ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಆರೋಗ್ಯಕ್ಕೇನಾಯ್ತು?-ಕೊವಿಡ್​ 19 ಸೋಂಕು ಅಲ್ಲ, ಕೆಮ್ಮು ನಿಲ್ಲುತ್ತಲೇ ಇಲ್ಲ..

| Updated By: Lakshmi Hegde

Updated on: Oct 12, 2021 | 1:06 PM

ಪುತಿನ್​ ಕಳೆದ ವಾರವಷ್ಟೇ 69ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರ ಕಚೇರಿಯ ಸುಮಾರು 12ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 1 ತಿಂಗಳು ಸೆಲ್ಫ್​ ಐಸೋಲೇಶನ್​​ಗೆ ಒಳಗಾಗಿದ್ದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಆರೋಗ್ಯಕ್ಕೇನಾಯ್ತು?-ಕೊವಿಡ್​ 19 ಸೋಂಕು ಅಲ್ಲ, ಕೆಮ್ಮು ನಿಲ್ಲುತ್ತಲೇ ಇಲ್ಲ..
ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​
Follow us on

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್ (Vladimir Putin)​ ಆರೋಗ್ಯಕ್ಕೇನಾಯಿತು? ಹೀಗೊಂದು ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಅವರು ತಮ್ಮ ಸರ್ಕಾರದ ಅಧಿಕಾರಿಗಳೊಟ್ಟಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಮಾತನಾಡುವಾಗ ಪದೇಪದೆ ಕೆಮ್ಮುತ್ತಿದ್ದರು. ಆದರೆ ಜತೆಜತೆಗೇ, ‘ನನಗೇನೂ ಆಗಿಲ್ಲ..ಕೊರೊನಾ ವೈರಸ್​ ತಗುಲಿಲ್ಲ. ನಾನು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದೇನೆ’ ಎಂದೂ ಹೇಳುತ್ತಿದ್ದರು. ಸಭೆಯಲ್ಲಿ ಮಾತನಾಡುತ್ತಿದ್ದ ಅವರಿಗೆ ಶೀತವಾಗಿದ್ದು ಸರಿಯಾಗಿ ಗೊತ್ತಾಗುತ್ತಿತ್ತು..ಮಾತಾಡುತ್ತಿದ್ದಂತೆ ಕೆಮ್ಮು ಬರುತ್ತಿತ್ತು. ಆದರೆ ಅವರು, ‘ಯಾರೂ ಏನೂ ಅಂದುಕೊಳ್ಳಬೇಡಿ. ನಾನು ಚೆನ್ನಾಗಿಯೇ ಇದ್ದೇನೆ. ವೈದ್ಯರು ಕೊವಿಡ್​ 19 ಟೆಸ್ಟ್ (Covid 19 Test) ಮಾಡಿದ್ದಾರೆ. ಬೇರೆ ಏನಾದರೂ ಸಮಸ್ಯೆಯಿದೆಯಾ ಎಂಬುದನ್ನೂ ತಪಾಸಣೆ ಮಾಡಿದ್ದಾರೆ’ ಎಂದು ಹೇಳುತ್ತಿದ್ದರು. ಆದರೆ ಕೆಮ್ಮುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ಈ ಸಭೆ ರಷ್ಯಾ ದೂರದರ್ಶನದಲ್ಲಿ ನೇರಪ್ರಸಾರ ಇದ್ದುದರಿಂದ ಸಹಜವಾಗಿಯೇ ಪುತಿನ್​ ಆರೋಗ್ಯದ ಬಗ್ಗೆ ಅಲ್ಲಿನ ಜನರೂ ಚರ್ಚಿಸುತ್ತಿದ್ದಾರೆ. 

ಇನ್ನು ಪುತಿನ್​ ಹೀಗೆ ಕೆಮ್ಮುತ್ತಿರುವುದು ಇದೇ ಮೊದಲಲ್ಲ. ಸ್ವಲ್ಪ ದಿನಗಳ ಹಿಂದೆ ಕೃಷಿ ಸಂಬಂಧ ವಿಷಯಗಳನ್ನು ಚರ್ಚಿಸಲು ಅಧಿಕಾರಿಗಳ ಸಭೆ ಕರೆದಾಗಲೂ ಹೀಗೆ ಪದೇಪದೆ ಕೆಮ್ಮುತ್ತಿದ್ದರು ಎಂದು ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ. ಹಾಗೇ, ಈ ಬಾರಿ ಭದ್ರತಾ ಮಂಡಳಿ ಸಭೆ ನಡೆಸುವಾಗಲೂ ಅವರು ಕೆಮ್ಮುತ್ತ, ಕಷ್ಟಪಡುತ್ತಿರುವುದನ್ನು ನೋಡಿದ ರಷ್ಯಾ ಮೇಲ್ಮನೆ ಸ್ಪೀಕರ್​ ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ, ನಿಮ್ಮ ಆರೋಗ್ಯದ ಬಗ್ಗೆ ನಾವೆಲ್ಲ ಚಿಂತಿತರಾಗಿದ್ದೇವೆ ಎಂದರು. ಅದಕ್ಕೆ ಉತ್ತರಿಸಿದ ಪುತಿನ್​, ‘ಹೆದರುವಂಥದ್ದು ಏನೂ ಇಲ್ಲ. ನಾನು ತಂಪಾದ ಗಾಳಿಯಲ್ಲಿ ತಿರುಗಾಡಿದ್ದೇನೆ. ಇದೇ ಕಾರಣಕ್ಕೆ ಈಗ ಶೀತವಾಗಿದೆ’ ಎಂದಿದ್ದಾರೆ.

ಪುತಿನ್​ ಕಳೆದ ವಾರವಷ್ಟೇ 69ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರ ಕಚೇರಿಯ ಸುಮಾರು 12ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 1 ತಿಂಗಳು ಸೆಲ್ಫ್​ ಐಸೋಲೇಶನ್​​ಗೆ ಒಳಗಾಗಿದ್ದರು. ಆಗಲೂ ಕಾಡು-ಮೇಡು ಸುತ್ತಿದ್ದರು. ಸಣ್ಣ ಹೊಳೆಯಲ್ಲಿ ಮೀನು ಹಿಡಿದಿದ್ದರು. ಅಲ್ಲಿಂದ ಬಂದ ಬಳಿಕವೂ ಕೂಡ ಯಾರೊಂದಿಗೂ ಮುಖಾ-ಮುಖಿ ಸಭೆ ನಡೆಸಿಲ್ಲ. ಎಲ್ಲ ಸಭೆಗಳನ್ನೂ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ನಡೆಸಿದ್ದಾರೆ.

ಇದನ್ನೂ ಓದಿ:ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕಾಗಿ ಆನ್​​ಲೈನ್ ಬುಕಿಂಗ್ ಆರಂಭ

ಉಪ್ಪಿನಂಗಡಿ ಬಳಿ ಭೀಕರ ಅಪಘಾತ; ಸರ್ಕಾರಿ ಬಸ್ ಹರಿದು ತಾಯಿ, ಮಗು ಸ್ಥಳದಲ್ಲೇ ಸಾವು

Published On - 12:58 pm, Tue, 12 October 21