ಪತ್ನಿಯಿಂದ ಬೇರ್ಪಡಲಿರುವ ಮತ್ತೊಬ್ಬ ಕುಬೇರ, ಗೂಗಲ್ ಸಹ-ಸಂಸ್ಥಾಪಕ ಸೆರ್ಗೀ ಬ್ರಿನ್ ಪತ್ನಿಯಿಂದ ಡಿವೋರ್ಸ್ ಕೋರಿ ಅರ್ಜಿ

| Updated By: ರಶ್ಮಿ ಕಲ್ಲಕಟ್ಟ

Updated on: Jun 20, 2022 | 7:19 PM

ಬ್ರಿನ್ ಬಿಲಿಯನೇರ್ ಆದ ಬಹಳ ವರ್ಷಗಳ ನಂತರ ನಿಕೋಲ್ ಜೊತೆ ಸಂಬಂಧ ಶುರುವಾದ ಕಾರಣ ಅವರು ಮದುವೆಗೆ ಮೊದಲೇ ಪೂರ್ವಭಾವಿ ಒಪ್ಪಂದವನ್ನು ಮಾಡಿಕೊಂಡಿರುವರುವ ಸಾಧ್ಯತೆಯಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಸೈಡ್‌ಮ್ಯಾನ್ ಮತ್ತು ಬ್ಯಾಂಕ್‌ಕ್ರಾಫ್ಟ್ ಎಲ್‌ಎಲ್‌ಪಿ ಪಾಲುದಾರರಾದ ಮೋನಿಕಾ ಮಜ್ಜೆ ಹೇಳಿದ್ದಾರೆ.

ಪತ್ನಿಯಿಂದ ಬೇರ್ಪಡಲಿರುವ ಮತ್ತೊಬ್ಬ ಕುಬೇರ, ಗೂಗಲ್ ಸಹ-ಸಂಸ್ಥಾಪಕ ಸೆರ್ಗೀ ಬ್ರಿನ್ ಪತ್ನಿಯಿಂದ ಡಿವೋರ್ಸ್ ಕೋರಿ ಅರ್ಜಿ
ತಮ್ಮ ಸಂತೋಷದ ದಿನಗಳಲ್ಲಿ ನಿಕೋಲ್ ಶನಹಾನ್ ಮತ್ತು ಸೆರ್ಗೀ ಬ್ರಿನ್
Follow us on

ವಿಶ್ವದ ಟಾಪ್ ಹತ್ತು ಶ್ರೀಮಂತರಲ್ಲಿ ಒಬ್ಬರಾಗಿರುವ ಗೂಗಲ್ (Google) ಸಂಸ್ಥೆಯ ಸೆರ್ಗೀ ಬ್ರಿನ್ (Sergey Brin) ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಪತ್ನಿಯಿಂದ ಡಿವೋರ್ಸ್ (divorce) ಕೋರಿ ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಪತ್ನಿಯಿಂದ ವಿಚ್ಛೇದನ ಪಡೆಯುತ್ತಿರುವ ಮೂರನೇ ಕುಬೇರ ಇವರಾಗಿದ್ದಾರೆ. ಪತ್ನಿ ನೀಕೋಲ್ ಶನಾಹಾನ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣವನ್ನು ತಮ್ಮ ಮನವಿಯಲ್ಲಿ ಬ್ರಿನ್ ಹೇಳಿದ್ದಾರೆ. ದಂಪತಿಗೆ ಮೂರು ವರ್ಷ ವಯಸ್ಸಿನ ಮಗನಿದ್ದು, ತಮ್ಮ ವಿಚ್ಚೇದನ ವಿವರಗಳನ್ನು ರಹಸ್ಯವಾಗಿಡುವಂತೆ ಮನವಿ ಮಾಡಿದ್ದು, ನ್ಯಾಯಾಲಯ ತನ್ನ ಆದೇಶವನ್ನು ಮುಚ್ಚಿದ ಲಕೋಟೆಯಲ್ಲಿ ನೀಡಬೇಕೆಂದು ಅವರಿಬ್ಬರೂ ವಿನಂತಿಸಿಕೊಂಡಿದ್ದಾರೆ.

‘ಇದೊಂದು ಹೈ ಪ್ರೊಫೈಲ್ ಪ್ರಕರಣವಾಗಿರುವುದರಿಂದ ವಿಚ್ಛೇದನದ ವಿವರಗಳು ಸಾರ್ವಜನಿಕರಲ್ಲಿ ತೀವ್ರ ಸ್ವರೂಪದ ಕುತೂಹಲ ಸೃಷ್ಟಿಸುವ ಸಾಧ್ಯತೆಯಿದೆ. ಮಗುವಿನ ಕಸ್ಟಡಿ ಯಾರಿಗೆ ಸಿಗಲಿದೆ ಅನ್ನೋದು ಬಹಳ ಮಹತ್ವದ ವಿಷಯವಾಗಿದೆ,’ ಎಂದು ಕ್ಯಾಲಿಫೋರ್ನಿಯಾ ಸಂತಾ ಕ್ಲಾರಾ ಕೋರ್ಟಿನಲ್ಲಿ ದಾಖಲಾಗಿರುವ ಮನವಿಯಲ್ಲಿ ತಿಳಿಸಲಾಗಿದೆ.

ಬ್ಲೂಮ್ಬರ್ಗ್ ಬಿಲಿಯನ್ನೇರ್ಸ್ ಇಂಡೆಕ್ಸ್ ಪ್ರಕಾರ 48-ವರ್ಷ-ವಯಸ್ಸಿನ ಬ್ರಿನ್ 94 ಬಿಲಿಯನ್ ಡಾಲರ್ ಆಸ್ತಿಯ ಒಡೆಯನಾಗಿದ್ದಾರೆ. ಇವರ ಆದಾಯದ ಸಿಂಹಪಾಲು 1998ರಲ್ಲಿ ಲ್ಯಾರಿ ಪೇಜ್ ಅವರೊಂದಿಗೆ ಆರಂಭಿಸಿದ ಗೂಗಲ್ ಸಂಸ್ಥೆಯ ಹೊಲ್ಡಿಂಗ್ಸ್ ಮೂಲಕ ಬರುತ್ತದೆ. ಇದೇ ಕಂಪನಿಯು ನಂತರದ ದಿನಗಳಲ್ಲಿ ಅಲ್ಫಾಬೆಟ್ ಇನ್ಕಾರ್ಪೊರೇಟೆಡ್ ಸಂಸ್ಥೆಯನ್ನು ಹುಟ್ಟು ಹಾಕಿತ್ತು. ಆದರೆ 2019ರಲ್ಲಿ ಬ್ರಿನ್ ಮತ್ತು ಪೇಜ್ ಇಬ್ಬರೂ 2019 ರಲ್ಲಿ ಅಲ್ಫಾಬೆಟ್ ಕಂಪನಿಯಿಂದ ಹೊರಬಿದ್ದರಾದರೂ, ಬೋರ್ಡ್ ಸದಸ್ಯರಾಗಿ ಮುಂದುವರೆದಿದ್ದು ಶೇರ್ ಹೋಲ್ಡರ್ ಗಳ ಮೇಲೆ ನಿಯಂತ್ರಣ ಹೊಂದಿದ್ದಾರೆ.

ನಿಕೋಲ್ ಕ್ಕಿಂತ ಮೊದಲು 23ಅಂಡ್ಮೀ ಕಂಪನಿಯ ಸಹ ಸಂಸ್ಥಾಪಕಿ ಅನ್ನೆ ವೊಜಿಸ್ಕಿಯನ್ನು ಮದುವೆಯಾಗಿದ್ದ ಬ್ರಿನ್, 2015ರಲ್ಲಿ ಅವರಿಂದ ಬೇರೆಯಾಗಿದ್ದರು.ಮೈಕ್ರೋಸಾಫ್ಟ್ ಮಾಲೀಕ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ ಅವರ ದಾಂಪತ್ಯ ಸಂಬಂಧವನ್ನು ಕಡಿದುಕೊಂಡ ಸರಿಯಾಗಿ ಒಂದು ವರ್ಷದ ಬಳಿಕ ಬ್ರಿನ್ ಅವರು ನಿಕೋಲ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಅದಕ್ಕೆ ಮೂರು ವರ್ಷ ಮೊದಲು ಜೆಫ್ ಬಿಜೋಸ್ ತಮ್ಮ ಪತ್ನಿಯಾಗಿದ್ದ ಮೆಕಂಜಿ ಸ್ಕಾಟ್ ಅವರಿಂದ ಬೇರ್ಪಟ್ಟಿದ್ದರು. ವಿಚ್ಛೇದನ ಹೊಂದುವ ಸಮಯದಲ್ಲಿ ಗೇಟ್ಸ್ ಮತ್ತು ಫ್ರೆಂಚ್ 145 ಬಿಲಿಯನ್ ಡಾಲರ್ ಆಸ್ತಿಯನ್ನು ಹಂಚಿಕೊಂಡಿದ್ದರು. ಹಾಗೆಯೇ ಬಿಜೋಸ್ ಅವರು ತಮ್ಮ ವಿಚ್ಛೇದಿತ ಪತ್ನಿಗೆ 137 ಬಿಲಿಯನ್ ಡಾಲರ್ ಗಳಲ್ಲಿ ಅರ್ಧದಷ್ಟನ್ನು ಕೊಡಬೇಕಾಗಿ ಬಂದಿತ್ತು.

ಬ್ರಿನ್ ಬಿಲಿಯನೇರ್ ಆದ ಬಹಳ ವರ್ಷಗಳ ನಂತರ ನಿಕೋಲ್ ಜೊತೆ ಸಂಬಂಧ ಶುರುವಾದ ಕಾರಣ ಅವರು ಮದುವೆಗೆ ಮೊದಲೇ ಪೂರ್ವಭಾವಿ ಒಪ್ಪಂದವನ್ನು ಮಾಡಿಕೊಂಡಿರುವರುವ ಸಾಧ್ಯತೆಯಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಸೈಡ್‌ಮ್ಯಾನ್ ಮತ್ತು ಬ್ಯಾಂಕ್‌ಕ್ರಾಫ್ಟ್ ಎಲ್‌ಎಲ್‌ಪಿ ಪಾಲುದಾರರಾದ ಮೋನಿಕಾ ಮಜ್ಜೆ ಹೇಳಿದ್ದಾರೆ. ಆದರೆ ಪ್ರಕರಣವನ್ನು ಖಾಸಗಿ ನ್ಯಾಯಾಧೀಶರು ನಿರ್ವಹಿಸುತ್ತಿರುವುದರಿಂದ, ವಿಚ್ಛೇದನದ ವಿವರಗಳು ಯಾವತ್ತೂ ನಮಗೆ ಗೊತ್ತಾಗಲಾರವು ಎಂದು ಅವರು ಹೇಳಿದ್ದಾರೆ.

ವಿಚ್ಛೇದನ ಒಪ್ಪಂದದಲ್ಲಿ ಲೋಕಕಲ್ಯಾಣ (ದತ್ತಿ) ಅಂಶವೂ ಒಂದು ಪಾತ್ರವನ್ನು ವಹಿಸುತ್ತದೆ ಎಂದು ಮಜ್ಜೆ ಹೇಳಿದರು. ನಿಕೋಲ್, ಬಿಯಾ-ಎಕೋ ಫೌಂಡೇಶನ್ ಅನ್ನು ಸ್ಥಾಪಿಸಿದ್ದು, ಅದರ ವೆಬ್‌ಸೈಟ್ ಪ್ರಕಾರ ಸಂಸ್ಥೆ ಸ್ಥಾಪನೆ ಹಿಂದಿನ ಉದ್ದೇಶ ‘ದೀರ್ಘಾಯುಷ್ಯ ಮತ್ತು ಸಮಾನತೆ, ಕ್ರಿಮಿನಲ್ ನ್ಯಾಯ ಸುಧಾರಣೆ ಮತ್ತು ಮಾನವರು ಜೀವಿಸುತ್ತಿರುವ ಗ್ರಹವನ್ನು ಆರೋಗ್ಯಕರ ಮತ್ತು ವಾಸಯೋಗ್ಯ ಮಾಡುವುದು’ ಆಗಿದೆ.

ಪ್ರತಿಷ್ಠಾನವು 16.7 ಮಿಲಿಯನ್ ಡಾಲರ್ ಆಸ್ತಿಯನ್ನು ಬಹಿರಂಹಪಡಿಸಿದೆ ಮತ್ತು ಅದರ 2019 ರ ತೆರಿಗೆ ಫೈಲಿಂಗ್ ಮತ್ತು ಇತ್ತೀಚಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ 7.4 ಮಿಲಿಯನ್ ಡಾಲರ್ ಗಳಷ್ಟು ದೇಣಿಗೆಯನ್ನು ನೀಡಿದೆ.

ವಿಚ್ಛೇದನ ಒಪ್ಪಂದಗಳು ಸಾಮಾನ್ಯವಾಗಿ ಮಾಜಿ ಸಂಗಾತಿಯ ಲೋಕಕಲ್ಯಾಣ ಆಯಾಮಗಳಿಗೆ ಬೆಂಬಲಿಸುವುದನ್ನು ಒಳಗೊಂಡಿರುತ್ತವೆ. ಯಾಕೆಂದರೆ ಅದು ಇಬ್ಬರಿಗೂ ಪ್ರಯೋಜನಕಾರಿಯಾಗಿರುತ್ತದೆ ಎಂದು ಮಜ್ಜೆ ಹೇಳುತ್ತಾರೆ. ದೇಣಿಗೆ ನೀಡುವವನು ತೆರಿಗೆ ವಿನಾಯಿತಿಯನ್ನು ಪಡೆಯುತ್ತಾರೆ ಮತ್ತು ದೇಣಿಗೆ ಪಡೆಯುವವ ಅವುಗಳ ಮೂಲಕ ಏಜೆನ್ಸಿಯನ್ನು ಪಡೆಯುತ್ತಾನೆ. ಬ್ರಿನ್ ಪ್ರತಿಷ್ಠಾನಕ್ಕೆ ಏಕೈಕ ಕೊಡುಗೆದಾರರಾಗಿದ್ದರು. ತೆರಿಗೆ ವಿವರಗಳ ಪ್ರಕಾರ, ಅವರು ಪ್ರತಿವರ್ಷ 23 ಮಿಲಿಯನ್‌ ಡಾಲರ್ ಕ್ಕಿಂತ ಹೆಚ್ಚಿನ ದೇಣಿಗೆಯನ್ನು ನೀಡಿದ್ದಾರೆ.

ಬಿಜೋಸ್ ಅವರಿಂದ ಬೇರ್ಪಟ್ಟ ನಂತರ ಸ್ಕಾಟ್ ದೇಣಿಗೆ ರೂಪದಲ್ಲಿ ಅತಿಹೆಚ್ಚು ಹಣ ನೀಡುವ ಮಹಿಳೆ ಎನಿಸಿಕೊಂಡಿದ್ದಾರೆ. ಅಮೇಜಾನ್ ನಲ್ಲಿ ಶೇಕಡ 4 ರಷ್ಟು ಪಾಲುದಾರಿಕೆ ಹೊಂದಿರುವ ಅವರು ಹಲವಾರು ದತ್ತಿಗಳಿಗೆ ಪ್ರತಿವರ್ಷ ಸಾವಿರಾರು ಡಾಲರ್ ಗಳನ್ನು ನೀಡುತ್ತಾರೆ.

ಬಿಲ್ ಮತ್ತು ಮೆಲಿಂಡಾ ಸಹ ಡಿವೋರ್ಸ್ ನಂತರವೂ ತಾವೇ ಹುಟ್ಟು ಹಾಕಿದ್ದ ಬಿಲ್ ಮತ್ತು ಮೆಲಿಂಡಾ ಪ್ರತಿಷ್ಠಾನಕ್ಕೆ ಲಕ್ಷಾಂತರ ಡಾಲರ್​​ಗಳ ದೇಣಿಗೆ ನೀಡುತ್ತಿದ್ದಾರೆ. ಅವರ ವಿಚ್ಛೇದನದ ನಂತರ 50 ಬಿಲಿಯನ್ ಡಾಲರ್ ದತ್ತಿಯ ಸ್ಥಿತಿ ಏನಾಗಲಿದೆಯೋ ಎಂಬ ಪ್ರಶ್ನೆ ಎದ್ದಿತ್ತು.

ಫ್ರೆಂಚ್ ಗೇಟ್ಸ್ ಅವರು ಡಿವೋರ್ಸ್ ಬಳಿಕ 2015 ರಲ್ಲಿ ತಾವೇ ಸ್ಥಾಪಿಸಿದ್ದ ಪಿವೋಟಲ್ ವೆಂಚರ್ಸ್ ಹೆಸರಿನ ದತ್ತಿಯ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದಾರೆ. ಈ ದತ್ತಿಯ ದ್ಯೇಯ ‘ಅಮೇರಿಕಾದ ಮಹಿಳೆಯರು ಮತ್ತು ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಗಳಿಗೆ ವಿನೂತನ ಪರಿಹಾರಗಳು’ ಆಗಿದೆ.

ವಿದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 12:00 am, Mon, 20 June 22