ಕಂಪನಿಯ ಆರಂಭದ ನೌಕರರಲ್ಲಿ ಒಬ್ಬರು. ಬ್ರಿಟನ್ನ ರಾಯಲ್ ಏರ್ಫೋರ್ಸ್ನ ಮಾಜಿ ಟೆಸ್ಟ್ ಪೈಲಟ್ ಮತ್ತು ರಿಚರ್ಡ್ ಬ್ರಾನ್ಸನ್ ಬೆಂಬಲವಿರುವ ವರ್ಜಿನ್ ಅಟ್ಲಾಂಟಿಕ್ ಏರ್ವೇಸ್ ಕಂಪನಿಯಲ್ಲಿ ಬೋಯಿಂಗ್ 747 ಪೈಲಟ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಉತ್ತರ ಸ್ಕಾಟ್ಲೆಂಡ್ನ ಹಳ್ಳಿಯೊಂದರಲ್ಲಿ ಜನಿಸಿದ ಡೇವ್ ಮ್ಯಾಕ್ ಬಾಹ್ಯಾಕಾಶಕ್ಕೆ ಹೋಗುತ್ತಿರುವ ಮೊದಲು ಸ್ಕಾಟ್ಲೆಂಡ್ ಪ್ರಜೆಯೂ ಹೌದು.
ಮೈಕೆಲ್ ಸೂಚ್: ಅಮೆರಿಕ ವಾಯಪಡೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್. 10,000 ಗಂಟೆಗೂ ಹೆಚ್ಚು ಹಾರಾಟ ಅನುಭವವಿದೆ. ಹತ್ತಾರು ವಿಧದ ವಿಮಾನಗಳ ಹಾರಾಟದ ಅನುಭವವಿದೆ. 2013ರಲ್ಲಿ ವರ್ಜಿನ್ ಕಂಪನಿ ಸೇರಿದರು. 2019ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಹಾರಿದ್ದರು.
ಸಿರಿಶಾ ಬಾಂದ್ಲಾ: ವರ್ಜಿನ್ ಕಂಪನಿಯ ಸರ್ಕಾರಿ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷೆ. ಸಂಶೋಧಕರ ಅನುಭವದ ಬಗ್ಗೆ ಈ ಯಾನದಲ್ಲಿ ಇವರು ಗಮನ ಹರಿಸಲಿದ್ದಾರೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಜನಿಸಿದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ ಪ್ರಯಣಿತ್ತಿರುವ ಭಾರತ ಮೂಲದ ಎರಡನೇ ಮಹಿಳೆ.
ಕೊಲಿನ್ ಬೆನೆಟ್: ವರ್ಜಿನ್ ಗೆಲಕ್ಟಿಕ್ ಕಂಪನಿಯ ಎಂಜಿನಿಯರ್. ಪ್ರಾಯೋಗಿಕ ಬಾಹ್ಯಾಕಾಶ ಯಾನದಲ್ಲಿ ಕ್ಯಾಬಿನ್ ಪ್ರಕ್ರಿಯೆಗಳನ್ನು ಮೌಲ್ಯಮಾಪನ ಮಾಡಲಿದ್ದಾರೆ. ವರ್ಜಿನ್ ಗೆಲಕ್ಟಿಕ್ ಕಂಪನಿಯ ಕ್ಯಾಲಿಫೋರ್ನಿಯಾ ಘಟಕದಲ್ಲಿ ಆಪರೇಷನ್ಸ್ ಎಂಜಿನಿಯರ್ ಆಗಿ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.
ಬೆತ್ ಮೊಸೆಸ್: ವರ್ಜಿನ್ ಕಂಪನಿಯಲ್ಲಿ ಬಾಹ್ಯಾಕಾಶ ಯಾನಿಗಳ ಮುಖ್ಯತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಬೆತ್ ಮೊಸೆಸ್ ಅವರಿಗೆ ಇದು 2ನೇ ಬಾಹ್ಯಾಕಾಶ ಯಾನ. ಫೆಬ್ರುವರಿ 2019ರಲ್ಲಿ ಬೆತ್ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಹೋಗಿದ್ದರು. ಈ ಯಾನದಲ್ಲಿ ಸಿಬ್ಬಂದಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಬೆತ್ ಈ ಮೊದಲು ನಾಸಾದಲ್ಲಿ 24 ವರ್ಷ ಕೆಲಸ ಮಾಡಿದ್ದರು. ಇವರ ಪತಿ ಮೈಕ್ ಮೊಸೆಸ್ ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥೆಯ ಬಾಹ್ಯಾಕಾಶ ಯೋಜನೆಗಳು ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾಗಿದ್ದಾರೆ.
(Richard Bransons Virgin Galactic takes off with Sirisha Bandla for high-altitude launch into space)
ಇದನ್ನೂ ಓದಿ: Jeff Bezos: ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿದ ಜಗತ್ತಿನ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್; ಪಿಕ್ಚರ್ ಅಭೀ ಬಾಕಿ ಹೈ
ಇದನ್ನೂ ಓದಿ: Explainer: ಹೆಜ್ಜೆ ಮುಂದಿಟ್ಟರೆ ರಕ್ತಪಾತ, ಹಿಂದಿಟ್ಟರೆ ಅವಮಾನ: ಅಡಕತ್ತರಿಯಲ್ಲಿ ರಷ್ಯಾ-ಉಕ್ರೇನ್ ಅಧ್ಯಕ್ಷರು
Published On - 9:26 pm, Sun, 11 July 21