ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಶ್ರೀಲಂಕಾದ ಹೊಸ ಸರ್ಕಾರವು ಬಿಕ್ಕಟ್ಟು ಶಮನಕ್ಕೆ ಹೊಸ ಕ್ರಮಗಳನ್ನು ಘೋಷಿಸಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗದ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಹೊಸದಾಗಿ ನಗದು ಮುದ್ರಿಸಲು ನಿರ್ಧರಿಸಿದೆ. ಇದರ ಜೊತೆಗೆ ಸರ್ಕಾರಿ ಸ್ವಾಮ್ಯದಲ್ಲಿರುವ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡುವ ಪ್ರಸ್ತಾವವನ್ನೂ ಗಂಭೀರವಾಗಿ ಪರಿಗಣಿಸಿದೆ. ಆರ್ಥಿಕ ಬಿಕ್ಕಟ್ಟು ಶಮನಕ್ಕೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ದೇಶದ ಜನರಿಗೆ ಮಾಹಿತಿ ನೀಡಲೆಂದು ದೂರದರ್ಶನದಲ್ಲಿ ಭಾಷಣ ಮಾಡಿದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ, ‘ಕಳೆದ ಮಾರ್ಚ್ಗೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ವಿಮಾನಯಾನ ಸಂಸ್ಥೆಯು 45 ಶತಕೋಟಿ ಶ್ರೀಲಂಕಾ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ ಎಂದು ಹೇಳಿದರು.
‘ಒಮ್ಮೆಯೂ ವಿಮಾನದಲ್ಲಿ ಹೆಜ್ಜೆ ಇರಿಸದ ದೇಶದ ಕಡುಬಡವರು ಈ ನಷ್ಟ ಭರಿಸಬೇಕು ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗಾಗಿ ಸಂಸ್ಥೆಯ ಖಾಸಗೀಕರಣದ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ತಿಳಿಸಿದರು.
ನೌಕರರ ವೇತನ ಪಾವತಿಗಾಗಿ ನಗದು ಮುದ್ರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಈಗಾಗಲೇ ಜರ್ಝರಿತವಾಗಿರುವ ಆರ್ಥಿಕತೆಯ ಮೇಲೆ ಇನ್ನಷ್ಟು ಪರಿಣಾಮ ಉಂಟಾಗಬಹುದು. ದೇಶದಲ್ಲಿ ಪ್ರಸ್ತುತ ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಇಂಧನ ಸಂಗ್ರಹವಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೂರು ಹಡಗುಗಳನ್ನು ತರಿಸಲು ಮುಕ್ತ ಮಾರುಕಟ್ಟೆಯ ಮೂಲಕ ಒಂದಿಷ್ಟು ಡಾಲರ್ ಸಂಗ್ರಹಿಸಲು ಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಬದುಕಿಗೆ ಮುಂದಿನ ಒಂದೆರೆಡು ತಿಂಗಳು ಅತ್ಯಂತ ಸವಾಲಿನಿಂದ ಕೂಡಿರುತ್ತದೆ. ಬಿಕ್ಕಟ್ಟು ಶಮನಕ್ಕೆ ದಾರಿ ಕಂಡುಕೊಳ್ಳಲು ಸಂಸತ್ ಅಧಿವೇಷನ ಕರೆಯಬೇಕು ಅಥವಾ ಸರ್ವಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಸಲಹೆ ಮಾಡಿದರು. ಶ್ರೀಲಂಕಾದಲ್ಲಿ ಈ ಮೊದಲು ಮಂಡನೆಯಾಗಿದ್ದ ‘ಅಭಿವೃದ್ಧಿ’ ಬಜೆಟ್ಗೆ ಪ್ರತಿಯಾಗಿ ‘ಪರಿಹಾರ’ ಬಜೆಟ್ ಮಂಡಿಸುವುದಾಗಿ ರಾನಿಲ್ ವಿಕ್ರಮಸಿಂಘೆ ಘೋಷಿಸಿದರು. ವಿತ್ತ ವಿಧೇಯಕದ ಮೊತ್ತವನ್ನು ಈ ಹಿಂದಿನ 3 ಶತಕೋಟಿ ಶ್ರೀಲಂಕಾ ರೂಪಾಯಿಯಿಂದ 4 ಶತಕೋಟಿ ಶ್ರೀಲಂಕಾ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವವನ್ನು ಸಚಿವ ಸಂಪುಟವು ಸಂಸತ್ತಿನ ಎದುರು ಇಡಲಿದೆ. ಶ್ರೀಲಂಕಾದ ವಿತ್ತೀಯ ಕೊರತೆಯು ಶೇ 13ರ ಪ್ರಮಾಣಕ್ಕೆ ಮುಟ್ಟುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾದ ಶ್ರೀಲಂಕಾದ ಜನರು ನಡೆಸುತ್ತಿದ್ದ ಪ್ರತಿಭಟನೆಯ ಮೇಲೆ ಹಿಂದಿನ ಪ್ರಧಾನಿ ಮಹಿಂದಾ ರಾಜಪಕ್ಸ ಬೆಂಬಲಿಗರು ದಾಳಿ ನಡೆಸಿದ್ದರು. ನಂತರ ಶ್ರೀಲಂಕಾದ ವಿವಿಧೆಡೆ ಹಿಂಸಾಚಾರ ಭುಗಿಲೆದ್ದಿತ್ತು. ಜನರ ಆಕ್ರೋಶಕ್ಕೆ ಮಣಿದಿದ್ದ ಮಹಿಂದಾ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಅಧ್ಯಕ್ಷ ಗೊಟಬಾಯ ರಾಜಪಕ್ಸ ಆಹ್ವಾನದ ಮೇರೆಗೆ ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ತಾಜಾ ಸುದ್ದಿಗೆ ಲಿಂಕ್ ಕ್ಲಿಕ್ ಮಾಡಿ
Published On - 11:30 am, Tue, 17 May 22