ಭೂಮಿಯ ಮೇಲೆ ನಡೆದಾಡುವ ವಿಶ್ವದ ಅತ್ಯಂತ ಹಿರಿಯ ಜೀವಂತ ಪ್ರಾಣಿ ಯಾವುದು? ಈ ಪ್ರಶ್ನೆಗೆ ಉತ್ತರ ಜೋನಾಥನ್! ಇದೀಗ 190ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿರುವ ಜೋನಾಥನ್ಗೆ (Jonathan) ಉಡುಗೊರೆಯಾಗಿ ಗಿನ್ನೆಸ್ ದಾಖಲೆಯ ಕಿರೀಟ್ ಮುಡಿಗೇರಿದೆ. ಬ್ರಿಟಿಷ್ ಸಾಗರೋತ್ತರ ಪ್ರದೇಶದ ಸೇಂಟ್ ಹೆಲೆನಾ ದ್ವೀಪದಲ್ಲಿ ನೆಲೆಸಿರುವ ಜೋನಾಥನ್ ಆಮೆಗಳಲ್ಲಿ ಅತ್ಯಂತ ಹಿರಿಯ ಆಮೆ (Tortoise) ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ. ಅಷ್ಟೇ ಅಲ್ಲ, ಭೂಮಿಯ ಮೇಲೆ ನಡೆದಾಡುವ ಹಿರಿಯ ಪ್ರಾಣಿ ಎಂಬ ಹಿರಿಮೆಯೂ ಅವನಿಗೆ ದಕ್ಕಿದೆ. ಗಿನ್ನೆಸ್ ದಾಖಲೆಯ (Guinness World Records) ವೆಬ್ಸೈಟ್ ಪ್ರಕಾರ ಜೋನಾಥನ್ ಜನಿಸಿದ್ದು 1832ರಲ್ಲಿ. ಹೀಗಾಗಿ 2022ರಲ್ಲಿ ಅವನಿಗೆ 190 ವರ್ಷ ಭರ್ತಿಯಾಗಿದೆ. ಇಷ್ಟಾಗಿಯೂ ಜೋನಾಥನ್ ವಯಸ್ಸು ಅಂದಾಜಿನದ್ದು ಎಂದಿದೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್. ಕಾರಣ, ಸೇಶಲ್ಸ್ನಿಂದ ಸೇಂಟ್ ಹೆಲೆನಾಗೆ ಜೋನಾಥನ್ ಆಗಮಿಸಿದ್ದು 1882ರಲ್ಲಿ. ಆಗ ಆತ ಸಂಪೂರ್ಣ ಪ್ರಬುದ್ಧನಾಗಿದ್ದ. ಅರ್ಥಾತ್ ಆಮೆಗಳ ವಯಸ್ಸಿನ ಆಧಾರದಲ್ಲಿ ಕನಿಷ್ಠ 50 ವರ್ಷದವನಾಗಿದ್ದ. ಈ ಹಿನ್ನೆಲೆಯಲ್ಲಿ ಜೋನಾಥನ್ ಹುಟ್ಟಿದ್ದು ಅಂದಾಜು 1832ರಲ್ಲಿ ಎನ್ನುವುದು ತಜ್ಞರ ಅಭಿಮತ. ಇದಕ್ಕೆ ಒಂದು ಫೋಟೋ ಸಾಕ್ಷಿಯೂ ಇದೆ.
ಸೇಂಟ್ ಹೆಲೆನಾದ ಪ್ಲಾಂಟೇಶನ್ ಹೌಸ್ ಮೈದಾನದಲ್ಲಿ 1882-86ರ ಅವಧಿಯಲ್ಲಿ ತೆಗೆಯಲಾದ ಜೋನಾಥನ್ ಚಿತ್ರ ಇದು. ಈ ಚಿತ್ರದಲ್ಲಿ ಎಡಭಾಗದಲ್ಲಿರುವುದು ಜೋನಾಥನ್. ಇದರಲ್ಲಿ ಕಾಣುವ ಆತನ ಬೆಳವಣಿಗೆಯನ್ನು ಆಧರಿಸಿ ಆತನ ವಯಸ್ಸನ್ನು ಅಂದಾಜಿಸಲಾಗಿದೆ ಎಂದು ಗಿನ್ನೆಸ್ ರೆಕಾರ್ಡ್ಸ್ನ ದಾಖಲೆಗಳು ತಿಳಿಸುತ್ತವೆ.
ಈ ಹಿಂದಿನ ಅತ್ಯಂತ ಹಳೆಯ ಅತ್ಯಂತ ಹಿರಿಯ ಚೆಲೋನಿಯನ್ ‘ತುಯಿ ಮಲಿಲಾ’ ಆಗಿತ್ತು. 188 ವರ್ಷ ವಯಸ್ಸಾಗಿದ್ದ ಅದು 1965ರವರೆಗೆ ಟೋಂಗಾದ ರಾಜಮನೆತನದ ಆರೈಕೆಯಲ್ಲಿತ್ತು. ಚೆಲೋನಿಯನ್ ಎಂದರೆ ವಿವಿಧ ಜಾತಿಯ ಆಮೆಗಳ ವರ್ಗ. ಅವುಗಳಲ್ಲೆವುಗಳನ್ನು ಪರಿಗಣಿಸಿದರೆ ಸದ್ಯ ಜೋನಾಥನ್ನೇ ಹಿರಿಯ.
190 ವರ್ಷದ ಹಿರಿಯಣ್ಣ ಜೋನಾಥನ್ ಈಗ ಹೇಗಿದ್ಧಾನೆ?
ಜೋನಾಥನ್ ಹೇಗಿದ್ದಾನೆ ಎಂದು ಅವನನ್ನು ನೋಡಿಕೊಳ್ಳುವ ಅಧಿಕಾರಿಗಳು ತಿಳಿಸಿದ್ದಾರೆ. ಅವನು ಚೆನ್ನಾಗಿ ತಿನ್ನುತ್ತಾನೆ. ಆದರೆ ನೆಲದ ಮೇಲಿದ್ದರೆ ಅವನಿಗೆ ಅಷ್ಟಾಗಿ ತಿಳಿಯುವುದಿಲ್ಲ ಕಾರಣ ಅವನಿಗೆ ಕಣ್ಣು ಕಾಣುವುದಿಲ್ಲ. ಜತೆಗೆ ವಾಸನೆ ಗ್ರಹಿಸುವ ಗುಣವೂ ಇಲ್ಲ. ಆದ್ದರಿಂದ ಬೇಕಾದ ಪೋಷಕಾಂಶಗಳನ್ನು ನೀಡುವ ದೃಷ್ಟಿಯಿಂದ ವಾರಕ್ಕೊಮ್ಮೆ ಕೈಯಿಂದ ಆಹಾರ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಜೋನಾಥನ್ಗೆ ಶ್ರವಣ ಶಕ್ತಿ ಚುರುಕಾಗಿದೆ. ಮನುಷ್ಯರ ಸಹವಾಸವನ್ನು ಇಷ್ಟಪಡುತ್ತಾನೆ. ಆತನನ್ನು ನೋಡಿಕೊಳ್ಳುವ ಪಶುವೈದ್ಯರಾದ ಜೋ ಹೊಲಿನ್ಸ್ ಅವರ ಮಾತುಕತೆಗಳಿಗೆ ಪ್ರತಿಕ್ರಿಯಿಸುತ್ತಾನೆ. ಬದುಕಿನ ಬಹುತೇಕ ದಿನಗಳನ್ನು ಅವನು ಕಳೆದಿರುವುದು ಸೇಂಟ್ ಹೆಲೆನಾದಲ್ಲಿಯೇ. ಅಲ್ಲಿ ಆತನಿಗೆ ಇನ್ನೂ ಮೂವರು ಸಹವರ್ತಿಗಳಿದ್ದಾರೆ. ಡೇವಿಡ್, ಎಮ್ಮಾ ಮತ್ತು ಫ್ರೆಡ್. ಅವರ ಒಡನಾಟ ಕೂಡ ಜೋನಾಥನ್ಗೆ ಬಹು ಇಷ್ಟವಂತೆ.
ಇಡೀ ಜಗತ್ತು ಕಳೆದ 190 ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ. ಆಗಿದ್ದಂತೆ ಈಗ ಏನೂ ಇಲ್ಲ. ಆದರೆ ಜೋನಾಥನ್ ಹಾಗೆಯೇ ಇದ್ದಾನೆ. ಅವನಿಗೆ ಇಷ್ಟವಾಗುವುದು ಮೂರೇ ವಿಷಯಗಳು- ಆಹಾರ, ನಿದ್ರೆ ಹಾಗೂ ಸ್ನೇಹಿತರ ಒಡನಾಟ. ಇಷ್ಟರಲ್ಲೇ ಆತ ಸಂತೃಪ್ತನಾಗಿದ್ದಾನೆ. ಆತನನ್ನು ನೋಡಿಕೊಳ್ಳುವ ಜೋ ಮಾತನಾಡುತ್ತಾ ಜೋನಾಥನ್ ಗುಣಗಳನ್ನು ವಿವರಿಸಿದ್ದಾರೆ. ಬಿಸಿಲು ಅವನಿಗೆ ಇಷ್ಟ. ಆದರೆ ಬಿಸಿಲು ಹೆಚ್ಚಾದರೆ ಮರೆಗೆ ಸರಿಯುತ್ತಾನೆ. ಚಳಿಗಾಲದಲ್ಲಿ ಬೆಚ್ಚಗಿನ ಜಾಗದಲ್ಲಿ ಇಡೀ ದಿನ ಕುಳಿತು ಕಳೆಯುತ್ತಾನೆ. ಅವನಿಗೆ ಲೆಕೋಸು, ಸೌತೆಕಾಯಿ, ಕ್ಯಾರೆಟ್, ಸೇಬು, ಬಾಳೆಹಣ್ಣು ಮತ್ತು ಇತರ ಹಣ್ಣುಗಳು ಇಷ್ಟ ಎಂದಿದ್ದಾರೆ.
ಜೋನಾಥನ್ ಮೇಲ್ವಿಚಾರಣೆ ಮಾಡುತ್ತಿರುವ ಪಶುವೈದ್ಯೆ ಜೋ ಹೊಲಿನ್ಸ್ ಮತ್ತೊಂದು ವಿಚಾರ ತೆರೆದಿಟ್ಟಿದ್ದಾರೆ. ‘ಜೋನಾಥನ್ಗೆ ದೃಷ್ಟಿ ಹಾಗೂ ವಾಸನೆ ಗ್ರಹಿಸುವುದು ಕುಂಠಿತವಾಗಿರಬಹುದು. ಆದರೆ ಆಗಾಗ ಗೆಳತಿ ಎಮ್ಮಾ ಹಾಗೂ ಸ್ನೇಹಿತ ಫ್ರೆಡ್ ಜತೆ ಸಂಯೋಗ ಹೊಂದುತ್ತಾನೆ. ಪ್ರಾಣಿಗಳು ಸಾಮಾನ್ಯವಾಗಿ ಲಿಂಗಸೂಕ್ಷ್ಮವಾಗಿರುವುದಿಲ್ಲ’ ಎಂದು ಜೋ ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ.
ಇದನ್ನೂ ಓದಿ:
Viral Video: ಮಲಗಿದ್ದ ಪುಟ್ಟ ಬಾಲಕಿಯನ್ನು ಏಳಿಸಲು ನಾಯಿ ಮಾಡಿದ ಚೇಷ್ಟೆಗಳನ್ನು ನೋಡಿ
ಕೆಲವು ಕೊವಿಡ್ ರೋಗಿಗಳಿಂದ 10 ದಿನಗಳ ನಂತರವೂ ಸೋಂಕು ಹರಡಬಹುದು: ಅಧ್ಯಯನ
Published On - 4:17 pm, Fri, 14 January 22