ಲಂಡನ್: ಉಕ್ರೇನ್ನ (Ukraine) ನಗರಗಳ ಮೇಲೆ ಹಳೆಯ ಸಿಡಿತಲೆರಹಿತ ಪರಮಾಣು ಕ್ಷಿಪಣಿಗಳನ್ನು ರಷ್ಯಾ (Russia) ಪ್ರಯೋಗಿಸುತ್ತಿದೆ ಎಂದು ಬ್ರಿಟನ್ನ (Britain) ಸೇನಾ ಗುಪ್ತಚರ ಇಲಾಖೆ ಶನಿವಾರ ತಿಳಿಸಿದೆ. ಉಕ್ರೇನ್ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸಿದ ಕ್ರೂಸ್ ಕ್ಷಿಪಣಿಯೊಂದರ ಅವಶೇಷಗಳ ಚಿತ್ರವನ್ನು ಪ್ರಕಟಿಸಿರುವ ಗುಪ್ತಚರ ಇಲಾಖೆ, ಈ ಕ್ಷಿಪಣಿಯು 1980ರಲ್ಲಿ ಅಭಿವೃದ್ಧಿಪಡಿಸಿದ್ದೆಂದು ಅಂದಾಜಿಸಲಾಗಿದೆ. ಪರಮಾಣು ಸಿಡಿತಲೆಗಳ ಮೂಲಕ ದಾಳಿ ನಡೆಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾದ ಕ್ಷಿಪಣಿ ಇದಾಗಿದೆ. ಆದರೆ, ಸಿಡಿತಲೆಗಳಿಲ್ಲದೆ ರಷ್ಯಾ ಇದನ್ನು ಪ್ರಯೋಗಿಸಿದೆ ಎಂದು ಇಲಾಖೆ ಹೇಳಿದೆ.
ಇಂಥ ದಾಳಿಗಳ ಸಂದರ್ಭದಲ್ಲಿ ಕ್ಷಿಪಣಿಯ ಚಾಲನಾ ಶಕ್ತಿಯಿಂದ ಎದುರಾಳಿಗೆ ಹಾನಿಯಾಗಬಹುದಷ್ಟೇ ವಿನಃ ಹೆಚ್ಚಿನ ಪರಿಣಾಮವಾಗದು. ಈ ಮಾದರಿಯ ದಾಳಿಯಿಂದ ರಷ್ಯಾಕ್ಕೆ ತನ್ನ ಉದ್ದೇಶಿತ ಗುರಿ ಸಾಧನೆ ಸಾಧ್ಯವಿಲ್ಲ ಎಂದು ಬ್ರಿಟನ್ನ ರಕ್ಷಣಾ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ. ರಷ್ಯಾದ ದೀರ್ಘಾವಧಿಯ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ಸಂಗ್ರಹದ ಕೊರತೆಯನ್ನು ಈ ವಿದ್ಯಮಾನ ತೋರಿಸಿಕೊಟ್ಟಿದೆ ಎಂದು ಸಚಿವಾಲಯ ಹೇಳಿದೆ.
Latest Defence Intelligence update on the situation in Ukraine – 26 November 2022
Find out more about the UK government’s response: https://t.co/htZ2ZsfvmF
?? #StandWithUkraine ?? pic.twitter.com/RZ6by8tN5p
— Ministry of Defence ?? (@DefenceHQ) November 26, 2022
ಪುಟಿನ್ ಪಡೆಗಳ ಶಸ್ತ್ರಾಸ್ತ್ರ ಸಂಗ್ರಹ ಕಡಿಮೆಯಾಗುತ್ತಿದೆಯೇ?
ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧ ಆರಂಭವಾಗಿ 276 ದಿನಗಳಾಗಿವೆ. ಸದ್ಯದಲ್ಲೇ ರಷ್ಯಾ ತನ್ನ ಗುರಿ ಸಾಧಿಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯುದ್ಧದಲ್ಲಿ ಮಡಿದ ಯೋಧರ ಕುಟುಂಬದವರಿಗೆ ಕೆಲ ದಿನಗಳ ಹಿಂದಷ್ಟೇ ಭರವಸೆ ನೀಡಿದ್ದರು. ನಾವು ನಮ್ಮ ಗುರಿಯನ್ನು ಸಾಧಿಸಬೇಕು ಮತ್ತು ಅಂತಿಮವಾಗಿ ನಾವು ಅದನ್ನು ಸಾಧಿಸುತ್ತೇವೆ. ನಾನು ವೈಯಕ್ತಿಕವಾಗಿ ಮತ್ತು ದೇಶದ ಇಡೀ ನಾಯಕತ್ವ ವಹಿಸಿರುವ ನೆಲೆಯಲ್ಲಿ ನಿಮ್ಮ ನೋವಿನಲ್ಲಿ ಭಾಗಿಯಾಗಿದ್ದೇನೆ ಎಂದು ಪುಟಿನ್ ಹೇಳಿದ್ದರು. ಇದರ ಬೆನ್ನಲ್ಲೇ ರಷ್ಯಾ ಪಡೆಗಳು ಶಸ್ತ್ರಾಸ್ತ್ರ ಅಥವಾ ಸಿಡಿತಲೆರಹಿತ ಹಳೆಯ ಕ್ಷಿಪಣಿಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಷ್ಯಾ ಬತ್ತಳಿಕೆಯಲ್ಲಿರುವ ಶಸ್ತ್ರಾಸ್ತ್ರಗಳ ಸಂಗ್ರಹ ಕಡಿಮೆಯಾಗುತ್ತಿರುವುದೇ ಇದಕ್ಕೆ ಕಾರಣವಿರಬಹುದು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಿಸಲಾಗುತ್ತಿದೆ.
ರಷ್ಯಾ ದಾಳಿಗಳ ಪರಿಣಾಮವಾಗಿ ಉಕ್ರೇನ್ನ ಸುಮಾರು 60 ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್ ಕಡಿತ ಎದುರಿಸುತ್ತಿವೆ. ರಷ್ಯಾದ ದಾಳಿಗಳಿಂದ ಉಕ್ರೇನ್ನ ಇಂಧನ ಕ್ಷೇತ್ರದ ಮೇಲೆ ಭಾರಿ ಹೊಡೆತವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ