
ನವದೆಹಲಿ, ಅಕ್ಟೋಬರ್ 22: ಅರಬ್ ದೇಶಗಳಲ್ಲಿ ಕೆಲಸಕ್ಕೆ ಹೋಗಿ ಅಲ್ಲಿಂದ ಹೊರಬರಲಾಗದೆ ಜೀತದಾಳುಗಳಾಗಿ ಸಿಲುಕಿರುವ ಕೋಟ್ಯಂತರ ಭಾರತೀಯರಿಗೆ ನಿರಾಳ ತರುವ ಸುದ್ದಿ ಇದೆ. ಸೌದಿ ಅರೇಬಿಯಾ ದೇಶದಲ್ಲಿ ಕಾರ್ಮಿಕರ ಪಾಲಿಗೆ ಅತ್ಯಂತ ಕರಾಳ ವ್ಯವಸ್ಥೆಯಾದ ‘ಕಫಾಲ’ (Kafala system) ಅನ್ನು ನಿಲ್ಲಿಸಲಾಗಿದೆ. 50 ವರ್ಷಗಳಿಂದ ಕಾರ್ಮಿಕರಿಗೆ ಬಂಧನದ ಸಂಕೋಲೆಯಂತೆ ಕಾಡುತ್ತಿದ್ದ ಕಫಾಲ ವ್ಯವಸ್ಥೆ ಕೊನೆಗೊಂಡಿದೆ. ಇದರೊಂದಿಗೆ ಸೌದಿಯಲ್ಲಿರುವ 1.34 ಕೋಟಿ ವಲಸೆ ಕಾರ್ಮಿಕರ ಬದುಕಿಗೆ ಹೊಸ ಬೆಳಕು ಬರಲು ಸಾಧ್ಯವಾಗಲಿದೆ.
2025ರ ಜೂನ್ನಲ್ಲಿ ಕಫಾಲ ಸಿಸ್ಟಂ ಬಂದ್ ಮಾಡುವ ನಿರ್ಧಾರ ಮೊದಲು ಮಾಡಲಾಯಿತು. ಇದೀಗ ಅಧಿಕೃತವಾಗಿ ಇದಕ್ಕೆ ತೆರೆ ಎಳೆಯಲಾಗಿದೆ. ಸೌದಿ ಅರೇಬಿಯಾದಲ್ಲಿ ಬಹಳಷ್ಟು ಭಾರತೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬಾಂಗ್ಲಾ, ಪಾಕಿಸ್ತಾನ, ನೇಪಾಳ ಇತ್ಯಾದಿ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಪ್ರದೇಶಗಳಿಂದ ಕಾರ್ಮಿಕರು ಅರಬ್ ರಾಷ್ಟ್ರಗಳಲ್ಲಿದ್ದಾರೆ.
ಸೌದಿ ಅರೇಬಿಯಾದಲ್ಲಿ ಕಫಾಲ ಲೇಬರ್ ಸಿಸ್ಟಂ ಅನ್ನು ಐವತ್ತರ ದಶಕದಲ್ಲಿ ಜಾರಿಗೆ ತರಲಾಯಿತು. ಕಫಾಲ ಎಂದರೆ ಪ್ರಾಯೋಜಕತ್ವ ಎಂದರ್ಥ. ಲೇಬರ್ ಸಿಸ್ಟಂನಲ್ಲಿ ಕಫಾಲ ಎಂದರೆ ಕಾರ್ಮಿಕರ ಪ್ರಾಯೋಜಕತ್ವ ಮಾಡುವುದು. ಕಾರ್ಮಿಕರನ್ನು ಪ್ರಾಯೋಜಿಸುವವರೇ ಅವರ ಮಾಲೀಕರಾಗಿರುತ್ತಾರೆ. ಹೊರದೇಶಗಳಿಂದ ಬರುವ ಕಾರ್ಮಿಕರು ಈ ದೇಶದಲ್ಲಿ ವಾಸ ಇರುವವರೆಗೂ ಒಬ್ಬರೇ ಮಾಲೀಕರಿಗೆ ನಿಷ್ಠವಾಗಿರಬೇಕು.
ಇದನ್ನೂ ಓದಿ: ಕೆನಡಾದಲ್ಲಿ ರೋಹಿತ್ ಗೋದಾರ ಗ್ಯಾಂಗ್ನಿಂದ ಪಂಜಾಬಿ ಗಾಯಕ ತೇಜಿ ಕಹ್ಲೋನ್ ಮೇಲೆ ಗುಂಡಿನ ದಾಳಿ
ಹೊರದೇಶಗಳಿಂದ ಸೌದಿಗೆ ಕೆಲಸ ಮಾಡಲು ಹೋಗಬೇಕೆಂದರೆ ಸ್ಥಳೀಯ ಪ್ರಾಯೋಜಕರು ಬೇಕು. ಈ ಪ್ರಾಯೋಜಕರೇ ಕಾರ್ಮಿಕರ ವೀಸಾ ಮತ್ತಿತರ ವ್ಯವಸ್ಥೆ ಮಾಡುತ್ತಾರೆ. ಎಲ್ಲಾ ನಿಯಂತ್ರಣವೂ ಈ ಪ್ರಾಯೋಜಕರು ಅಥವಾ ಮಾಲೀಕರ ಕೈಯಲ್ಲೇ ಇರುತ್ತದೆ. ಕಾರ್ಮಿಕರು ಸೌದಿಗೆ ಕಾಲಿಡುತ್ತಲೇ ಮಾಲೀಕರು ಅವರ ವೀಸಾ, ಪಾಸ್ಪೋರ್ಟ್ ಇತ್ಯಾದಿಯನ್ನು ಕಿತ್ತು ಇಟ್ಟುಕೊಳ್ಳುತ್ತಾರೆ.
ಹೀಗಾಗಿ, ಕಾರ್ಮಿಕರು ಆ ಮಾಲೀಕರನ್ನು ಬಿಟ್ಟು ಬೇರೆಲ್ಲೂ ಹೋಗಲಾಗದು. ಕೆಲಸ ಬದಲಿಸಲೂ ಆಗದು. ದೇಶ ಬಿಟ್ಟು ಹೋಗಲೂ ಸಾಧ್ಯವಾಗದು. ಒಂದು ರೀತಿಯಲ್ಲಿ ಆಧುನಿಕ ಗುಲಾಮಗಿರಿ ಅಥವಾ ಜೀತದ ವ್ಯವಸ್ಥೆಗೆ ಕಾರ್ಮಿಕರು ಬಂಧಿಯಾದಂತಾಗುತ್ತದೆ.
ಇತ್ತೀಚೆಗೆ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದ ‘ಆಡುಜೀವಿತಂ’ ಸಿನಿಮಾದಲ್ಲಿ ಈ ವ್ಯವಸ್ಥೆಯ ಕರಾಳತೆಯನ್ನು ಕಟ್ಟಿಕೊಡಲಾಗಿದೆ. ಸೌದಿ ಮಾತ್ರವಲ್ಲ, ಕಫಾಲ ಸಿಸ್ಟಂ ಅರಬ್ ನಾಡಿನ ಹಲವು ದೇಶಗಳಲ್ಲಿ ಜಾರಿಯಲ್ಲಿದೆ.
ಇದನ್ನೂ ಓದಿ: ಭಾರತದ ಮೇಲೆ ಅಮೆರಿಕದ ಸುಂಕ ಶೇ. 50ರಿಂದ ಶೇ. 15ಕ್ಕೆ ಇಳಿಕೆ? ಸದ್ಯದಲ್ಲೇ ಒಪ್ಪಂದ ಅಂತಿಮ
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ