America Vs Russia: ನಮ್ಮೊಂದಿಗೆ ನೇರ ಯುದ್ಧ ಮಾಡಬೇಕಾಗುತ್ತೆ, ಉಕ್ರೇನ್​ಗೆ ಶಸ್ತ್ರಾಸ್ತ್ರ ಒದಗಿಸುತ್ತಿರುವ ಅಮೆರಿಕಕ್ಕೆ ರಷ್ಯಾ ಕಟು ಎಚ್ಚರಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 02, 2022 | 8:34 AM

‘ರಷ್ಯಾವನ್ನು ಮಣಿಸಬೇಕೆಂಬ ಉದ್ದೇಶದಿಂದ ಅಮೆರಿಕ ರಷ್ಯಾ ವಿರುದ್ಧ ಪರೋಕ್ಷ ಯುದ್ಧ ಮಾಡುತ್ತಿದೆ‘ ಎಂದು ರಷ್ಯಾ ಹೇಳಿದೆ.

America Vs Russia: ನಮ್ಮೊಂದಿಗೆ ನೇರ ಯುದ್ಧ ಮಾಡಬೇಕಾಗುತ್ತೆ, ಉಕ್ರೇನ್​ಗೆ ಶಸ್ತ್ರಾಸ್ತ್ರ ಒದಗಿಸುತ್ತಿರುವ ಅಮೆರಿಕಕ್ಕೆ ರಷ್ಯಾ ಕಟು ಎಚ್ಚರಿಕೆ
ರಷ್ಯಾದ ಯುದ್ಧ ಟ್ಯಾಂಕರ್
Image Credit source: NDTV
Follow us on

ಕೀವ್: ಉಕ್ರೇನ್​ಗೆ ಶಸ್ತ್ರಾಸ್ತ್ರ ಒದಗಿಸುವುದನ್ನು ಅಮೆರಿಕದ (Russia America Conflict) ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಅಮೆರಿಕ ನೇರವಾಗಿ ರಷ್ಯಾವನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾ ಎಚ್ಚರಿಕೆ. ‘ರಷ್ಯಾವನ್ನು ಮಣಿಸಬೇಕೆಂಬ ಉದ್ದೇಶದಿಂದ ಅಮೆರಿಕ ರಷ್ಯಾ ವಿರುದ್ಧ ಪರೋಕ್ಷ ಯುದ್ಧ ಮಾಡುತ್ತಿದೆ. ಇದನ್ನು ಹೇಗೆ ಎದುರಿಸಬೇಕೆಂದು ನಮಗೆ ಗೊತ್ತಿದೆ. ಇದರಿಂದ ಯಾರೂ ಊಹಿಸಲು ಆಗದ ಬೆಳವಣಿಗೆಗಳು ಆಗಬಹುದು’ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಸೆರ್​ಗಿ ರಾಯ್​ಬ್​ಕೊವ್ ಹೇಳಿದ್ದಾರೆ.

ಕಳೆದ ಫೆಬ್ರುವರಿ 24ರಂದು ಸೀಮಿತ ಸೈನಿಕ ಕಾರ್ಯಾಚರಣೆ ಎಂಬ ನೆಪದಲ್ಲಿ ಉಕ್ರೇನ್​ ಮೇಲೆ ರಷ್ಯಾ ದಾಳಿ ನಡೆಸಿತ್ತು. ಯುದ್ಧ ಆರಂಭವಾಗಿ ಮೂರು ತಿಂಗಳು ಮುಗಿದರೂ ಯಾರೊಬ್ಬರಿಗೂ ನಿರ್ಣಾಯಕ ಜಯ ಸಿಕ್ಕಿಲ್ಲ. ಈ ಯುದ್ಧದಿಂದ ಇಡೀ ಜಗತ್ತು ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿದ್ದು, ಶೀಘ್ರ ಶಾಂತಿ ಸ್ಥಾಪನೆಯಾಗಬೇಕು ಎಂದು ಜನರು ಬಯಸುತ್ತಿದ್ದಾರೆ.

ಕ್ಷಿಪಣಿ ಕೊಡುವ ಭರವಸೆ

ರಷ್ಯಾ ವಿರುದ್ಧ ಕೆಚ್ಚದೆಯಿಂದ ಹೋರಾಡುತ್ತಿರುವ ಉಕ್ರೇನ್​ಗೆ ದೂರಗಾಮಿ ರಾಕೆಟ್​ಗಳನ್ನು ಪೂರೈಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭರವಸೆ ನೀಡಿದ್ದಾರೆ. ರಷ್ಯಾದಲ್ಲಿರುವ ಗುರಿಗಳನ್ನು ಧ್ವಂಸ ಮಾಡಲು ಈ ರಾಕೆಟ್​ಗಳನ್ನು ಬಳಸಬಹುದು ಎಂದು ಅಮೆರಿಕ ಹೇಳಿದೆ. ಅಮೆರಿಕ ಉಕ್ರೇನ್​ಗೆ 70 ಕೋಟಿ ಡಾಲರ್ ಮೊತ್ತದ ಪ್ಯಾಕೇಜ್ ಘೋಷಿಸಿದ್ದು, ಈ ಪ್ಯಾಕೇಜ್​ನ ಭಾಗವಾಗಿ ರಾಕೆಟ್​ಗಳನ್ನು ಒದಗಿಸುವುದಾಗಿ ತಿಳಿಸಿದೆ.

‘ಇಂದಲ್ಲದಿದ್ದರೆ ನಾಳೆ ಈ ಸಂಘರ್ಷವು ರಾಜತಾಂತ್ರಿಕ ಮಾರ್ಗದಲ್ಲಿ ಅಂತ್ಯವಾಗುತ್ತದೆ. ಮಾತುಕತೆ ವೇಳೆ ಉಕ್ರೇನ್​ ತನ್ನ ಹಿತಾಸಕ್ತಿಗೆ ತಕ್ಕಂತೆ ಸಂಧಾನ ನಡೆಸಲು ನಾವು ಅವರ ಕೈ ಬಲಪಡಿಸಬೇಕಿದೆ. ಇದಕ್ಕಾಗಿ ಅಗತ್ಯ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕಿದೆ’ ಎಂದು ಜೋ ಬೈಡೆನ್ ಹೇಳಿದ್ದಾರೆ.

ಯುದ್ಧಟ್ಯಾಂಕ್ ಛಿದ್ರವಾಗಿರುವ ವಿಡಿಯೊ ವೈರಲ್

ಪೂರ್ವ ಉಕ್ರೇನ್​ನ ಡೊನೆಟ್​ಸ್ಕ್ ಪ್ರಾಂತ್ಯದಲ್ಲಿ ರಷ್ಯಾದ ಯುದ್ಧ ಟ್ಯಾಂಕ್ ಛಿದ್ರವಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನೆಲದಲ್ಲಿ ಹುದುಗಿಸಿದ್ದ ಎರಡು ನೆಲಬಾಂಬ್​ಗಳ ಮೇಲೆ ಹರಿದ ಯುದ್ಧ ಟ್ಯಾಂಕ್ ಸ್ಫೋಟಗೊಂಡಿತು. ನಂತರ ಅದೇ ಟ್ಯಾಂಕ್ ಮೇಲೆ ಉಕ್ರೇನ್​ನ ಕ್ಷಿಪಣಿಯೂ ಅಪ್ಪಳಿಸಿ, ಟ್ಯಾಂಕ್ ಸಂಪೂರ್ಣ ಛಿದ್ರವಾಗಿದೆ. ಕಳೆದ ತಿಂಗಳು ನಡೆದ ಈ ಘಟನೆಯ ಡ್ರೋಣ್ ವಿಡಿಯೊ ಇದೀಗ ಬಹಿರಂಗಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಎರಡನೇ ಲ್ಯಾಂಡ್​ಮೈನ್ ಸ್ಫೋಟಗೊಂಡ ಟ್ಯಾಂಕ್​ನ ಕವಚವೇ ಒಡೆದುಹೋಗಿದೆ. ಆದರೆ ಇಷ್ಟೆಲ್ಲಾ ಅನಾಹುತದ ನಂತರವೂ ಟ್ಯಾಂಕ್​ನಲ್ಲಿದ್ದ ಇಬ್ಬರು ಸಿಬ್ಬಂದಿ ಅಚ್ಚರಿ ಎನ್ನುವಂತೆ ಜೀವಂತವಾಗಿ ಹೊರಗೆ ಬಂದಿದ್ದಾರೆ. ಡೊನೆಟ್​ಸ್ಕ್​ ಪ್ರದೇಶದಲ್ಲಿ ಈ ಟ್ಯಾಂಕ್ ಉಕ್ರೇನ್​ನ ರಕ್ಷಣಾ ಪಡೆಗಳತ್ತ ಸತತ ದಾಳಿ ನಡೆಸುತ್ತಿತ್ತು. ಈ ಪ್ರಸ್ತುತ ಈ ವಲಯದಲ್ಲಿ ರಷ್ಯಾ ಸೇನಾ ಪಡೆಗಳು ವ್ಯಾಪಕವಾಗಿ ದಾಳಿ ನಡೆಸುತ್ತಿವೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:30 am, Thu, 2 June 22