ಮಿಲ್ವಾಕಿಯ ನರಭಕ್ಷಕ ಸಲಿಂಗಿ ಕಪ್ಪುವರ್ಣೀಯರನ್ನು ಕೊಂದು ದೇಹದ ಭಾಗಗಳನ್ನು ಬೇಯಿಸಿಕೊಂಡು ತಿನ್ನುತ್ತಿದ್ದ!
ಪೊಲೀಸರು ದಾಮನ ಮನೆಯನ್ನು ಪೂರ್ಣವಾಗಿ ಜಾಲಾಡಿದಾಗ ಕಿಚನ್ ನಲ್ಲಿ ನಾಲ್ಕು ರುಂಡಗಳು ಸಿಕ್ಕವು. ಹಾಗೆಯೇ, ಮಾನವರ ವಿವಿಧ ಅಂಗಗಳನ್ನು ತುಂಬಿಸಿಟ್ಟಿದ್ದ ಬ್ಯಾಗ್ ಗಳು ಸಿಕ್ಕವು. ಎಡ್ವರ್ಡ್ಸ್ ನೋಡಿದ್ದ ಪ್ಲಾಸಿಕ್ ಡ್ರಮ್ ನಲ್ಲಿ ಆಸಿಡ್ ತುಂಬಿ ಅವುಗಳಲ್ಲಿ ಮಾನವರ 4 ದೇಹಗಳನ್ನು ಕರಗಿಸಲು ಇಟ್ಟಿದ್ದ!
ಸೆನ್ಸೇಷನಲ್ ಕ್ರೈಮ್ ಕತೆಗಳು: ಅಮೆರಿಕ ಅಪರಾಧ ಲೋಕದ ಇತಿಹಾಸದಲ್ಲಿ ಜೆಫ್ರಿ ದಾಮನ (Jeffrey Dahmer) ಹೆಸರು ಪ್ರಾಯಶಃ ಉಳಿದೆಲ್ಲ ಅಪರಾಧಿಗಳಿಗಿಂತ ಮೊದಲು ಉಲ್ಲೇಖಿಸಲ್ಪಡುತ್ತದೆ. ಅವನೊಬ್ಬ ಅತ್ಯಂತ ಕ್ರೂರ ಮತ್ತು ವಿಕೃತ ಮನಸ್ಸಿನ ಸಲಿಂಗಿಯಾಗಿದ್ದ (gay). ಅವನು ನಡೆಸುತ್ತಿದ್ದ ಭಯಾನಕ ಕೊಲೆಗಳ ಹಿನ್ನೆಲೆಯಲ್ಲೇ ಅವನನ್ನು ಮಿಲ್ವಾಕೀ ಕ್ಯಾನಿಬಾಲ್ (ಮಿಲ್ವಾಕಿಯ ನರಭಕ್ಷಕ) (Milwaukee Cannibal) ಎಂದು ಕರೆಯಲಾಗುತ್ತದೆ. ವಿಸ್ಕಾನ್ಸಿನ್ ಮತ್ತು ಮಿಲ್ವಾಕಿಗಳಲ್ಲಿ 1978 ಮತ್ತು 1991 ರ ನಡುವೆ ಅವನು ಕನಿಷ್ಟ 17 ಕೊಲೆಗಳನ್ನು ಮಾಡಿದ್ದ. ಅವನಿಗೆ ಬಲಿಯಾದವರಲ್ಲಿ ಹೆಚ್ಚಿನವರು ಕಪ್ಪುವರ್ಣದ ಸಲಿಂಗಿಗಳಾಗಿದ್ದರು. ತನ್ನ ಲೈಂಗಿಕ ವಾಂಛೆಗಳನ್ನು ನೀಗಿಸಿಕೊಳ್ಳಲು ಅವನು ಅಂಥವರನ್ನೇ ಆರಿಸಿಕೊಳ್ಳುತ್ತಿದ್ದ.
ದಾಮ ಎಂಥ ವಿಕೃತಿಗಳ ಒಡೆಯನಾಗಿದ್ದನೆಂದರೆ, ತನ್ನ ಆಹುತಿಗಳಿಗೆ ಡ್ರಗ್ಸ್ ಸೇವಿಸುವಂತೆ ಮಾಡಿ, ಚಿತ್ರಹಿಂಸೆ ಕೊಟ್ಟು ಕೊಂದ ನಂತರ ಮೃತದೇಹಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡುತ್ತಿದ್ದ. ಅವರ ಕತ್ತರಿಸಿದ ದೇಹದ ಭಾಗಗಳನ್ನು ಬೇಯಿಸಿಕೊಂಡು ತಿನ್ನುತ್ತಿದ್ದ ಇಲ್ಲವೇ ಹೆಣಗಳನ್ನು ತುಂಡು ತುಂಡು ಮಾಡಿ ತನ್ನ ಮನೆಯಲ್ಲಿ ಸಂರಕ್ಷಿಸಿಡುತ್ತಿದ್ದ!
ದಾಮನ ಕರಾಳ ರೂಪ ಟ್ರೇಸಿ ಎಡ್ವರ್ಡ್ಸ್ ಬಯಲು ಮಾಡಿದ
ಅವನಿಗೆ ಬಲಿಯಾಗಲಿದ್ದ 32-ವರ್ಷದ ಟ್ರೇಸಿ ಎಡ್ವರ್ಡ್ಸ್ ಹೆಸರಿನ ವ್ಯಕ್ತಿ ದಾಮನ ಮನೆಯಿಂದ ತಪ್ಪಿಸಿಕೊಂಡು ಹೊರಬಂದಾಗಲೇ ಅವನ ಕರಾಳ ವ್ಯಕ್ತಿತ್ವ ಹೊರಜಗತ್ತಿಗೆ ಗೊತ್ತಾಗಿದ್ದು. ಬೆತ್ತಲೆಯಾಗಿ ಕೆಮೆರಾಗೆ ಪೋಸ್ ನೀಡಿದರೆ 100 ಡಾಲರ್ ನೀಡುವುದಾಗಿ ಪುಸಲಾಯಿಸಿ ದಾಮ, ಎಡ್ವರ್ಡ್ಸ್ ನನ್ನು ಮನೆಗೆ ಕರೆದೊಯ್ದಿದ್ದ. ಆದರೆ ದಾಮನ ಮನೆ ಪ್ರವೇಶಿಸುತ್ತಲೇ ಕಟು ಘಾಟು ವಾಸನೆ ಅವನ ಮೂಗಿಗೆ ಅಡರಿತು. ದಾಮನ ಮನೆಯ ಕೋಣೆಯೊಂದರಲ್ಲಿ ಇಟ್ಟಿದ್ದ ಒಂದು ಪ್ಲಾಸ್ಟಿಕ್ ಡ್ರಮ್ ನಿಂದ ಕೆಟ್ಟ ವಾಸನೆ ಬರುತ್ತಿದೆ ಅಂತ ಆವನಿಗೆ ಖಾತ್ರಿಯಾಗಿತ್ತು.
ದಾಮ ಚೂರಿಯೊಂದನ್ನು ಹಿಡಿದು ಎಡ್ವರ್ಡ್ಸ್ ಮೇಲೆ ಆಕ್ರಮಣ ನಡೆಸುವ ಪ್ರಯತ್ನ ಮಾಡಿದನಾದರೂ ಅವನಿಂದ ತಪ್ಪಿಸಿಕೊಂಡು ಹೊರಗೋಡಿ ಬರುವಲ್ಲಿ ಸಫಲನಾಗಿದ್ದ. ಜೀವಭಯದಿಂದ ಓಡುತ್ತಿದ್ದ ಅವನಿಗೆ ಸ್ವಲ್ಪ ದೂರದಲ್ಲೇ ಇಬ್ಬರು ಪೊಲೀಸ್ ಅಧಿಕಾರಿಗಳು ಕಾಣಿಸಿದರು. ಅವರಿಗೆ ವಿಷಯ ತಿಳಿಸಿ ದಾಮನ ಮನೆಗೆ ಕರೆತಂದ. ದಾಮನ ಮನೆಯ ಡ್ರಾವರೊಂದರಲ್ಲಿ ಮಾನವ ದೇಹಗಳು ಕೊಳೆತು ನಾರುವ ಮೊದಲಿನ ವಿವಿಧ ಹಂತಗಳ ಫೋಟೋಗಳು ಸಿಕ್ಕಿದ್ದರಿಂದ ಪೊಲೀಸರು ಅವನನ್ನು ಬಂಧಿಸಿದರು.
ಕಿಚನ್ನಲ್ಲಿದ್ದವು 4 ರುಂಡಗಳು!
ಪೊಲೀಸರು ದಾಮನ ಮನೆಯನ್ನು ಪೂರ್ಣವಾಗಿ ಜಾಲಾಡಿದಾಗ ಕಿಚನ್ ನಲ್ಲಿ ನಾಲ್ಕು ರುಂಡಗಳು ಸಿಕ್ಕವು. ಹಾಗೆಯೇ, ಮಾನವರ ವಿವಿಧ ಅಂಗಗಳನ್ನು ತುಂಬಿಸಿಟ್ಟಿದ್ದ ಬ್ಯಾಗ್ ಗಳು ಸಿಕ್ಕವು. ಎಡ್ವರ್ಡ್ಸ್ ನೋಡಿದ್ದ ಪ್ಲಾಸಿಕ್ ಡ್ರಮ್ ನಲ್ಲಿ ಆಸಿಡ್ ತುಂಬಿ ಅವುಗಳಲ್ಲಿ ಮಾನವರ 4 ದೇಹಗಳನ್ನು ಕರಗಿಸಲು ಇಟ್ಟಿದ್ದ! ಆದರೇನು ಬಂತು? ಅಮೆರಿಕದಲ್ಲಿ ಮರಣ ದಂಡನೆ ಅಥವಾ ಗಲ್ಲು ಶಿಕ್ಷೆಯನ್ನು ರದ್ದು ಮಾಡಿರುವುದರಿಂದ ದಾಮನಿಗೆ ಅಜೀವ ಕಾರಾಗೃಹವಾಸದ ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಿತು.
ನಂತರ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅವನು ತಾನೆಸಗಿದ ಎಲ್ಲ ಅಪರಾಧಗಳನ್ನು ಹೇಳಿದ. ಕಪ್ಪು ವರ್ಣಿಯರನ್ನು ಉದ್ದೇಶಪೂರ್ವಕವಾಗಿ ಆರಿಸಿಕೊಳ್ಳುತ್ತಿದ್ದೆ ಎಂದು ಅವನು ಹೇಳಿದ್ದ. ದಾಮ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದುದ್ದರಿಂದಲೇ ತನ್ನ ಭಾವನೆಗಳ ಮೇಲೆ ಹಿಡಿತ ಸಾಧಿಸದಂತಾಗಿದ್ದಾನೆಯೇ ಎಂಬ ಅಂಶ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಚರ್ಚೆಯ ವಿಷಯವಾಗಿತ್ತು.
ಮಾನಸಿಕ ಅಸ್ವಸ್ಥತೆ ರಕ್ಷಣಾ ಕವಚ?
ಆದರೆ ದಾಮ ತನ್ನ ಅಪರಾಧಗಳನ್ನು ಅಂಗೀಕರಿಸಿದನಾದರೂ ಫೆಬ್ರುವರಿ 1992 ರಲ್ಲಿ ನಡೆದ ಮೊದಲ ವಿಚಾರಣೆಯಲ್ಲಿ ಮಾನಸಿಕ ಅಸ್ವಸ್ಥತೆಯನ್ನು ರಕ್ಷಣಾ ಕವಚವಾಗಿ ಬಳಸಲು ಪ್ರಯತ್ನಿದ.
ದಾಮ ಸ್ಕಿಜೊಟೈಪಲ್ ಡಿಸಾರ್ಡರ್, ಪರ್ಸೊನಾಲಿಟಿ ಡಿಸಾರ್ಡರ್ ಸೇರಿದಂತೆ ಹಲವಾರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುನೆಂದು ಮನಶಾಸ್ತ್ರಜ್ಞರು ಹೇಳಿದರು. ಪ್ರಾಸಿಕ್ಯೂಷನ್ ಮತ್ತು ಡಿಫೆನ್ಸ್-ಎರಡೂ ಪಕ್ಷಗಳು ಅವನೊಬ್ಬ ವಿಕೃತ ಕಾಮಿ ಮತ್ತು ನೆಕ್ರೋಫಿಲಿಯಾಕ್ (ಶವಗಳ ಜೊತೆ ಲೈಂಗಿಕ ಕ್ರಿಯೆ) ಆಗಿದ್ದ ಸಂಗತಿಯನ್ನು ಒಪ್ಪಿಕೊಂಡವು.
ವಿಸ್ಕಾನ್ಸಿನ್ ನಲ್ಲಿ ಗಲ್ಲು ಶಿಕ್ಷೆ ರದ್ದಾಗಿರುವುದರಿಂದ ಕೋರ್ಟ್ 1992 ರಲ್ಲಿ ಅವನಿಗೆ 15 ಜೀವಾವಧಿ ಶಿಕ್ಷೆಗಳನ್ನು ವಿಧಿಸಿತು. ಎರಡು ವರ್ಷಗಳ ನಂತರ ಅವನು ಜೈಲಿನಲ್ಲೇ ಸತ್ತ.
ದಾಮ ಸತ್ತಿದ್ದು ಹೇಗೆ?
ಕೊಲೆ ನಡೆಸಿದ ಅಪರಾಧದಲ್ಲಿ ಮರಣದಂಡನೆ ಶಿಕ್ಷೆ ಅನುಭವಿಸುತ್ತಿದ್ದ ಕ್ರಿಸ್ಟೋಫರ್ ಸ್ಕಾರ್ವರ್ ಜೇಲಿನ ಜಿಮ್ ನಲ್ಲಿದ್ದ ಮೆಟಲ್ ಪೋಲ್ ನಿಂದ ದಾಮನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ. ಅದೇ ಬ್ಲಾಕ್ ನಲ್ಲಿದ್ದ ಇನ್ನೊಬ್ಬ ಕೈದಿ ಜೆಸ್ಸಿ ಅಂಡರ್ಸನ್ ಆ ಹಲ್ಲೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ.
ಹಲ್ಲೆಯ ನಂತರ ದಾಮನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಒಂದು ಗಂಟೆ ಕಾಲ ಸಾವಿನೊಂದಿಗೆ ಹೋರಾಡಿ ಸೋಲೊಪ್ಪಿಕೊಂಡ. ಅಂಡರ್ಸನ್ 2 ದಿನಗಳ ಬಳಿಕ ಸತ್ತ.
ಸ್ಕಾರ್ವರ್ ಎರಡೂ ಹತ್ಯೆಗಳ ಹೊಣೆ ಹೊತ್ತು, ‘ದೇವರು ನನಗೆ ಹಾಗೆ ಮಾಡುವಂತೆ ಹೇಳಿದ್ದ,’ ಎಂದು ಹೇಳಿದ. ಅವನ ಶಿಕ್ಷೆಗೆ ಮತ್ತೆರಡು ಜೀವಾವಧಿ ಶಿಕ್ಷೆಗಳನ್ನು ಸೇರಿಸಲಾಯಿತು.
ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ