ಭಾರತದ ಮೇಲೆ ಅಮೆರಿಕದ ಸುಂಕ ಶೇ. 50ರಿಂದ ಶೇ. 15ಕ್ಕೆ ಇಳಿಕೆ? ಸದ್ಯದಲ್ಲೇ ಒಪ್ಪಂದ ಅಂತಿಮ
US may slash tariffs on India from 50pc to 15pc: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಸದ್ಯದಲ್ಲೇ ಅಂತಿಮಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಒಪ್ಪಂದ ಏರ್ಪಟ್ಟರೆ ಭಾರತದ ಮೇಲಿನ ಸುಂಕವನ್ನು ಈಗಿರುವ ಶೇ. 50ರಿಂದ ಶೇ. 15-16ಕ್ಕೆ ಇಳಿಸಬಹುದು ಎನ್ನಲಾಗುತ್ತಿದೆ. ತಾನು ಭಾರತದ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಟ್ರೇಡ್ ವಿಚಾರ ಮಾತನಾಡಿದ್ದಾಗಿ ಟ್ರಂಪ್ ಹೇಳಿದ್ದಾರೆ.

ನವದೆಹಲಿ, ಅಕ್ಟೋಬರ್ 22: ಭಾರತ ಮತ್ತು ಅಮೆರಿಕದ ನಡುವೆ ಬಹಳ ದಿನಗಳಿಂದ ಇತ್ಯರ್ಥವಾಗದೇ ಉಳಿದಿರುವ ವ್ಯಾಪಾರ ಒಪ್ಪಂದ (India US trade deal) ಸದ್ಯದಲ್ಲೇ ಅಂತಿಮಗೊಳ್ಳಬಹುದು ಎನ್ನುವಂತಹ ಸುದ್ದಿ ಕೇಳಿಬಂದಿದೆ. ಕೃಷಿ ಮತ್ತು ಇಂಧನ ವಿಚಾರದಲ್ಲಿ ಭಾರತ ಒಂದಷ್ಟು ರಿಯಾಯಿತಿ ತೋರಬಹುದು ಎಂದು ಹೇಳಲಾಗುತ್ತಿದೆ. ಈ ಎರಡು ಸಂಗತಿಗಳು ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದ ಏರ್ಪಡಲು ಪ್ರಮುಖ ತೊಡಕಾಗಿವೆ. ಭಾರತವು ಈ ವಿಚಾರದಲ್ಲಿ ತುಸು ಬಗ್ಗುವ ನಿರೀಕ್ಷೆ ಇದೆ.
ತಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಂಗಳವಾರ (ಅ. 21) ಮಾತನಾಡಿದ್ದೇನೆ. ವ್ಯಾಪಾರದ ವಿಚಾರವನ್ನು ಪ್ರಧಾನವಾಗಿ ಪ್ರಸ್ತಾಪಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಆರು ಲಕ್ಷ ಕೋಟಿ ರೂ..! ಈ ಬಾರಿಯ ದೀಪಾವಳಿ ಸೇಲ್ಸ್ ಹೊಸ ದಾಖಲೆ
ಚರ್ಚೆಯಲ್ಲಿ ಇಂಧನದ ವಿಚಾರವೂ ಬಂದಿತು. ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡುವುದಾಗಿ ಪಿಎಂ ಮೋದಿ ತನಗೆ ಭರವಸೆ ಕೊಟ್ಟಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.
ಇದೇ ವೇಳೆ, ಪ್ರಧಾನಿ ಮೋದಿ ಅವರೂ ಕೂಡ ಡೊನಾಲ್ಡ್ ಟ್ರಂಪ್ ಜೊತೆ ಮಾತನಾಡಿರುವ ಸಂಗತಿಯನ್ನು ಖಚಿತಪಡಿಸಿದ್ದಾರೆ. ಆದರೆ, ಟ್ರಂಪ್ ಜೊತೆ ಯಾವ ವಿಚಾರ ಚರ್ಚಿಸಲಾಯಿತು ಎನ್ನುವ ಸಂಗತಿಯನ್ನು ಮೋದಿ ತಿಳಿಸಿಲ್ಲ.
‘ನಿಮ್ಮ ಫೋನ್ ಕಾಲ್ ಮತ್ತು ದೀಪಾವಳಿ ಶುಭಾಶಯಗಳಿಗೆ ಧನ್ಯವಾದ ಪ್ರೆಸಿಡೆಂಟ್ ಟ್ರಂಪ್’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಿಂದ 7nm ಚಿಪ್ ಯೋಜನೆ; ಇದಾಗಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?
ಭಾರತದೊಂದಿಗೆ ವ್ಯಾಪಾರ ಒಪ್ಪಂದ ಆದರೆ ಸುಂಕ ಕಡಿಮೆ ಆಗುತ್ತಾ?
ಅಮೆರಿಕ ಸದ್ಯ ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕಗಳನ್ನು ಹೇರುತ್ತಿದೆ. ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ದೇಶಗಳ ಮೇಲೆ ಅಮೆರಿಕ ಶೇ. 10ರಿಂದ 30ರ ಶ್ರೇಣಿಯಲ್ಲಿ ಸುಂಕ ಹಾಕುತ್ತದೆ. ಒಪ್ಪಂದವಾಗದ ದೇಶಗಳಿಗೆ ಹೆಚ್ಚಿನ ಟ್ಯಾರಿಫ್ ಹಾಕಲಾಗುತ್ತಿದೆ. ಭಾರತದೊಂದಿಗೆ ಒಪ್ಪಂದ ಕುದುರಿದಲ್ಲಿ ಶೇ. 15-16ರಷ್ಟು ಮಾತ್ರ ಸುಂಕ ಹಾಕುವ ಸಾಧ್ಯತೆ ಇದೆ ಎಂದು ಕೆಲ ವರದಿಗಳಲ್ಲಿ ನಿರೀಕ್ಷಿಸಲಾಗಿದೆ.
ಪಾಕಿಸ್ತಾನವು ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಆ ದೇಶದ ಮೇಲೆ ಅಮೆರಿಕ ಶೇ. 19ರ ಆಸುಪಾಸಿನಷ್ಟು ಟ್ಯಾರಿಫ್ ಹಾಕುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




