ರಷ್ಯಾ ಮತ್ತು ಉಕ್ರೇನ್ ನಡುವಣ ಸಂಘರ್ಷ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಉಕ್ರೇನ್ ಮೇಲೆ ಮಾಡಿರುವ ದಾಳಿ ಅಚಾನಕ್ ಆದುದಲ್ಲ, ಇದು ತುಂಬಾ ಯೋಚಿಸಿ ತೆಗೆದುಕೊಂಡ ನಿರ್ಧಾರ ಎಂದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ತಮ್ಮ ನಿರ್ಧಾನವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅಮೆರಿಕದೊಂದಿಗೆ ಗಡಿ ಹಂಚಿಕೊಂಡಿರುವ ಮೆಕ್ಸಿಕೊ ಅಥವಾ ಕೆನಡಾಗಳಲ್ಲಿ ನಾವು ಸೇನಾ ನೆಲೆ ಸ್ಥಾಪಿಸಿ, ನಮ್ಮ ಕ್ಷಿಪಣಿಗಳನ್ನು ನಿಯೋಜಿಸಿದರೆ ಅಮೆರಿಕ ಸುಮ್ಮನಿರುವುದೇ ಎನ್ನುವುದು ಅವರ ಪ್ರಶ್ನೆ. ಈ ಪ್ರಶ್ನೆಯನ್ನೇ ಅವರು ಉಕ್ರೇನ್ ಮೇಲಿನ ದಾಳಿಗೆ ಸಮರ್ಥನೆಯಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಸಂವಾದವೊಂದರಲ್ಲಿ ಪುಟಿನ್ ಮಡಿರುವ ಭಾಷಣದ ಕನ್ನಡ ಅನುವಾದ ಇದು.
—
ನಾವು ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸಿಲ್ಲ ಎನ್ನುವುದು ಸುಳ್ಳು. ಆದರೆ ಅದರಿಂದ ನಿರೀಕ್ಷಿತ ಫಲ ಸಿಕ್ಕಿಲ್ಲ. ರಷ್ಯಾದ ಸದ್ಯದ ಮತ್ತು ಭವಿಷ್ಯದ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಅನಿವಾರ್ಯವಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಯಿತು. NATO ಪ್ರಭಾವ ಪೂರ್ವದಲ್ಲಿ ವಿಸ್ತರಣೆಯಾಗಲು ಅವಕಾಶ ಕೊಡುವುದಿಲ್ಲ ಎನ್ನುವುದು ನಮ್ಮ ಸ್ಪಷ್ಟ ನಿಲುವು. ಅದಕ್ಕೆ ನಾವು ಬದ್ಧರಿದ್ದೇವೆ. ಉಕ್ರೇನ್ ವಿದ್ಯಮಾನ ಆ ನಿಲುವಿನ ಒಂದು ಭಾಗ ಮಾತ್ರ.
ನಾವೇನು ನಮ್ಮ ಕ್ಷಿಪಣಿಗಳನ್ನು ಅಮೆರಿಕ ಗಡಿಯಲ್ಲಿ ನಿಲ್ಲಿಸಿದ್ದೇವೆಯೇ? ಇಲ್ಲವಲ್ಲ. ನಮ್ಮ ಮನೆ ಬಾಗಿಲಿಗೆ ತನ್ನ ಕ್ಷಿಪಣಿಗಳೊಂದಿಗೆ ಬಂದಿದ್ದು ಅಮೆರಿಕ. ನಮ್ಮ ಮನೆ ಮುಂದೆ ನಿಮ್ಮ ಕ್ಷಿಪಣಿ ಅಳವಡಿಸಬೇಡಿ ಎನ್ನುವುದು ದಾಳಿಕೋರ ನೀತಿಯಾಗುತ್ತದೆಯೇ? ಇದರಲ್ಲಿ ಅಸಹಜವಾದುದು ಏನಿದೆ? ಕೆನಡಾ ಮತ್ತು ಅಮೆರಿಕ ನಡುವಣ ಗಡಿಯಲ್ಲಿ ನಮ್ಮ ಕ್ಷಿಪಣಿಗಳನ್ನು ನಿಲ್ಲಿಸಿದರೆ ಅಮೆರಿಕ ಹೇಗೆ ಪ್ರತಿಕ್ರಿಯಿಸಬಹುದು? ಮೆಕ್ಸಿಕೊ ಗಡಿಯಲ್ಲಿ ನಾವು ಹಸ್ತಕ್ಷೇಪ ಮಾಡಿದರೆ ಅಮೆರಿಕ ಹೇಗೆ ಪ್ರತಿಕ್ರಿಯಿಸಬಹುದು?
ಅಮೆರಿಕ್ಕೆ ಇತರ ದೇಶಗಳೊಂದಿಗೆ ಎಂದಿಗೂ ಗಡಿ ವಿವಾದ ಇರಲೇ ಇಲ್ಲವೇ? ಕ್ಯಾಲಿಫೋರ್ನಿಯಾ ಮೊದಲು ಯಾರಿಗೆ ಸೇರಿತ್ತು? ಟೆಕ್ಸಾಸ್ ಎಲ್ಲಿತ್ತು? ಈಗ ಈ ನಗರಗಳು ಅಮೆರಿಕದಲ್ಲಿ ಯಾಕೆ ಇವೆ? ನಿಮಗೆ ಎಲ್ಲವೂ ಮರೆತು ಹೋಗಿದೆಯೇ? ಪರವಾಗಿಲ್ಲ, ಈಗ ಶಾಂತಿ ಸುವ್ಯವಸ್ಥೆ ನೆಲೆಸಿದೆ. ನೆಮ್ಮದಿಯ ಭಾವ ಮೂಡಿದೆ. ಕ್ರಿಮಿಯಾ ಬಗ್ಗೆ ಮಾತನಾಡುವ ಯಾರಿಗೂ ಕ್ಯಾಲಿಫೋರ್ನಿಯಾ ಅಥವಾ ಟೆಕ್ಸಾಸ್ ನೆನಪಾಗುತ್ತಿಲ್ಲ. ಪರವಾಗಿಲ್ಲ ಬಿಡಿ.
ಆದರೆ ಉಕ್ರೇನ್ ರೂಪಿಸಿದವರು ಯಾರು ಎಂಬುದನ್ನು ಮಾತ್ರ ದಯವಿಟ್ಟು ಮರೆಯಬೇಡಿ. ಸೋವಿಯತ್ ಒಕ್ಕೂಟ ರೂಪಿಸಿದ ಲೆನಿನ್ ಅವರೇ ಉಕ್ರೇನ್ ರಾಜ್ಯವನ್ನೂ ರೂಪಿಸಿದ್ದರು. ಒಕ್ಕೂಟ ಒಪ್ಪಂದ ಆಗಿದ್ದು 1922ರಲ್ಲಿ, ಸಂವಿಧಾನ ಅಸ್ತಿತ್ವಕ್ಕೆ ಬಂದಿದ್ದು 1924ರಲ್ಲಿ. ಸಂವಿಧಾನದ ಆಶಯಕ್ಕೆ ಅನುಗುಣವಾಗಿಯೇ ಉಕ್ರೇನ್ ಸಹ ರೂಪುಗೊಂಡಿತ್ತು.
ಈಗ ನಮ್ಮೆದುರು ಇರುವ ಸಮಸ್ಯೆ ಅದಲ್ಲ. ಇತಿಹಾಸದಲ್ಲಿ ಏನೆಲ್ಲಾ ಇದೆಯೋ ಅದಕ್ಕೆ ದೇವರು ಸಾಕ್ಷಿ. ಈಗಿನ ವಿಚಾರ ಇರುವುದು ರಷ್ಯಾದ ಭದ್ರತೆಗೆ ಇರುವ ಆತಂಕದ ಬಗ್ಗೆ. ನಮಗೆ ರಾಜತಾಂತ್ರಿಕ ಮಾತುಕತೆಗಳು ಮುಖ್ಯ ಅಲ್ಲವೇ ಅಲ್ಲ. ಈ ಬಿಕ್ಕಟ್ಟಿನ ಫಲಿತಾಂಶ ಏನಾಗಬಹುದು ಎಂಬುದಷ್ಟೇ ನಮಗೆ ಮುಖ್ಯ. 90ರ ದಶಕದಲ್ಲಿ ಅಮೆರಿಕ ನೇತೃತ್ವದ ನ್ಯಾಟೊ ಒಕ್ಕೂಟವು ಪೂರ್ವದತ್ತ ಒಂದೇ ಒಂದು ಇಂಚು ಮುಂದೊತ್ತಿ ಬರುವುದಿಲ್ಲ ಎಂದಿತ್ತು. ಆದರೆ ಆಗಿದ್ದೇನು?
ಅವರು ನಮಗೆ ಮೋಸ ಮಾಡಿದರು. ನ್ಯಾಟೊ ಒಪ್ಪಂದಗಳು ಐದು ದೇಶಗಳೊಂದಿಗೆ ಹೊಸದಾಗಿ ಆಯಿತು. ರೊಮಾನಿಯಾ ಮತ್ತು ಪೊಲೆಂಡ್ಗಳಲ್ಲಿಯೂ ಈಗ ಕ್ಷಿಪಣಿ ವ್ಯವಸ್ಥೆಗಳು ಬಂದು ಕುಳಿತಿವೆ. ಒಂದು ವಿಷಯ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಿ, ನಾವು ಯಾರಿಗೂ ಬೆದರಿಕೆ ಹಾಕುತ್ತಿಲ್ಲ. ನಾವು ಅಮೆರಿಕ ಅಥವಾ ಇಂಗ್ಲೆಂಡ್ ಗಡಿಗೆ ಬಂದಿಲ್ಲ.
ನಮ್ಮ ಮನೆ ಬಾಗಿಲಿಗೆ ಬಂದಿರುವುದು ಅವರು. ಉಕ್ರೇನ್ಗೆ ನ್ಯಾಟೊ ಸದಸ್ಯತ್ವ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದರ ಅರ್ಥ ಇನ್ನು ಮುಂದೆ ಉಕ್ರೇನ್ನಲ್ಲಿ ರಷ್ಯಾವನ್ನು ಹಣಿಯುವ ಕ್ಷಿಪಣಿ ವ್ಯವಸ್ಥೆ ನೆಲೆಗೊಳ್ಳುತ್ತದೆ. ಉಕ್ರೇನ್ನಲ್ಲಿ ಬೇರೆ ದೇಶದ ಸೈನಿಕರಿಗಾಗಿ ಸೇನಾ ನೆಲೆಗಳು ರೂಪುಗೊಳ್ಳುತ್ತವೆ. ಈ ಬೆಳವಣಿಗೆಯನ್ನು ತಡೆಯಲು ನಾವು ಯತ್ನಿಸುತ್ತಿದ್ದೇವೆ. ನೀವು ರಷ್ಯಾದ ಬಾಗಿಲಿಗೆ ಬರುವುದಿಲ್ಲ, ಉಕ್ರೇನ್ಗೆ ನ್ಯಾಟೊ ಸದಸ್ಯತ್ವ ಕೊಡುವುದಿಲ್ಲ ಎಂಬ ಭರವಸೆಯನ್ನು ತಕ್ಷಣ ಕೊಡಿ.
ಇದನ್ನೂ ಓದಿ: Russia Ukraine war: ಪುಟಿನ್‌ಗೆ ನೀಡಿದ್ದ ಬ್ಲ್ಯಾಕ್ ಬೆಲ್ಟ್ ಹಿಂಪಡೆಯಲು ವಿಶ್ವ ಟೇಕ್ವಾಂಡೋ ನಿರ್ಧಾರ
ಇದನ್ನೂ ಓದಿ: Russia-Ukraine War: ತ್ರಿವರ್ಣ ಧ್ವಜದೊಂದಿಗೆ ಹಿಂತಿರುಗಿದ ಭಾರತೀಯ ವಿದ್ಯಾರ್ಥಿಗಳು; ಇಲ್ಲಿವೆ ಫೋಟೋಗಳು