Shyamala Gopalan: ಅಮ್ಮನೇ ಎಲ್ಲದಕ್ಕೂ ಸ್ಫೂರ್ತಿ, ತಾಯಿ ಶ್ಯಾಮಲಾ ಗೋಪಾಲನ್ ನೆನಪಿಸಿಕೊಂಡ ಕಮಲಾ ಹ್ಯಾರಿಸ್

|

Updated on: Aug 23, 2024 | 12:55 PM

Kamala Harris: ಆಕೆ ದಿಟ್ಟೆ, ಧೈರ್ಯಶಾಲಿ, ಮಹಿಳಾ ಆರೋಗ್ಯದ ಹೋರಾಟದಲ್ಲಿ ಆಕೆ ಮೊದಲಿಗಳು. ಆಕೆ ಅನ್ಯಾಯದ ವಿರುದ್ಧ ದನಿ ಎತ್ತುವಂತೆ ನನಗೆ ಮತ್ತು ಮಾಯಾ (ಕಮಲಾ ಅವರ ಸಹೋದರಿ) ಕಲಿಸಿದರು. ಯಾವುದನ್ನೂ ಅರ್ಧಂಬರ್ಧ ಮಾಡಬಾರದು ಎಂದು ಅವರು ನಮಗೆ ಹೇಳಿಕೊಟ್ಟಿದ್ದರು. ನೀವು ಯಾರೆಂದು ಯಾರಿಗೂ ಹೇಳಲು ಬಿಡಬೇಡಿ. ನೀನು ಯಾರೆಂದು ಅವರಿಗೆ ತೋರಿಸಿಕೊಡಬೇಕು ಎಂದು ನಮ್ಮ ತಾಯಿ ನಮಗೆ ಹೇಳುತ್ತಿದ್ದರು ಎಂದ ಕಮಲಾ ಹ್ಯಾರಿಸ್.

Shyamala Gopalan: ಅಮ್ಮನೇ ಎಲ್ಲದಕ್ಕೂ ಸ್ಫೂರ್ತಿ, ತಾಯಿ ಶ್ಯಾಮಲಾ ಗೋಪಾಲನ್ ನೆನಪಿಸಿಕೊಂಡ ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್
Follow us on

ವಾಷಿಂಗ್ಟನ್ ಆಗಸ್ಟ್ 23: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಗುರುವಾರ ರಾತ್ರಿ ಷಿಕಾಗೋದಲ್ಲಿ ನಡೆದ ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್‌ನಲ್ಲಿ (Democratic National Convention )ತಮ್ಮ ಸ್ವೀಕಾರ ಭಾಷಣದಲ್ಲಿ ತಾಯಿ ಶ್ಯಾಮಲಾ ಗೋಪಾಲನ್ (Shyamala Gopalan) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನವೆಂಬರ್ ಚುನಾವಣೆಯಲ್ಲಿ ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್‌ಗೆ ಸವಾಲು ಹಾಕಲು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನವನ್ನು ಔಪಚಾರಿಕವಾಗಿ ಕಮಲಾ ಹ್ಯಾರಿಸ್ ಅಂಗೀಕರಿಸಿದ್ದಾರೆ. ಪಕ್ಷಕ್ಕಾಗಿ ಹಾಗೆ ಮಾಡಿದ ಎರಡನೇ ಮಹಿಳೆಯಾಗಿದ್ದಾರೆ ಇವರು.

ಕಮಲಾ ಹ್ಯಾರಿಸ್ ತನ್ನ ಭಾಷಣದಲ್ಲಿ, ನನ್ನ ತಾಯಿ 5-ಅಡಿ ಎತ್ತರದ ಕಂದು ಬಣ್ಣದ ಅದ್ಭುತ ಮಹಿಳೆ. ನಾನು ಹಿರಿಯ ಮಗುವಾಗಿದ್ದ ಕಾರಣ, ಜಗತ್ತು ಕೆಲವೊಮ್ಮೆ ಅವಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂದು ನಾನು ನೋಡಿದೆ. ಆದರೆ ನನ್ನ ತಾಯಿ ಎಂದಿಗೂ ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಅಂದಹಾಗೆ ಕಮಲಾ ಹ್ಯಾರಿಸ್ ತಮ್ಮ ತಾಯಿಯ ಮೂಲಕ ನಾನು ದಕ್ಷಿಣ ಏಷ್ಯಾದ ಪರಂಪರೆಯನ್ನು ನೋಡಿದ್ದೆ ಎಂದು ಆಗಾಗ್ಗೆ ಉಲ್ಲೇಖಿಸುತ್ತಿರುತ್ತಾರೆ. ಆಕೆಯ ಜತೆಗಿನ ಒಡನಾಟಗಳನ್ನು ನೆನಪಿಕೊಂಡು ಆಕೆ ತನ್ನ ಸ್ಫೂರ್ತಿ ಸೆಲೆ ಎಂದು ಹೇಳುತ್ತಿರುತ್ತಾರೆ.

“ಆಕೆ ದಿಟ್ಟೆ, ಧೈರ್ಯಶಾಲಿ, ಮಹಿಳಾ ಆರೋಗ್ಯದ ಹೋರಾಟದಲ್ಲಿ ಆಕೆ ಮೊದಲಿಗಳು. ಆಕೆ ಅನ್ಯಾಯದ ವಿರುದ್ಧ ದನಿ ಎತ್ತುವಂತೆ ನನಗೆ ಮತ್ತು ಮಾಯಾ (ಕಮಲಾ ಅವರ ಸಹೋದರಿ) ಕಲಿಸಿದರು. ಯಾವುದನ್ನೂ ಅರ್ಧಂಬರ್ಧ ಮಾಡಬಾರದು ಎಂದು ಅವರು ನಮಗೆ ಹೇಳಿಕೊಟ್ಟಿದ್ದರು.
ನೀವು ಯಾರೆಂದು ಯಾರಿಗೂ ಹೇಳಲು ಬಿಡಬೇಡಿ. ನೀನು ಯಾರೆಂದು ಅವರಿಗೆ ತೋರಿಸಿಕೊಡಬೇಕು ಎಂದು ನಮ್ಮ ತಾಯಿ ನಮಗೆ ಹೇಳುತ್ತಿದ್ದರು ಎಂದು ಕಮಲಾ ತಮ್ಮ ಅಮ್ಮನ ಬಗ್ಗೆ ಹೇಳಿದ್ದಾರೆ.

ಶ್ಯಾಮಲಾ ಗೋಪಾಲನ್ ಯಾರು?

ಸ್ತನ ಕ್ಯಾನ್ಸರ್ ತಜ್ಞೆಯಾಗಿದ್ದ ಶ್ಯಾಮಲಾ ಗೋಪಾಲನ್ ಮೂಲತಃ ತಮಿಳುನಾಡಿನ ಚೆನ್ನೈನವರು. ಪೌಷ್ಟಿಕಾಂಶ ಮತ್ತು ಎಂಡೋಕ್ರಿನೋಲಜಿಯಲ್ಲಿ ಡಾಕ್ಟರೇಟ್ ಪಡೆಯಲು ಅವರು 19 ನೇ ವಯಸ್ಸಿನಲ್ಲಿ ಭಾರತದಿಂದ ವಲಸೆ ಬಂದರು. ಮೇನಲ್ಲಿ ಏಷ್ಯನ್ ಪೆಸಿಫಿಕ್ ಅಮೆರಿಕನ್ ಇನ್ಸ್ಟಿಟ್ಯೂಟ್ ಫಾರ್ ಕಾಂಗ್ರೆಷನಲ್ ಸ್ಟಡೀಸ್ ಜೊತೆಗಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲಾ, ದಕ್ಷಿಣ ಏಷ್ಯಾದ ಹಿನ್ನೆಲೆ ಹೊಂದಿರುವವರಿಗೆ ಗೊತ್ತಿರುತ್ತದೆ, ಬಹಳ ಮುಂಚೆಯೇ ನನ್ನ ಅಮ್ಮ ಭಾರತದಿಂದ ಅಮೆರಿಕಕ್ಕೆ ವಲಸೆ ಬಂದವರಲ್ಲಿ ಒಬ್ಬರು ಎಂದು ಹೇಳಿದ್ದಾರೆ.

ಶ್ಯಾಮಲಾ ಅವರು ನಾಗರಿಕ ಹಕ್ಕುಗಳ ಚಳವಳಿಯ ಸಮಯದಲ್ಲಿ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದ ಆಫ್ರೋ-ಜಮೈಕಾದ ಡೊನಾಲ್ಡ್ ಹ್ಯಾರಿಸ್ ಅವರನ್ನು ಭೇಟಿಯಾದರು. ಅವರು 1963 ರಲ್ಲಿ ಇವರ ವಿವಾಹ ನಡೆದಿದ್ದು, ಈ ದಾಂಪತ್ಯದಲ್ಲಿ ಹುಟ್ಟಿದ ಇಬ್ಬರು ಹೆಣ್ಣುಮಕ್ಕಳೇ ಕಮಲಾ ಮತ್ತು ಅವಳ ತಂಗಿ ಮಾಯಾ. ಡೊನಾಲ್ಡ್ ಹ್ಯಾರಿಸ್ ಈಗ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಎಮೆರಿಟಸ್ ಆಗಿದ್ದಾರೆ. ಸ್ತನ ಕ್ಯಾನ್ಸರ್ ಸಂಶೋಧನೆಗೆ ಗಮನಾರ್ಹ ಕೊಡುಗೆ ನೀಡಿದ ಶ್ಯಾಮಲಾ 2009 ರಲ್ಲಿ ವಿಧಿವಶರಾಗಿದ್ದಾರೆ.

ಇದನ್ನೂ ಓದಿ: ಭಾರತ ಮತ್ತು ಅಮೆರಿಕ ಮಾತ್ರ ವಿಶ್ವಕ್ಕೆ ಶಾಂತಿ, ಸಮೃದ್ಧಿ, ಸ್ಥಿರತೆ ತರಲು ಸಾಧ್ಯ: ರಾಜನಾಥ್ ಸಿಂಗ್

ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್, ಯುಎಸ್ ಸೆನೆಟರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತನ್ನ ಮಗಳ ಪದೋನ್ನತಿಯನ್ನು ಶ್ಯಾಮಲಾ ನೋಡದೇ ಇದ್ದರೂ, ಕಮಲಾ ಹ್ಯಾರಿಸ್ ತನ್ನ ಪ್ರಯಾಣದ ಹಿಂದಿನ ಪ್ರೇರಕ ಶಕ್ತಿ ತನ್ನ ಅಮ್ಮ ಎಂದು ಹೇಳುತ್ತಾರೆ.

ಆದಾಗ್ಯೂ, ಸ್ಯಾನ್ ಫ್ರಾನ್ಸಿಸ್ಕೊ ಡಿಸ್ಟ್ರಿಕ್ಟ್ ಅಟಾರ್ನಿಗಾಗಿ ಹ್ಯಾರಿಸ್ ಅವರ ಮೊದಲ ರಾಜಕೀಯ ಪ್ರಚಾರದ ಸಮಯದಲ್ಲಿ ಶ್ಯಾಮಲಾ ಗೋಪಾಲನ್ ಪ್ರಬಲ ಬೆಂಬಲಿಗರಾಗಿದ್ದರು. ಅವರು ಪ್ರತಿ ವಾರಾಂತ್ಯವನ್ನು ಪ್ರಚಾರದ ಪ್ರಧಾನ ಕಚೇರಿಯಲ್ಲಿ ಕಳೆಯುತ್ತಿದ್ದರು ಎಂದು ಅಮೆರಿಕದ ಮಾಧ್ಯಮಗಳು ಹೇಳಿವೆ.

ವಿಚ್ಛೇದನದ ನಂತರ, ಶ್ಯಾಮಲಾ ಅವರು ಕಮಲಾ ಮತ್ತು ಮಾಯಾ ಅವರನ್ನು ಬೆಳೆಸಿದರು. ಕಮಲಾ ಅವರು 2019 ರಲ್ಲಿ ಪ್ರಕಟಗೊಂಡ ತಮ್ಮ  ಪುಸ್ತಕ “ದಿ ಟ್ರೂತ್ಸ್ ವಿ ಹೋಲ್ಡ್” ನಲ್ಲಿ ಅಮ್ಮ ಆಗಾಗ್ಗೆ ನಮ್ಮನ್ನು ಭಾರತ ಪ್ರವಾಸಕ್ಕೆ ಕರೆದೊಯ್ದು ತಮಿಳಿನಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು ಎಂದು ಬರೆದಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Fri, 23 August 24