ಜಗತ್ತಿನಲ್ಲಿ ಎಲ್ಲವೂ ಸಾಧ್ಯವಿದೆ ಎನ್ನುವ ಮಾತಿದೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ ವಿಜ್ಞಾನಿಗಳು ಆಲೂಗಡ್ಡೆಯ ಮಾದರಿಯ ಗ್ರಹವನ್ನು ಕಂಡುಹಿಡಿದಿದ್ದಾರೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ WASP-103b ಎಂಬ ಗ್ರಹವನ್ನು ಗುರುತಿಸಿದ್ದು, ಅದು ಸ್ವಲ್ಪಮಟ್ಟಿಗೆ ರಗ್ಬಿಯ ಮಾದರಿಯಲ್ಲಿದೆ ಎಂದಿದೆ. ಜತೆಗೆ ಇದು ಆಲೂಗಡ್ಡೆಯನ್ನೂ ಹೋಲುತ್ತದೆ ಎಂದಿದೆ. ಹರ್ಕ್ಯುಲಸ್ ನಕ್ಷತ್ರ ಪುಂಜದಲ್ಲಿರುವ ಈ ಗ್ರಹವು ಸೌರವ್ಯೂಹದಿಂದ 1,800 ಜ್ಯೋತಿರ್ವರ್ಷ ದೂರದಲ್ಲಿದೆ. ಸುದ್ದಿ ಸಂಸ್ಥೆ ಎಎಫ್ಪಿ ಈ ಕುರಿತು ವರದಿ ಮಾಡಿದ್ದು, WASP-103b ಗ್ರಹವು ಅದರ ಸೂರ್ಯ WASP-103 ನಿಂದ ಹತ್ತಿರದಲ್ಲಿದೆ. ಅಂದರೆ ಭೂಮಿಯು ಸೂರ್ಯನಿಗೆ ಸುತ್ತುಬರಲು 365 ದಿನಗಳು ಬೇಕಾದರೆ, ಸುಮಾರು 50 ಪಟ್ಟು ಹತ್ತಿರುವಿರುವ WASP-103b ಗ್ರಹವು ಕೇವಲ 22 ಗಂಟೆಗಳಲ್ಲಿ ತನ್ನ ಸೂರ್ಯನಿಗೆ ಒಂದು ಸುತ್ತು ಬರುತ್ತದೆ. ಅರ್ಥಾತ್ WASP-103b ಗ್ರಹದಲ್ಲಿ ಒಂದು ವರ್ಷವೆಂದರೆ 22 ಗಂಟೆಗಳು ಮಾತ್ರ!
2014ರಲ್ಲಿ WASP-103b ಗ್ರಹವನ್ನು ಮೊದಲ ಬಾರಿಗೆ ಗುರುತಿಸಲಾಗಿತ್ತು. ಸೌರವ್ಯೂಹದ ಹೊರಗಿನ ಗ್ರಹಗಳನ್ನು ಅಧ್ಯಯನ ಮಾಡುವ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಯೋಜನೆಯಲ್ಲಿ ಇದನ್ನು ಮತ್ತೆ ಗಮನಿಸಿ, ಅದರ ಆಕಾರವನ್ನು ಖಚಿತಪಡಿಸಲಾಗಿದೆ. ಸಂಶೋಧಕರ ಪ್ರಕಾರ, ಅತಿಥೇಯ ನಕ್ಷತ್ರದ ಸಾಮೀಪ್ಯದಿಂದ ಉಂಟಾದ ಗ್ರಹದ ಬಲವಾದ ಉಬ್ಬರವಿಳಿತದ ಶಕ್ತಿಯ ಕಾರಣ, ಎಲ್ಲಾ ಗ್ರಹಗಳಿರುವ ಗೋಳಾಕಾರಕ್ಕಿಂತ ಇದು ಭಿನ್ನವಾಗಿರಲು ಕಾರಣವಾಗಿದೆ ಎಂದಿದ್ದಾರೆ.
ಸಂಶೋಧನೆಯ ಸಹ ಲೇಖಕರಾದ ಪ್ಯಾರಿಸ್ ಅಬ್ಸರ್ವೇಟರಿಯ ಜಾಕ್ವೆಸ್ ಲಸ್ಕರ್ ಪ್ರಕಾರ, ಗ್ರಹದ ಆಕಾರ ಅಚ್ಚರಿದಾಯಕವಾಗಿದೆ. ಮೊದಲ ಬಾರಿಗೆ ಇಂತಹ ಆಕಾರ ಗಮನಿಸಿದ್ದೇವೆ. ಈ ಗ್ರಹವನ್ನು ದೀರ್ಘಾವಧಿಯವರೆಗೆ ಗಮನಿಸುತ್ತೇವೆ ಎಂದಿದ್ದಾರೆ. WASP-103b ಅದರ ಸೂರ್ಯನ ಸಾಮೀಪ್ಯದಿಂದಾಗಿ ಬಹಳ ಬಿಸಿಯಾದ ವಾತಾವರಣ ಹೊಂದಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅಲ್ಲದೇ ಈ ಗ್ರಹವು ಗುರು ಗ್ರಹಕ್ಕಿಂತ ಒಂದೂವರೆ ಪಟ್ಟು ದೊಡ್ಡದಾಗಿರಬಹುದು ಎಂದು ಭಾವಿಸಲಾಗಿದೆ.
1/ Not all planets are spheres!
Meet WASP-103b, a rugby ball-shaped #exoplanet ?
The deformation – caused by strong tidal forces between the planet and its host star – was spotted by #Cheops ?https://t.co/2gJ7JB70JT pic.twitter.com/23cXlaMtyv
— ESA CHEOPS – Characterising Exoplanet Satellite (@ESA_CHEOPS) January 11, 2022
ಇದೀಗ ನಾಸಾ ಕಳುಹಿಸಿರುವ ಜೇಮ್ಸ್ ವೆಬ್ ಸ್ಪೇಸ್ ದೂರದರ್ಶಕವು ಈ ಗ್ರಹದ ಮೇಲೆ ಹೆಚ್ಚಿನ ಬೆಳಕು ಚೆಲ್ಲಲು ಸಹಾಯಕವಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಲೇಖನವು ‘ಆಸ್ಟ್ರೋನಮಿ ಮತ್ತು ಆಸ್ಟ್ರೋಫಿಸಿಕ್ಸ್’ನಲ್ಲಿ ಪ್ರಕಟವಾಗಿದೆ.
ಇದನ್ನೂ ಓದಿ:
NASA: ವಿಶ್ವದ ರಹಸ್ಯ ಅರಿಯುವ ಪ್ರಯತ್ನದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟ ನಾಸಾ; ಇಲ್ಲಿದೆ ಕುತೂಹಲಕಾರಿ ಮಾಹಿತಿ